ಜಗಳೂರು: ತಾಲೂಕಿನ ಗಡಿ ಗ್ರಾಪಂ ಹಿರೆಮಲ್ಲನಹೊಳೆ ಗ್ರಾಮದ ಸ.ನಂ 34ರಲ್ಲಿ ಕ್ಲೀನ್ ಮ್ಯಾಕ್ಸ್ ವಿಂಡ್ ಫ್ಯಾನ್ ಕಂಪನಿ ಅಳವಡಿಸುತ್ತಿರುವ ಪವನ ಶಕ್ತಿ ಪ್ಯಾನ್ ಅಳವಡಿಕೆಗೆ ಸಂಬಂಧಪಟ್ಟ ಇಲಾಖೆಗಳ ಮತ್ತು ಸ್ಥಳೀಯ ಗ್ರಾಪಂನ ಅನುಮತಿ ಪಡೆಯದೇ ಕಾಮಗಾರಿ ಆರಂಬಿಸಿದ್ದಾರೆ ಎಂದು ಗ್ರಾಮದ ರೈತರು ಬುಧವಾರ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತ ಬಿ.ಆರ್.ಬಾಣೇಶ್, ಕ್ಲೀನ್ ಮ್ಯಾಕ್ಸ್ ವಿಂಡ್ ಫ್ಯಾನ್ ಕಂಪನಿಯವರು ರಾತ್ರೋರಾತ್ರಿ ಕಾಮಗಾರಿ ಆರಂಬಿಸಿದ್ದಾರೆ. ಈ ಭಾಗದ ಕೆಲ ರೈತರನ್ನು ಮಧ್ಯವರ್ತಿಗಳನ್ನಾಗಿ ನೇಮಿಸಿಕೊಂಡು ರೈತರಿಗೆ ಆಮಿಷವೊಡ್ಡಿ ಭಯದ ವಾತಾವರಣ ಸೃಷ್ಟಿಸಿ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಪನಿಯ ಅಧಿಕಾರಿಗಳನ್ನು ಕೇಳಿದರೆ ಇದು ಕೇಂದ್ರ ಸರಕಾರದ ಅಧೀನದಲ್ಲಿ ನಡೆಯುತ್ತದೆ. ಇದರ ಹಿಂದೆ ತುಂಬಾ ಪ್ರಭಾವಿಗಳಿದ್ದಾರೆ. ನೀವು ಪ್ರಶ್ನಿಸಿದರೆ ನಿಮ್ಮ ಭವಿಷ್ಯಕ್ಕೆ ಖುತ್ತು ಬರಬಹುದು ಎಂದು ಬೆದರಿಸುತ್ತಾರೆ.
ಕೃಷಿಗೆ ಯೋಗ್ಯವಾದ ಜಮೀನುಗಳನ್ನು ರೈತರು ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಮಾನದಂಡಗಳನ್ನು ಪಾಲನೆ ಮಾಡದೇ ಮನ ಬಂದಂತೆ ಫ್ಯಾನ್ ಸ್ಥಾವರಗಳನ್ನು ಅಳವಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ, ಜಾನುವಾರುಗಳಿಗೆ ತೊಂದರೆ:
ಹಿರೇಮಲ್ಲನಹೊಳೆಗೆ ಗ್ರಾಮದ ಸರ್ವೆ ನಂ 33/1, 16,ರ ರೈತರು ಮತ್ತು ಅಕ್ಕಪಕ್ಕದ ರೈತರಿಗೆ ಫ್ಯಾನ್ ಸ್ಥಾವರದಿಂದ ತೊಂದರೆಯಾಗುತ್ತಿದೆ. ಎನ್‍ಎಂಎಲ್ ಸ್ಕೀಂ ಅಡಿಯಲ್ಲಿ ಮೇಕೆ ಸಾಕಾಣಿಕೆ ಘಟಕ ಮಾಡಲು ಉದ್ದೇಶಿಸಲಾಗಿತ್ತು. ಅಷ್ಟೇ ಅಲ್ಲ ರಾಷ್ಟ್ರೀಯ ಗೋಕುಲ ಮಿಷನ್ ಅಡಿಯಲ್ಲಿ ದೇಸಿ ತಳಿಯ ಹಸು ಸಾಕಾಣಿಕೆಗೆ ಅವಕಾಶ ಬಂದಿತ್ತು. ಆದರೆ ಬೃಹತ್ ಫ್ಯಾನ್‍ಗಳನ್ನು ಅಳವಡಿಸಿದರೆ ಅವುಗಳ ಮಾನಸೀಕ ಮತ್ತು ದೈಹಿಕ ಆರೋಗ್ಯಕ್ಕೆ ಸಮಸ್ಯೆಯಾಗತ್ತದೆ ಎಂದು ಯೋಜನೆಯನ್ನು ರದ್ದುಪಡಿಸಿದ್ದೇವೆ.
ಒಂದು ಫ್ಯಾನ್ ಅಳವಡಿಕೆಯಿಂದ ಎರಡು ಕಿಮೀ ವರೆಗೆ ಕರ್ಕಷ ಶಬ್ಧ ಹೊರಬರುವುತ್ತದೆ. ಇದರಿಂದ ಜನರ ಆರೋಗ್ಯದ ಮೇಲೆ ಹಕ್ಕಿ, ಪಕ್ಷಿಗಳು, ನವಿಲು ಹಾಗೂ ಕಾಡು ಹಂದಿಗಳ ಹೀಗೆ ಅನೇಕ ಬಗೆಯ ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಕಿರಿದಾದ ರಸ್ತೆಗಳಲ್ಲಿ ಬೃಹತ್ ವಾಹನ ಸಂಚಾರದಿಂದ ರಸ್ತೆಗಳು ಹಾಳಾಗಿವೆ ಎಂದು ರೈತರಾದ ಕೆ.ಸಿ.ಬಸವರಾಜ್, ಎಚ್.ಅಮರೇಂದ್ರ, ವಿ.ಕೃಷ್ಣಮೂರ್ತಿ, ರಘು ಜಾಗ್ವಾರ್, ವಿ.ಗುರುಲಿಂಗಪ್ಪ ಸೇರಿದಂತೆ ಹಿರಮೇಮಲ್ಲನಹೊಳೆ ಮತ್ತು ಹಾಲೇಹಳ್ಳಿ ಗ್ರಾಮಸ್ಥರು ಕ್ಲೀನ್ ಮ್ಯಾಕ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

(ರೈತರು ಗ್ರಾಪಂ ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಕ್ಲೀನ್ ಮ್ಯಾಕ್ಸ್ ಕಂಪನಿ ಸ್ಥಳೀಯ ಆಡಳಿತದಿಂದ ಪರವಾನಿಗೆ ಪಡೆದಿಲ್ಲ. ತಹಶೀಲ್ದಾರ್, ಆರ್‍ಐ ಮತ್ತು ಇಓ ಅವರ ಗಮನಕ್ಕೂ ತರಲಾಗಿದೆ ಎಂದು ಪಿಡಿಒ ಡಿ.ಎನ್.ಅರವಿಂದ್ ಪ್ರತಿಕ್ರಿಯೆ ನೀಡಿದರು)

ಅಧಿಕಾರಿಗಳು ಗಪ್‍ಚುಪ್: ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಆರ್‍ಐ ಧನಂಜಯ್ ಸೇರಿದಂತೆ ಎಲ್ಲ ಅಧಿಕಾರಿಗಳಿಗೂ ನಾವು ಮನವಿ ಕೊಟ್ಟು ಬಂದಿದ್ದೇವೆ. ಕಾಮಗಾರಿ ಸ್ಥಗಿತಗೊಳಿಸಿ ಎಂದು. ಆದರೆ ಇದುವರೆಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಕಂಪನಿಯ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ತಾಲೂಕು ಆಡಳಿತ ಕುಣಿಯುತ್ತಿದೆ. ಅವರ ಮತ್ತು ಕಂಪನಿಗಳ ಮಧ್ಯೆ ಅನೇಕ ಅವ್ಯವಹಾರಗಳಾಗಿವೆ ಎಂದು ರೈತ ಬಾಣೇಶ್ ಆರೋಪಿಸಿದರು.

LEAVE A REPLY

Please enter your comment!
Please enter your name here