ತಿಮ್ಮಾಪುರ, ರಂಗಂಪೇಟ, ಸತ್ಯಂಪೇಟ, ರುಕ್ಕುಂಪೇಟ, ದೇವಳಗುಡ್ಡ, ಹಸನಾಪುರ ಈ ಊರುಗಳು ಸುರಪುರದ ಸುತ್ತಮುತ್ತ ದ್ರಾಕ್ಷಿ ಗೊಂಚಲಿನಂತೆ ಹಬ್ಬಿಕೊಂಡ ಹಳ್ಳಿಗಳು. ಅಂದಿನ ಸುರಪುರ ಅರಸರ ಕಾಲದ ತಿಮ್ಮಮ್ಮ, ರಂಗಮ್ಮ, ಸತ್ಯಮ್ಮ, ರುಕ್ಕಮ್ಮ ಎಂಬ ಮಹಾ ಮಹಿಳೆಯರ ಹೆಸರುಗಳೇ ಈ ಕಾಲದ ಅವರ ಹೆಸರಿನ ಈ ಹಳ್ಳಿಗಳೆಂಬುದು ಐತಿಹ್ಯ.

ಸಗರನಾಡು ಹೆಸರಿನ ಸುರಪುರ ಸೀಮೆಯಲ್ಲಿ ನೀವು ಕನ್ನಡ ಬಾರದಿರುವವರನು ಬೇಕಾದರೆ ಹುಡುಕಬಹುದು. ಆದರೆ ಉರ್ದು ಬಾರದಿರುವ ಕನ್ನಡಿಗರನು ಹುಡುಕುವುದು ಕಡುಕಷ್ಟ. ಉರ್ದುವಿನ ಪಾರಮ್ಯ ಸುರಪುರ ಸೀಮೆಗೆ ಮಾತ್ರ ಸೀಮಿತವಲ್ಲ. ಬಹುಪಾಲು ಕಲ್ಯಾಣ ಕರ್ನಾಟಕ ಪರಿಸರದ ಭಾಷೆಯೇ ಅದಾಗಿದೆ. ಆದರೆ ಉರ್ದು ಎಂಬುದು ಮುಸ್ಲಿಮರ ಭಾಷೆಯೆಂಬ ಕೆಲವರ ತಪ್ಪು ತಿಳಿವಳಿಕೆ. ನಮ್ಮ ನಡುವಿನ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ವಾರಗೆಯವರಾಗಿದ್ದ ಧರ್ಮಸಿಂಗ್, ವೀರೇಂದ್ರ ಪಾಟೀಲ, ವೈಜನಾಥ ಪಾಟೀಲ, ವಿಶ್ವನಾಥ ರೆಡ್ಡಿ ಮುದ್ನಾಳ ಇನ್ನೂ ಅನೇಕ ಮಂದಿ ಮುತ್ಸದ್ದಿಗಳು ಉರ್ದುವಿನಲ್ಲಿ ನಿರರ್ಗಳವಾಗಿ ಮಾತಾಡುವುದಲ್ಲದೇ ಪರಿಣತಿ ಹೊಂದಿದವರು. ಶಾಂತರಸ, ಸಿದ್ದಯ್ಯ ಪುರಾಣಿಕ, ದತ್ತಾತ್ರೇಯ ಅವರಾದಿ, ದೇವೇಂದ್ರಕುಮಾರ ಹಕಾರಿ, ಚಂದ್ರಕಾಂತ ಕುಸನೂರ, ಪಂಚಾಕ್ಷರಿ ಹಿರೇಮಠ, ಭೀಮಸೇನರಾವ್ ತವಗ, ಎ. ಕೃಷ್ಣ, ಪ್ರೊ. ಬಿ. ಆರ್. ಸುರಪುರ ಹೀಗೆ ಸಾಲು ಸಾಲು ಸಾಹಿತಿಗಳು ಉರ್ದುವಿನಲ್ಲಿ ಪ್ರಭುತ್ವ ಪಡೆದವರು.

ಸುರಪುರವು ಸ್ವಾತಂತ್ರ್ಯಯೋಧ, ಅರಸು ವೆಂಕಟಪ್ಪನಾಯಕರ ನಾಡು. ಅದು ಕಸುವುಭರಿತ ಮಸಬಿನ ನೆಲ. ಈಗೀಗ ಅಲ್ಲಿ ಕಲ್ಲುಗುಡ್ಡಗಳನೇ ಛೇದಿಸುತ್ತ ಮನೆ, ಮಳಿಗೆಗಳೇ ಹುಟ್ಟಿಕೊಳ್ಳುತ್ತಲಿವೆ. ತನ್ಮೂಲಕ ಗುಡ್ಡದಂಚಿನ ದೇವಳಗುಡ್ಡದ ಊರುಗಳ ಮೇಲಿನ ಸಾಂಸ್ಕೃತಿಕ ಆಕ್ರಮಣವೇ ಅದೆನಿಸಿದೆ. ನಾನೀಗ ಹೇಳಬೇಕಿರುವುದು ಸುರಪುರ ಸೀಮೆಯ ರಂಗಂಪೇಟೆ ತಿಮ್ಮಾಪುರಗಳೆಂಬ ಕಳ್ಳುಬಳ್ಳಿಯಂಥ ಊರು ಪರಿಸರದ ಉರ್ದು ಕನ್ನಡ ಸಾಮ್ರಾಜ್ಯದ ಸಾಂಸ್ಕೃತಿಕ ಸಮನ್ವಯತೆ ಕುರಿತು.

ಅಲ್ಲಿರುವವರು ಮುಕ್ಕಾಲುಪಾಲು ಆಗರ್ಭ ಬಡತನದ ಮುಸ್ಲಿಮರು. ಅಂತಹ ಆಗರ್ಭ ಬಡತನದ ನಡುವೆ ಓಣಿಗೋರ್ವ ಆಗರ್ಭ ಸಿರಿತನದ ಉರ್ದು ಗಝಲ್ ಘಮಲು ಚೆಲ್ಲುವ ಆಶುಕವಿಗಳು. ಇತಿಹಾಸದ ಉದ್ದಕ್ಕೂ ಅಲ್ಲಿನ ಸಾಮಾಜಿಕ ಬಂಧುತ್ವ, ಭಾಷಾ ಭಾವೈಕ್ಯತೆಗೆ ಮುಕ್ಕಾಗಲಿ, ಮುಪ್ಪಾಗಲಿ ಇಲ್ಲವೇ ಇಲ್ಲ. ಹಿಂದು ಮುಸ್ಲಿಮರೆಂಬ ಧರ್ಮ ಭೇದಕ್ಕೆ ಬದಲು ಕನ್ನಡ ಉರ್ದು ಪ್ರಭೇದಗಳ ಸಾಂಸ್ಕೃತಿಕ ಅಸ್ಮಿತೆ. ಉರ್ದು ಭಾಷಿಕ ಮುಸ್ಲಿಮರಷ್ಟೇ ಸಾಮರ್ಥ್ಯದ ಕನ್ನಡ ಮಾತೃಭಾಷೆಯ ಹಿಂದುಗಳು ಉರ್ದುವಿನ ಪಂಡಿತರು. ಕನ್ನಡದಲ್ಲಿ ಫಕೀರಪ್ರಜ್ಞೆಯ ಸೂಫಿ ತತ್ವಾನುಭಾವದಂತಹ ಸಾಹಿತ್ಯ ರಚಿಸುವ ಮುಸ್ಲಿಮರು ಕೆಲವರು. ಹೀಗೆ ಇಲ್ಲಿನ ಉರ್ದು ಮತ್ತು ಕನ್ನಡಗಳೆರಡರದು ಬೇರ್ಪಡಿಸಲಾಗದ ಗಂಡಭೇರುಂಡ ಸಂಬಂಧ.

ತಿಮ್ಮಾಪುರದವರಾದ ಡಾ. ಕೆ.ಮುದ್ದಣ್ಣ ವೃತ್ತಿಯಿಂದ ಸರಕಾರಿ ವೈದ್ಯರಾಗಿದ್ದವರು. ಆದರೆ ಅವರು ಪ್ರವೃತ್ತಿಯಿಂದ ಉರ್ದು ಸಾಹಿತ್ಯದ ವಿದ್ವಾಂಸರು. ಇಂಗ್ಲಿಷ್, ಹಿಂದಿ, ಸಂಸ್ಕೃತ ಸಾಹಿತ್ಯದ ಕೃಷಿಕರು. ಪ್ರಬುದ್ಧ ವಿಮರ್ಶಕರು. ಹಾಗೆಯೇ ರೇವಣಸಿದ್ದಯ್ಯ ಸ್ವಾಮಿ, ಮಹಾದೇವಪ್ಪ ಕಡೇಚೂರು, ಚಿದಾನಂದ ಭಟ್, ಪ್ರಹ್ಲಾದ ರಾವ್‌ ಕುಳಗೇರಿ, ಪ್ರಭುರಾವ್ ಮಾಸ್ತರರು. ಅಂದಹಾಗೆ ಕುರಾನ್ ಗ್ರಂಥಗಳಲ್ಲಿನ ಧಾರ್ಮಿಕ ಕ್ಲಿಷ್ಟ ಪದಗಳು ಮುಸ್ಲಿಮರಿಗೇ ಅರ್ಥವಾಗದಿದ್ದಾಗ ಪ್ರಭುರಾವ್ ಮಾಸ್ತರರ ಬಳಿಬಂದು ಬಗೆ ಹರಿಸಿಕೊಳ್ಳುತ್ತಿದ್ದರು.

ಈ ಊರಲ್ಲಿ ಎಂಬತ್ತು ವರ್ಷಗಳ ಹಿಂದೆಯೇ (೧೯೪೩) ಕನ್ನಡ ಸಾಹಿತ್ಯ ಸಂಘವನ್ನು ಕಟ್ಟಿ ಬೆಳೆಸಿ ಒಂದೆರಡು ಅವಧಿಗೆ ಮುಸ್ಲಿಮರನ್ನೇ ಸಂಘದ ಕಾರ್ಯದರ್ಶಿ ಮಾಡಿದವರಿದ್ದಾರೆ. ಅವರೆಂದರೆ ವಣಿಕ ಎಂ. ಆರ್. ಬುದ್ದಿವಂತ ಶೆಟ್ಟಿ ಮತ್ತು ಸ್ವಾತಂತ್ರ್ಯ ಪೂರ್ವದ ಮುಸ್ಲಿಮರ ನಂಬಿಕೆಗೆ ಭಾಜನರಾದ ಅಪ್ಪಟ ಗಾಂಧೀವಾದಿ ಬೋಡಾ ರಾಮಣ್ಣ. ರಾಮಣ್ಣ ಹೆಸರಿನ ಕನ್ನಡ ಸಾಹಿತ್ಯ ಸಂಘದ ಸ್ಮಾರಕ ಭವನ ಮತ್ತು ಭವನದ ಮುಂದಿರುವ ಬುದ್ದಿವಂತ ಶೆಟ್ಟರ ಪುತ್ಥಳಿ ಅದೆಲ್ಲದಕೆ ಸಾಕ್ಷಿಪ್ರಜ್ಞೆಯಾಗಿವೆ. ಅವರು ಕನ್ನಡದ ಜತೆಗೆ ಉರ್ದು ಸಾಹಿತ್ಯದ ಅನನ್ಯ ಪ್ರೀತಿ ಮೆರೆದವರು. ಕನ್ನಡ ಸಾಹಿತ್ಯ ಸಂಘ ಅಭೂತಪೂರ್ವ ಎಂಬಂತೆ ನವರಾತ್ರಿ ಉತ್ಸವಗಳನ್ನು ಆಚರಿಸುತ್ತಾ ಬಂದಿದೆ. ದ. ರಾ. ಬೇಂದ್ರೆ, ಬಿ. ಎಂ. ಶ್ರೀಕಂಠಯ್ಯ, ವಿ. ಸೀತಾರಾಮಯ್ಯ, ಮಾಸ್ತಿ, ಅ. ನ. ಕೃಷ್ಣರಾಯ, ಹಾ. ಮಾ. ನಾಯಕ, ತ.ರಾ.ಸು. ಮುಂತಾದ ಅಗ್ರಗಣ್ಯ ಸಾಹಿತಿಗಳು ಕನ್ನಡ ಸಾಹಿತ್ಯ ಸಂಘದ ಅನೇಕ ಕಾರ್ಯಕ್ರಮಗಳಿಗೆ ಆಗಮಿಸಿ ಮೆಚ್ಚುಗೆ ತೋರಿದ ದಾಖಲೆಗಳಿವೆ.

ಈ ಊರಿನ ಸರಕಾರಿ ಮಾಧ್ಯಮಿಕ ಶಾಲೆಯ ಮಾರ್ತಾಂಡರಾವ್, ಮಲ್ಲಾರಿರಾವ್, ಮುದ್ದುರಂಗಾಚಾರ್ ಮಾಸ್ತರರು ಉರ್ದು ಮಾಧ್ಯಮದಲ್ಲೇ ವಿಜ್ಞಾನ, ಗಣಿತ, ಇತಿಹಾಸ, ಭೂಗೋಳ ಬೋಧಿಸಿದವರು. ಅದೇರೀತಿ ಸಂಸ್ಕೃತದ ಸ್ನಾತಕೋತ್ತರ ಪದವಿಯನ್ನು ತಿಮ್ಮಾಪುರದ ಬಸೀರ್ ಅಹ್ಮದ್ ಪ್ರಥಮ ದರ್ಜೆ ಪಡೆದು ಪಾಸಾದವರು. ಇಲ್ಲಿನ ಕನ್ನಡ – ಉರ್ದು ಪ್ರೇಮ ಜಾತಿ, ಮತ, ಧರ್ಮಾತೀತವಾದುದು.

ಹೀಗೆ ಸುರಪುರ ನಾಡು ಸಾಂಸ್ಕೃತಿಕ ಸಮನ್ವಯತೆಯ ನಿಡಿದಾದ ಪರಂಪರೆಯನ್ನೇ ಕನ್ನಡನಾಡಿಗೆ ನೀಡಿದೆ. ಅದರಲ್ಲೂ ವಿಶೇಷವಾಗಿ ಉರ್ದು ಕಾವ್ಯಲೋಕದ ಸಮೃದ್ಧ ಮಂಥನದಂತೆ “ಮುಶಾಯಿರಾ” ಹಬ್ಬಗಳೇ ಜರುಗುತ್ತವೆ. ತಿಮ್ಮಾಪುರ – ರಂಗಂಪೇಟೆ ಅವಳಿ ಊರಲ್ಲಿ ರಾಷ್ಟ್ರೀಯ ಮಟ್ಟದ ಮುಶಾಯಿರಾ ಎಂಬ ಗಝಲ್ ಪರಿಶೆಯ ಸಂಭ್ರಮ. ಅದು ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ದಾಖಲಿಸಲೇ ಬೇಕಾದುದು. ಅದಕ್ಕೆಲ್ಲ ಹಿಂದಿನ ಶಾಸಕರಾಗಿದ್ದ ರಾಜಾ ಪಿಡ್ಡನಾಯಕ ಮತ್ತು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರ ಯಥೇಚ್ಛ ಪ್ರೀತಿ, ಪ್ರೋತ್ಸಾಹ, ಉತ್ತೇಜನಗಳು ಕಾರಣವೆಂದು ಸ್ಥಳೀಯ ಹಿರಿಯ ಸಾಹಿತಿ ಬೂದಿಹಾಳ ಶಾಂತಪ್ಪ ಅಂಬೋಣ.

ಈ ಪುಟ್ಟ ಊರಿಗೆ ಹತ್ತಿರದ ಹೈದರಾಬಾದ್, ದೂರದ ದೆಹಲಿ, ಮುಂಬಯಿ, ಜಲಂದರ್, ಕಾನ್ಪುರ, ಉತ್ತರ ಪ್ರದೇಶಗಳಿಂದ ಕವಿಗಳು, ಕವಯತ್ರಿಯರು ಆಗಮಿಸಿ ಇಡೀ ರಾತ್ರಿ ಮುಶಾಯಿರಾ (ಕವಿ ಸಮ್ಮೇಳನ) ದಲ್ಲಿ ಸಂಭ್ರಮಿಸುತ್ತಾರೆ. ಅಲ್ಲಿ ಭಾಷಣಕ್ಕೆ ಅವಕಾಶವಿಲ್ಲ. ಪರಂತು ಮುಶಾಯಿರಾ ನಿರೂಪಣೆ ಮಾಡುವುದು ಪ್ರತಿಷ್ಠೆಯ ವಿಷಯ. ದೆಹಲಿಯ ಅಭಿಜಾತ ಉರ್ದುವಿನಿಂದ ಹಿಡಿದು, ತಿಮ್ಮಾಪುರದ ದೇಸಿಯ ದಖನಿ ಉರ್ದು ಗಝಲ್, ಶಾಯರಿಗೂ ಅಲ್ಲಿ ವಿಪುಲ ಅವಕಾಶ. ವಿಶೇಷವೆಂದರೆ ಇದೇ ಊರಿನ ಮಂಜೂರ್ ಅಹ್ಮದ್ ತನಹಾ ತಿಮ್ಮಾಪೂರಿ ಮತ್ತು ಮುಬಾರಕ್ ಅಹ್ಮದ್ ಏಜಾಜ್ ಅವರು ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಉರ್ದುಕವಿಗಳು. ಏಜಾಜ್ (ಪವಾಡ) ಕಾವ್ಯನಾಮದ ಮುಬಾರಕ್ ಅಹ್ಮದರು ಅಜಮಾಸು ಹತ್ತು ಸಾವಿರದಷ್ಟು ಗಝಲ್ ರಚಿಸಿದ ಹೆಗ್ಗಳಿಕೆ.

ತನಹಾ (ಏಕಾಂಗಿ) ಕಾವ್ಯನಾಮದ ಮಂಜೂರ್ ಅಹ್ಮದರು ಅಂಬೇಡ್ಕರ್ ಕುರಿತು ಉರ್ದುವಿನಲ್ಲಿ ಮಹತ್ವದ ಕೃತಿ ಸಂಪಾದಿಸಿದ್ದಾರೆ. ಇವರ ಶಾಯರಿಗಳು ಕನ್ನಡ, ಇಂಗ್ಲಿಷ್ ಭಾಷೆಗೂ ತರ್ಜುಮೆಯಾಗಿವೆ. ಛಂದೋಬಂಧದ ಇವರ ಉರ್ದು ಕೃತಿಗಳನ್ನು ಲಾಹೋರ್ ಮತ್ತು ಜರ್ಮನಿ ಪ್ರಕಾಶನ ಸಂಸ್ಥೆಗಳು ಪ್ರಕಟ ಪಡಿಸಿವೆಯೆಂದು ಹೈಕೋರ್ಟ್ ಹಿರಿಯ ವಕೀಲರಾದ ಜೆ.ಆಗಸ್ಟಿನ್ ಹೇಳುತ್ತಾರೆ. ಉರ್ದು ತ್ರಿಪದಿಗಳೇ ಪ್ರಪಂಚದ ಮೊದಲ ತ್ರಿಪದಿ ಪ್ರಕಾರಗಳೆಂದು ಬೀಗುತ್ತಿದ್ದ ಉತ್ತರದ ವಿದ್ವಾಂಸರಿಗೆ ಸವಾಲಿನ ಉತ್ತರ ಕೊಟ್ಟವರು ತನಹಾ. ಕನ್ನಡದ ಸರ್ವಜ್ಞ ಮತ್ತು ಆತನ ತ್ರಿಪದಿಗಳ ಕಾಲ ಕುರಿತು “ಶಾಯರ್” ಎಂಬ ಉರ್ದು ನಿಯತಕಾಲಿಕಕ್ಕೆ ಮಂಜೂರ್ ಅಹ್ಮದ್ ಪ್ರತಿರೋಧದ ಲೇಖನ ಬರೆದು ಕನ್ನಡದ ಸ್ವಾಭಿಮಾನ ಮೆರೆದವರು. ಹೇಳಲೇಬೇಕಾದ ಮತ್ತೊಂದು ಮಹತ್ವದ ಸಂಗತಿ ಎಂದರೆ, ಇದೇ ಸಗರನಾಡಿಗೆ ಸೇರಿದ ಹಮಿದ್ ಅಲ್ಮಾಸ್ ಅವರು ಬಸವಣ್ಣನ ವಚನಗಳನ್ನು ಸೊಗಸಾದ ಉರ್ದುವಿಗೆ ತರ್ಜುಮೆ ಮಾಡಿದ್ದು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿವೆ.

ಈ ಕವಿಗಳ ಕಿರಿಯ ಸರೀಕರಲ್ಲಿ ಹೀರಾಲಾಲ ಜೋಶಿ, ವೆಂಕಟೇಶಗೌಡ, ಇಬ್ರಾಹಿಂ ಸಹೇರ್, ಜೋಹರ್ ತಿಮ್ಮಾಪೂರಿ, ಇಕ್ಬಾಲ್ ಅಹ್ಮದ್ ರಾಹಿ, ರಿಯಾಜ್ ಅಹ್ಮದ್ ಬೋಡೆ,‌ ಶರಣಪ್ಪ, ಫಜಲ್ ತಿಮ್ಮಾಪುರಿ, ಅಬ್ದುಲ್ ರಬ್ ಪ್ರಮುಖರು. ತದನಂತರದ ಯುವಕವಿಗಳ ಪಡೆಯೇ ಈ ಊರಲ್ಲಿದೆ. ಶಾಮ್ ಬೆನಗಲ್ ಪ್ರಣೀತ ರಂಗಕರ್ಮಿ ಮತ್ತು ಅವತ್ತಿನ ಕಾಲದ ಕನ್ನಡ, ಹಿಂದಿ ಸಿನೆಮಾ ನಟ ಕಂ ಥಿಯೇಟರ್ ಸೆಲೆಬ್ರಿಟಿಯೇ ಆಗಿದ್ದ ಅನಿಲ್ ಠಕ್ಕರ್, ಮಂಜೂರ್ ಅಹ್ಮದ್ ತನಹಾ ಅವರ ಖಾಸಾ ದೋಸ್ತ್. ಅಂತೆಯೇ ಅನಿಲ್ ಠಕ್ಕರ್ ಮತ್ತು ಅವರ ಆಪ್ತಮಿತ್ರೆಯಂತಿದ್ದ ಅಭಿನೇತ್ರಿ ಇಂದಿರಾ ಕದಂ ಜತೆ ಹತ್ತಾರು ಬಾರಿ ತನಹಾ ಅವರ ಮುಲಾಖತ್ತಿನ ಮಾತುಕತೆಗಾಗಿ ತಿಮ್ಮಾಪುರಕ್ಕೆ ಬಂದಿದ್ದಾರೆ. ಬಂದಾಗೆಲ್ಲ ಮಧುಬಟ್ಟಲಿನ ಸಂತೃಪ್ತ ‘ಮದ್ಯರಾತ್ರಿ’ಗಳನ್ನು ಸಂಭ್ರಮಿಸಿದ್ದಾರೆ. ಅವು ಗಝಲ್ ರಾತ್ರಿಯ ವಸ್ತಿಗಳು ಸಹ. ಮೂಲತಃ ಸಿಂಧ್ ಪ್ರಾಂತ್ಯದ ಅನಿಲ ಠಕ್ಕರಗೆ ಉರ್ದು ಮಾತಾಡಲು ಮಾತ್ರ ಬರ್ತಿತ್ತು. ಬರೆಯಲು ಬರುತ್ತಿರಲಿಲ್ಲ. ಅಂತೆಯೇ ಅವರ ಅನೇಕ ಉರ್ದು ನಾಟಕಗಳಿಗೆ ಲಿಪಿಕಾರನೇ ನಮ್ಮ ತನಹಾ ತಿಮ್ಮಾಪೂರಿ.

ತನಹಾ ಮತ್ತು ಏಜಾಜ್ ಅವರು ದೂರದ ಮುಂಬಯಿ, ಅಲಿಗಡ್, ದಿಲ್ಲಿ ಅಲ್ಲದೇ ಲಾಹೋರ್ ಮುಂತಾದೆಡೆ ಜರುಗಿದ ಮುಶಾಯಿರಾ ಸಮ್ಮೇಳನಗಳಿಗೆ ಆಹ್ವಾನಿತ ಶಾಯರ್ ಆಗಿದ್ದಾರೆ. ಐ.ಕೆ. ಗುಜ್ರಾಲ್ ಇವರನ್ನು ಆಹ್ವಾನಿಸಿದ್ದುಂಟು. ಹಾಗೆಯೇ ಅಲ್ಲಿನ ಕವಿಗಳು ಈ ಪುಟ್ಟ ಊರು ತಿಮ್ಮಾಪುರಕ್ಕೆ ಬಂದು ಗಝಲ್ ಗಳನ್ನು ಒಪ್ಪಿಸಿ ಘಮ ಘಮಿಸಿದ್ದಲ್ಲದೇ ಝಗಮಗಿಸಿದ ನಿದರ್ಶನಗಳಿವೆ. ಈ ಹಿಂದೆ ಕನ್ನಡ, ಹಿಂದಿ, ಉರ್ದು ಭಾಷೆಯ ಮುಶಾಯಿರಾ ಏರ್ಪಡಿಸುತ್ತಿದ್ದರು. ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಬದುಕಿರುವಷ್ಟು ಕಾಲ ಮುಶಾಯಿರಾದ ಮುಖ್ಯಅತಿಥಿ ಆಗಿರುತ್ತಿದ್ದುದನ್ನು ತಿಮ್ಮಾಪುರದ ಹಿರಿಯ ಉರ್ದುಕವಿ ಇಕ್ಬಾಲ್ ಅಹ್ಮದ್ ರಾಹಿ ಇವತ್ತಿಗೂ ಅಭಿಮಾನದಿಂದ ಸ್ಮರಿಸಿಕೊಳ್ಳುತ್ತಾರೆ.

ಕಳೆದ ವರ್ಷ ೨೦೨೩ರ ಜನವರಿ ೧೦ ರಂದು ತಿಮ್ಮಾಪುರದಲ್ಲಿ ಅಖಿಲ ಭಾರತ ಮಟ್ಟದ ಕುಲ್ ಹಿಂದ್ ಮುಶಾಯಿರಾ (ಕವಿ ಸಮ್ಮೇಳನ) ಜರುಗಿತು. ದೆಹಲಿಯ ಕವಯತ್ರಿ ಪ್ರೊ. ಕೃಷ್ಣಾ ಶರ್ಮಾ ದಾಮಿನಿ, ಮುಂಬೈನ ಕರೀಮುದ್ದೀನ್, ಲಖನೌದ ಫರೀದ್ ಅಹ್ಮದ್ ಫರೀದ್, ಜಲಂದರಿನ ಮಹೇಶ್ ಖೇರಾನ್ವಿ ಇವರೊಂದಿಗೆ ಹೈದರಾಬಾದ್ ಮತ್ತು ಸ್ಥಳೀಯ ಅನೇಕ ಕವಿಗಳು ಭಾಗವಹಿಸಿ ಇಡೀ ರಾತ್ರಿ ಗಝಲ್ ಪರಿಮಳ ಹರಡಿದರು.

ಪ್ರೀತಿ, ಪ್ರೇಮ, ಪ್ರಣಯ, ವಿರಹ ಮತ್ತು ಪ್ರಾಪಂಚಿಕ ಅಸ್ತಿತ್ವದ ನಿರಸನ ದೃಷ್ಟಿಕೋನಗಳೇ ಇವುಗಳ ಒಳಧ್ವನಿ. ಮುಖ್ಯವಾಗಿ ಗಝಲ್ ಪ್ರಸ್ತುತಿಯ ಪಂಚಿಂಗ್ ಶೈಲಿಯೇ ಅಮೋಘ. ಅಂತೆಯೇ ಅದು ಹದುಳ ಭಾವದ ದಿವ್ಯಾನುಭೂತಿ. ಬೆಳಗಿನ ಜಾವದವರೆಗೂ ಚಳಿಯನ್ನು ಲೆಕ್ಕಿಸದೇ ಚಿತ್ತವಿಟ್ಟು ಆನಂದಿಸುವ ಅಸಂಖ್ಯಾತ ಕೇಳುಗರೇ ಕವಿಗಳಿಗೆ ಮಹಾಸ್ಫೂರ್ತಿ. ಸುತ್ತಲ ಹಳ್ಳಿಗಳಿಂದಲೂ ಆಸಕ್ತರು ಬರುತ್ತಾರೆ. ರಾತ್ರಿಯೆಲ್ಲ ಚಹದಂಗಡಿಗಳು ಚಾಲೂ ಇರ್ತವೆ. ಕೇಳುಗರು ಮತ್ತೆ ಮತ್ತೆ ಚಹ ಕುಡಿದು ಬಂದು ಗಝಲ್ ಕೇಳುತ್ತಾರೆ. ಪ್ರಭುತ್ವ ಕುರಿತು ಝಳಪಿಸಿದ ಒಂದೆರಡು ಗಝಲ್ ಗಳನ್ನು ಕವಿ ಇಕ್ಬಾಲ್ ರಾಹಿ ನೆನಪಿಸಿದ್ದು ಹೀಗಿದೆ.

ತುಮ್ತೋ ಸಾರಾ ಮೈಖಾನಾ ಬೆಹ್ಕನೇ ಲಗೇ ಯಾರೋಂ/
ಹಮ್ ಪೀಕೇ ಬತಾತೆ ಜರಾ ಜಾಮ್ ಹಮೆ ದೇದೋ//
(ನೀವಂತೂ ಪಾನಮತ್ತರಾಗಿ ಮಧುಶಾಲೆಯಲ್ಲೇ ತೋಯ್ದಾಡುತಿರುವಿರಿ/)
(ಕುಡಿದು ತೋರಿಸುತ್ತೇವೆ ನಶೆಯ/ ಒಂದು
ಸಲ ಮಧುಗಿಲಾಸು ಕೊಟ್ಟು ನೋಡಿ//)

ಗಾಂಧೀ ಹಮ್ ಶರ್ಮಿಂದಾ ಹೈ/
ತೇರೇ ಕಾಥಿಲ್ ಜಿಂದಾ ಹೈ//
(ನಮಗೆ ನಾಚಿಕೆಯಾಗುತ್ತಿದೆ ಗಾಂಧೀ/
ಕೊಲೆಗಡುಕರಿನ್ನೂ ಜೀವಂತವಾಗಿದ್ದಾರೆ//)

ಹಾಗೆ ನೋಡಿದರೆ ಮುಶಾಯಿರಾ ಸಡಗರ ಸುರಪುರ ಅರಸರ ಕಾಲದಿಂದಲೂ ಸಾಗಿಬಂದ ಸಾಂಸ್ಕೃತಿಕ ಸಂಭ್ರಮ. ಸೊಗಸಾಗಿ ತಬಲಾ ನುಡಿಸುತ್ತಿದ್ದ ರಾಜಾ ಪಿಡ್ಡನಾಯಕರಂತೂ ಸಾಂಸ್ಕೃತಿಕ ಸಾಮ್ರಾಟರೇ ಆಗಿದ್ದರು. ನಾಲ್ಕು ವರ್ಷಗಳ ಕೆಳಗೆ ತೀರಿಹೋದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಸಾಂಸ್ಕೃತಿಕ ರಾಯಭಾರಿ ಅಂತಲೇ ಹೆಸರುವಾಸಿ ಆಗಿದ್ದವರು. ೨೦೨೩ ರ ಜನವರಿ ೫ ರಂದು ಅವರ ಪುತ್ಥಳಿ ಸುರಪುರದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಶತಮಾನೋತ್ಸವ ಸಂದರ್ಭದಲ್ಲಿ ಅನಾವರಣಗೊಂಡಿತು.

ಇತ್ತೀಚಿಗೆ ಸುರಪುರ ಸರಹದ್ದಿನ ಸಗರನಾಡು ತುಂಬಾ ಅನೇಕರು ಗಝಲ್ ಸಾಹಿತ್ಯ ರಚನೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಪ್ರಮುಖವಾಗಿ ಕುತುಬುದ್ದೀನ್ ಅಮ್ಮಾಪುರ, ನಬೀಲಾಲ ಮಕಾನದಾರ, ಮಹಾಂತೇಶ ಗೋನಾಲ, ಪಾರ್ವತಿ ದೇಸಾಯಿ, ಜ್ಯೋತಿ ದೇವಣಗಾಂವ, ಸಿದ್ದರಾಮ ಹೊನ್ಕಲ್, ರಾಠೋಡ್ ಇನ್ನೂ ಅನೇಕರು ಕನ್ನಡ ಗಝಲ್ ಕಾವ್ಯದ
ಮುಂಚೂಣಿಯಲ್ಲಿದ್ದಾರೆ. ಕೆಲವರು ಮುಶಾಯಿರಾಗಳಲ್ಲೂ ಭಾಗವಹಿಸಿ ಕನ್ನಡ ಉರ್ದು ಸಾಂಗತ್ಯದ ಸಮನ್ವಯತೆ ಸಾರಿದ್ದಾರೆ.

ನಿನ್ನ ಕಂಗಳಲಿ ಕಾಂತಿಯು ಹೇಗೆ ಮೂಡಿತು
ಹೇಳು ಆತ್ಮಸಖಿ.
ನಿನ್ನ ಮೊಗದಲಿ ನಗುವು ಹೇಗೆ ನಲಿದಾಡಿತು
ಹೇಳು ಆತ್ಮಸಖಿ.

ಪಂಚವಟಿಯ ಈ ನಿನ್ನ ಅನಾಥ ಆಲಯದ
ವಿಸ್ತಾರ ವಿಸ್ಮಯ
ಪಂಚವರ್ಣದ ಪ್ರಾಣಪಕ್ಷಿ ಏಕೆ ಹಾರಾಡಿತು
ಹೇಳು ಆತ್ಮಸಖಿ.
ಇವು ಇಲ್ಲಿನ ಗಝಲ್ ಕವಿ ನಬಿಲಾಲ ಮಕಾನದಾರರ ಕನ್ನಡ ಗಝಲಿನ ಆಯ್ದ ಸಾಲುಗಳು. ಉರ್ದು ಗಝಲ್ ಸಾಹಿತ್ಯದ ಛಂದಸ್ಸು ಪ್ರೇರಣೆಯ ಕನ್ನಡದ ಲಯಬದ್ಧ ಸಂವೇದನೆಗೆ ಇದು ಪುಟ್ಟ ಮಾದರಿ.

ಇಷ್ಟೇ ಆಗಿದ್ದರೆ ಸುರಪುರ ಸೀಮೆ ಮತ್ತದಕ್ಕೆ ತಳಕು ಹಾಕಿಕೊಂಡಿರುವ ತಿಮ್ಮಾಪುರ ಊರಿನ‌ ಕುರಿತು ಹೆಚ್ಚುಗಾರಿಕೆ ಅನಿಸದಿರಬಹುದು. ಸುರಪುರದ ಸೀಮೆ ನೂರಾರು ಕವಿಗಳ ಆಡುಂಬೊಲ ಆಗಿರುವಂತೆ ಸಾಮಾಜಿಕವಾಗಿ ಅನೇಕ ಪ್ರಸಿದ್ದರನ್ನು ಪಡೆದ‌ ಪ್ರದೇಶ. ದೇಸಿವೈದ್ಯ ಅಬ್ದುಲ್ ಹಕೀಂ, ಲಕ್ಷ್ಮಣ ವಿಭೂತಿಯವರಂತಹ ಅನೇಕ ಹಕೀಮರ ಊರು ತಿಮ್ಮಾಪುರ. ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಕ್ಯಾನ್ಸರ್ ತಜ್ಞ ಡಾ. ಮಾಜಿದ್ ತಾಳಿಕೋಟಿ ಇದೇ ಊರಿನವರು. ಅವರು ಕಳೆದ ಬಾರಿಯ ರಾಷ್ಟ್ರೀಯ ಮುಶಾಯಿರಾದ ಮುಖ್ಯ ಅತಿಥಿಯಾಗಿದ್ದರು.

ಖ್ಯಾತ ಕ್ರಿಕೆಟ್‌ ತಾರೆ ಯುವರಾಜ್ ಸಿಂಗ್ ಮರಳಿ ಪಿಚ್ ಗೆ ಬರಲು ಡಾ. ಮಾಜಿದ್ ತಾಳಿಕೋಟಿ ನೀಡಿದ ಚಿಕಿತ್ಸೆಯೇ ಮುಖ್ಯಕಾರಣ. ಬಾಹ್ಯಾಕಾಶ ಜಗತ್ತಿನಲ್ಲಿ ಜಗತ್ತಿನ ಗಮನ ಸೆಳೆದು ಪ್ರಧಾನಮಂತ್ರಿ ಮೋದಿಯವರಿಂದ ನೇರಮೆಚ್ಚುಗೆ ಪಡೆದ ದಿಗಾಂತರ (ಸ್ಪೇಸ್)ವಿಜ್ಞಾನಿ ಡಾ. ತನ್ವೀರ್ ಅಹ್ಮದ್ ಬೋಡೆ ಇದೇ ಊರಿನವರು. ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷೆಯಾಗಿದ್ದ ಫೌಜಿಯಾ ಬೇಗಂ ಚೌದರಿ, ಗುಲಬರ್ಗಾ ವಿ. ವಿ. ಉರ್ದು ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ ರಬ್, ಹೆಸರಾಂತ ನಾಲವಾರ ಶ್ರೀಮಠದ ತೋಟೇಂದ್ರ ಶ್ರೀಗಳ ಹುಟ್ಟೂರು ತಿಮ್ಮಾಪುರ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಇದು ಸುರಪುರ ಶಹರದ ಅಗಸಿ ಬಾಗಿಲಿನಂಥ ಊರು ತಿಮ್ಮಾಪುರದ ಹಿರಿಮೆ.
ಮಲ್ಲಿಕಾರ್ಜುನ ಕಡಕೋಳ
9341010712

LEAVE A REPLY

Please enter your comment!
Please enter your name here