ಬೆಂಗಳೂರು ನಗರ ಜಿಲ್ಲೆ, ಸೆಪ್ಟೆಂಬರ್ 11 (ಕರ್ನಾಟಕ ವಾರ್ತೆ):  ಜನ ಸಾಮಾನ್ಯರಲ್ಲಿ ವಿಶೇಷವಾಗಿ ಯುವಕರಿಗೆ ಪ್ರಜಾಪ್ರಭುತ್ವದ ಮಹತ್ವ ಹಾಗೂ ಜವಾಬ್ದಾರಿ ಕುರಿತು ಅರಿವು ಮೂಡಿಸಲು ಸೆಪ್ಟೆಂಬರ್ 15 ರಂದು ‘ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 51 ಕಿ.ಮೀ ಉದ್ದದ ಸುಮಾರು 50  ಸಾವಿರ ಜನರು ಪಾಲ್ಗೊಳ್ಳುವ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಕೊಡಬೇಕು  ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ ಕರೆ ಕೊಟ್ಟಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ  ಅಂಗವಾಗಿ ಹಮ್ಮಿಕೊಳ್ಳಲಾಗುವ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ಬಾರಿ ರಾಜ್ಯಾದ್ಯಂತ, ಸಂವಿಧಾನ ರಥಯಾತ್ರೆ ಮತ್ತು ಸಂವಿಧಾನ ಪೀಠಿಕೆ ಓದುವ ಮೂಲಕ ಸಂವಿಧಾನ ಅರಿವು ಮೂಡಿಸಿ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು. ಈ ಬಾರಿಯೂ ಈ ದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬೀದರ್ ರಾಜ್ಯದಿಂದ ಚಾಮರಾಜನಗರ ವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಮಾನವ ಸರಪಳಿ ರೂಪಿಸುವ ಮೂಲಕ ವಿಶೇಷವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ವ ಸಹಾಯ ಸಂಘಗಳು,  ಶಾಲಾ ಕಾಲೇಜು ವಿದ್ಯಾರ್ಥಿಗಳು, ಸೇರಿ ಸುಮಾರು 50 ಸಾವಿರಕ್ಕು ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ 51 ಕಿ.ಮೀ ಮಾರ್ಗದಲ್ಲಿ ಮಾನವಸರಪಳಿ ನಿರ್ಮಿಸಲಾಗುತ್ತಿದೆ. ಸರಪಳಿಯ ಆರಂಭದಿಂದ  ಪ್ರತಿ  100 ಮೀಟರ್ ಗೆ  ಒಬ್ಬ ಶಿಕ್ಷಕರನ್ನು ನೇಮಿಸಿ,  ಪ್ರತಿಯೊಂದು ಕಿಲೋಮೀಟರ್ ಗೆ  ತಾಲ್ಲೂಕು ಮಟ್ಟದ ಅಧಿಕಾರಿ  ಹಾಗೂ ಪ್ರತಿ ಎರಡು ಕಿಲೋಮೀಟರ್ ಗೆ ಓರ್ವ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೇಮಿಸಲಾಗಿದೆ ಎಂದರು.           

            ಹೊಸಕೋಟೆ ಟೋಲ್ ರಸ್ತೆಯಿಂದ ಪ್ರಾರಂಭಿಸಿ, ಕೆ.ಆರ್.ಪುರಂ, ಇಂದಿರಾನಗರ, ಎಂ.ಜಿ.ರಸ್ತೆ, ವಿಧಾನಸೌಧ, ಮೈಸೂರು ರಸ್ತೆ, ನಾಯಂಡಹಳ್ಳಿ ಮತ್ತು ಕುಂಬಳಗೋಡು ಮಾರ್ಗವಾಗಿ ಹೆಜ್ಜಾಲದವರೆಗೆ ಸುಮಾರು 51 ಕಿ.ಮೀ ವರೆಗೂ ಮಾನವ ಸರಪಳಿಯನ್ನು ನಿರ್ಮಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು https://democracydaykarnataka.in ನಲ್ಲಿ ನೋಂದಾಯಿಸಿಕೊಂಡು ಸರ್ಟಿಫಿಕೇಟ್ ಕೂಡ ಪಡೆಯಬಹುದು. ಇದೊಂದು ವಿನೂತನ  ಪ್ರಯತ್ನವಾಗಿದ್ದು ವಿಶ್ವ ದಾಖಲೆ ನಿರ್ಮಿಸಲು ಉದ್ದೇಶಿಸಿದೆ ಎಂದರು.

ಅಂದು ಬೆಳಿಗ್ಗೆ 8.30 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 9 ಗಂಟೆಗೆ ಸಂವಿಧಾನದ ಬಗ್ಗೆ ಅರಿವು ಮತ್ತು ಸಂವಿಧಾನದ ಪೀಠಿಕೆ ಓದುವ ಕಾರ್ಯ ನಡೆಯಲಿದೆ. 9.30ಕ್ಕೆ ಸರಿಯಾಗಿ ಏಕಕಾಲಕ್ಕೆ ರಾಜ್ಯಾದ್ಯಂತ ಬೀದರ್ ನಿಂದ ಚಾಮರಾಜನಗರ ಜಿಲ್ಲೆಯವರೆಗೂ ಮಾನವ ಸರಪಳಿ ನಿರ್ಮಿಸಲಾಗುವುದು. ಮಾನವ ಸರಪಳಿಯ ಮಾರ್ಗದಲ್ಲಿಯೇ  ಅರಣ್ಯ ಇಲಾಖೆಯಿಂದ ವಿತರಿಸಲಾಗುವ  ಸುಮಾರು ಹತ್ತು ಲಕ್ಷ ಸಸಿಗಳನ್ನು ರಾಜ್ಯಾದ್ಯಂತ ನೆಡಲಾಗುವುದು ಎಂದು  ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here