ನಟ ದರ್ಶನ್ ಎಂಬ ಈ ನಟನ ವರ್ತನೆ ಹೊಸದೇನಲ್ಲ. ಆದರೆ ನಮ್ಮ ಕಣ್ಣ ಮುಂದೆ ಬೆಳೆದ ಈ ಹುಡುಗನ ತಲೆಗೆ ಏರಿದ ಮದವನ್ನು ನಾವ್ಯಾರೂ ನಮ್ಮ ಶತೃಗಳಿಗೂ ಬಯಸಬಾರದು.
ಮುವತ್ತು ವರ್ಷಗಳ ಹಿಂದೆ ವಜ್ರಶ್ವೇರಿ ಕಂಬೈನ್ಸ್ ಸಂಸ್ಥೆಯಲ್ಲಿ ರಾಜಕುಮಾರ್ ಚಿತ್ರಗಳಿಗೆ ಲೈಟ್ ಬಾಯ್ ಆಗಿ ದಿನವೊಂದಕ್ಕೆ 200 ರೂಪಾಯಿ ದುಡಿಯುತ್ತಿದ್ದ ದರ್ಶನ್ ತನ್ನ ಸ್ವಂತ ಪ್ರತಿಭೆಯಿಂದ ಮೇಲೆ ಬಂದವನು.
ಗಾಂಧಿನಗರದ ವಜ್ರೇಶ್ವರಿ ಕಂಬೈನ್ಸಗೆ ಹೋಗಿ ಎಸ್.ಎ. ಚಿನ್ನಪ್ಪಗೌಡರನ್ನು ಮಾತನಾಡಿಸುವ ಸಮಯದಲ್ಲಿ ಸದಾ ನಾನು ದರ್ಶನ್ ನನ್ನು ನೋಡುತ್ತಿದ್ದೆ. ರಾಜಕುಮಾರ್ ಜೊತೆಯಲ್ಲಿ ಈತನ ತಂದೆ ತೂಗುದೀಪ ಶ್ರೀನಿವಾಸ್ ಅವರು ಖಳನಾಯಕನಾಗಿ ಅಭಿನಯಿಸುತ್ತಿದ್ದ ಕಾರಣಕ್ಕಾಗಿ ಅವರ ಕುಟುಂಬಕ್ಕೆ ಅನೂಕೂಲವಾಗಲಿ ಎಂದು ಈತನಿಗೆ ಅಲ್ಲಿ ಉದ್ಯೋಗ ನೀಡಿದ್ದರು.
ದರ್ಶನ್ ಹಣ ಮತ್ತು ಕೀರ್ತಿಯ ಶಿಖರದ ತುತ್ತ ತುದಿಗೇರಿದ ಸಂದರ್ಭದಲ್ಲಿ ತಾನು ನಡೆದ ಬಂದ ದಾರಿಯ ಬಗ್ಗೆ ಯೋಚಿಸಬೇಕಿತ್ತು.
ತಮಿಳು ಚಿತ್ರರಂಗದಲ್ಲಿ ವಾಲಿ ಎಂಬ ಎಂಬ ಪ್ರಸಿದ್ಧ ಚಲನ ಚಿತ್ರಗೀತೆಗಳ ಕವಿ ಇದ್ದಾರೆ. ಸುಮಾರು ಹತ್ತು ಸಾವಿರ ಗೀತೆಗಳನ್ನು ಬರೆದಿದ್ದಾರೆ.
ಅವರಿಗೆ 75 ವರ್ಷ ತುಂಬಿದಾಗ ತಮಿಳು ಚಿತ್ರರಂಗ ಮದ್ರಾಸ್ ನಗರದಲ್ಲಿ ಸನ್ಮಾನ ಏರ್ಪಡಿಸಿತ್ತು. ಅಂದು ಖ್ಯಾತ ಸಂಗೀತ ನಿರ್ದೇಶಕ ಎಂ.ಎಸ್. ವಿಶ್ವನಾಥ್ ವೇದಿಕೆಯಲ್ಲಿ ಇದ್ದರು. ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ವಾಲಿಯವರು
ನಾನು ಚಿತ್ರರಂಗಕ್ಕೆ ಬಂದಾಗ ಅನ್ನ ತಿನ್ನಲು ಪರದಾಡುತ್ತಿದ್ದೆ.ಈಗ ನನಗೆ ಅನ್ನ ತಿನ್ನಲು ಸಮಯವಿಲ್ಲ. ಇದಕ್ಕೆ ಕಾರಣ ಈ ಪುಣ್ಯಾತ್ಮರು ಎಂದು ಕಣ್ಣೀರು ಹಾಕುತ್ತಾ, ವೇದಿಕೆಯಲ್ಲಿ ವಿಶ್ವನಾಥನ್ ಗೆ ನಮಸ್ಕಾರ ಮಾಡಿದ್ದರು.
ಅಂದು ಆ ಹಿರಿಯ ಜೀವ ಆಡಿದ ಮಾತುಗಳು ನನ್ನೊಳಗೆ ಶಾಶ್ವತವಾಗಿ ಉಳಿದುಹೋಗಿವೆ.
ಇಂದು ಕನ್ನಡ ಚಿತ್ರಂಗವೂ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಬೇಕಿರುವುದು ವಾಲಿಯಂತಹ ವ್ಯಕ್ತಿಗಳೇ ಹೊರತು, ದರ್ಶನ್ ನಂತಹ ನಟರಲ್ಲ.
(ಜಗದೀಶ್ ಕೊಪ್ಪ)