ನಮ್ಮಲ್ಲಿ ಬಹಳ ಜನರಿಗೆ ಅರ್ಕಾವೊತ್ತನ್ನು ಪದವೊಂದರಲ್ಲಿ ಎಲ್ಲಿ ಬಳಸಬೇಕೆಂಬ ಬಗೆಗೆ ತೀವ್ರ ಗೊಂದಲವಿದೆ. ಏತ್ವಂದೀರ್ಘ ಅಥವಾ ಓತ್ವಂದೀರ್ಘದ ಪಕ್ಕದಲ್ಲಿ ಬರೆಯಬೇಕೆ? ಅಥವಾ ಅರ್ಕಾವೊತ್ತನ್ನು ಬರೆದ ಅನಂತರ ಆ ಚಿಹ್ನೆಯನ್ನು ಬಳಸಬೇಕೆ ಎಂಬ ಗೊಂದಲಕ್ಕೆ ದಶಕಗಳ ಇತಿಹಾಸವಿದೆ. ಹಾಗಾಗಿ ಆ ಜಿಜ್ಞಾಸೆಗೆ ಇಲ್ಲಿ ಪರಿಹಾರವನ್ನು ಕಂಡುಕೊಳ್ಳೋಣ.
ಅರ್ಕಾವೊತ್ತಿನ ಬಳಕೆಯ ಕುರಿತು ಸರ್ಕಾರದಲ್ಲಿ ಬಹಳ ಹಿಂದೆ, ಅಂದರೆ 45 ವರ್ಷಗಳ ಹಿಂದೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಅರ್ಕಾವೊತ್ತನ್ನು ಎಲ್ಲಿ ಬರೆಯಬೇಕೆಂಬ ವಾದ-ವಿವಾದ ತೀವ್ರವಾಗಿ ವಿದ್ವಾಂಸರಲ್ಲಿ ಎರಡು ಗುಂಪುಗಳಾದವು.
ಈ ಗೊಂದಲದಿಂದ ಪಾರಾಗಲು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು 1979ರಲ್ಲಿ ತನ್ನ ಹೆಸರಲ್ಲಿನ ಅರ್ಕಾವೊತ್ತನ್ನು ತೆಗೆದು ರೇ ಕೆಳಗೆ ದ ಒತ್ತು ಬರುವಂತೆ ಬರೆಯಿಸಿತು.
ರಾಜ್ಯದಲ್ಲಿರುವ ಆ ಇಲಾಖೆಯ ಎಲ್ಲ ನಾಮಫಲಕಗಳೂ ಬದಲಾದವು. ವಿವಾದ ತಣ್ಣಗಾದ ಮೇಲೆ, ಕೆಲವು ವರ್ಷಗಳ ಅನಂತರ ಮತ್ತೆ ನಿರ್ದೇಶನಾಲಯ ಅಂತ ಬರೆಯಿಸಿತು!
ದ ಅಕ್ಷರಕ್ಕೆ ಏತ್ವಂದೀರ್ಘ(√) ಸೇರಿಸಿದರೆ ದೇ ಆಗುತ್ತದೆ. ಅದು ಇಡಿಯಾಗಿ ಒಂದು ಘಟಕ. ಅದನ್ನು ಬೇರೆ ಬೇರೆ ಮಾಡಲಾಗದು. ಅರ್ಕಾವೊತ್ತು ಅದರ ಪಕ್ಕದಲ್ಲಿ ಬರತಕ್ಕದ್ದು.
ಲಿಪಿ ಅನ್ನುವುದು ಒಂದು ರೂಢಿ ಮಾತ್ರ. Script is a convention ಎನ್ನುತ್ತಾರೆ. ಕನ್ನಡವನ್ನು ಅರ್ಕಾವೊತ್ತನ್ನು ಹೊರತುಪಡಿಸಿಯೂ ಬರೆಯಲು ಸಾಧ್ಯವಿದೆ.
ತೆಲುಗಿನಲ್ಲಿ ಅರ್ಕಾವೊತ್ತು ಇಲ್ಲ. ತಮಿಳಿನಲ್ಲೂ ಇಲ್ಲ. (ದೇವ)ನಾಗರಿ ಲಿಪಿಯಲ್ಲಿ ಅದನ್ನು ಉಚ್ಚರಿಸುವ ಅಕ್ಷರದ ಪಕ್ಕದಲ್ಲಿ ಬರೆಯದೆ ಅದರ ಮುಂದಿನ ಅಕ್ಷರದ ಮೇಲೆ ಬರೆಯಲಾಗುತ್ತದೆ. ಕನ್ನಡದಲ್ಲಿ ನಾವು ಅದನ್ನು ಉಚ್ಚ(√)ರಿಸುವ ಕಡೆ ಬರೆಯದೆ ಅದರ ಪಕ್ಕದ ಅಕ್ಷರದ ಬದಿಯಲ್ಲಿ ಬರೆಯುತ್ತೇವೆ. ನಿ ಆದಮೇಲೆ ಅರ್ಕಾವೊತ್ತು ಬರೆದು ದೇಶಕ
ಬರೆದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ನಾವು ಸೌಂದರ್ಯೋಪಾಸಕರು. ಲಿಪಿಯ ಸೌಂದರ್ಯವನ್ನು ಗಮನದಲ್ಲಿರಿಸಿಕೊಂಡು, ಉಚ್ಚರಿಸುವ ಅಕ್ಷರದ ಪಕ್ಕದಲ್ಲಿ ಬರೆಯದೆ ಮುಂದಿನ ಅಕ್ಷರದ ಪಕ್ಕ ಬರೆಯುವ ಅಭ್ಯಾಸ ಮಾಡಿಕೊಂಡಿದ್ದೇವೆ.
ಹೊಸಸಂಶೋಧನೆ:
ಹಿರಿಯ ಸಂಶೋಧಕರೂ, ಲಿಪಿತಜ್ಞರೂ ಆದ ಡಾ. ಬಿ. ರಾಜಶೇಖರಪ್ಪನವರು ಈ ಕುರಿತು ಸಂಶೋಧನೆಯ ಮೂಲಕ ಹೊಸ ಮಾಹಿತಿಯನ್ನು ಹೊರಗೆಡಹಿದ್ದಾರೆ.
ಅರ್ಕಾವೊತ್ತು ರ ಒತ್ತಿನ ಮೇಲ್ಭಾಗ. ಕೆಳಗಿನ ಭಾಗ ರ ಒತ್ತು. ಮೇಲ್ಭಾಗ ಅರ್ಕಾವೊತ್ತು ಆಯಿತು ಎಂದಿದ್ದಾರೆ. ಅದು -ಅರ್ ಧ್ವನಿಯನ್ನು ಸೂಚಿಸುತ್ತದೆ ಎಂದು ಪರಿಭಾವಿಸಲಾಗುತ್ತದೆ.
ಮೂಲ ರ ಒತ್ತು ಎಂದರೇನು ಎಂಬ ಗೊಂದಲ ಸಹಜ. ಹಳೆಯ ಶಾಸನಗಳನ್ನು ಗಮನಿಸಿದರೆ ರ ಒತ್ತು ಈಗ ಇರುವಂತೆ ಇರಲಿಲ್ಲ. ದಯವಿಟ್ಟು ಚಿತ್ರ ನೋಡಿ. ಅದರ ಕೆಳಗಿನ ಭಾಗ ರ ಒತ್ತು ಆಯಿತು. ಮೇಲಿನ ಭಾಗ ಅರ್ಕಾವೊತ್ತು ಆಯಿತು.
ನೆನಪಿರಲಿ. ಕನ್ನಡದಲ್ಲಿ ಇರುವ ವ್ಯಂಜನಗಳ ಸಂಖ್ಯೆ 34. ಕ ಇಂದ ಳ ವರೆಗೆ. ಇವುಗಳಿಗೆ 34 ಒತ್ತುಗಳಿವೆ. ಅರ್ಕಾವೊತ್ತು 35ನೆಯ ಒತ್ತು. ಆದರೆ ಇದಕ್ಕೆ ಸಂಬಂಧಿಸಿದ ನಿರ್ದಿಷ್ಟ ವ್ಯಂಜನ ಇಲ್ಲ. ಆದರೆ ಇದನ್ನು -ಅರ್ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸಲಾಗಿದೆ. ಇದು ಕನ್ನಡ ಮತ್ತು ಸಂಸ್ಕೃತ ಲಿಪಿ (ದೇವನಾಗರಿ ಲಿಪಿ)ಗಳಲ್ಲಿ ಮಾತ್ರ ಇದೆ. ಇದು ನಮ್ಮ ಕನ್ನಡದ ವಿಶೇಷವೂ ಹೌದು. ಕೆಲವರಿಗೆ ಸಮಸ್ಯೆಯೂ ಹೌದು!
ಆಗಾಗ ಈ ಕುರಿತು ಸ್ವಾರಸ್ಯಕರ ಚರ್ಚೆ, ವಾದ-ವಿವಾದ ನಡೆದಿದೆ. ಇದನ್ನು ನಮ್ಮ ಲಿಪಿಯ ಕುರಿತಾಗಿ ನಮಗಿರುವ ಕಾಳಜಿ ಮತ್ತು ಎಚ್ಚರದ ಸಂಕೇತ ಎಂದು ಭಾವಿಸಬಹುದು. ನನ್ನ ಈ ಚತುರವಾಣಿಯಲ್ಲಿ, ನಾನು ಆಯ್ಕೆಮಾಡಿಕೊಂಡಿರುವ ಕೀಲಿಮಣೆಯಲ್ಲಿ ಅದನ್ನು ಬೇರೆ ರೀತಿ ಬರೆಯಲು ಸಾಧ್ಯವೇ ಆಗದಂತೆ ಮಾಡಲಾಗಿದೆ. ಇದರಲ್ಲಿ ನಿರ್ದೇಶಕ ಮಾತ್ರ ಸಾಧ್ಯ. ಇದು ಸರಿಯಾದುದೂ ಹೌದು.
ಏಕರೂಪತೆಗಾಗಿ ಇದನ್ನೇ ಪಾಲಿಸೋಣ. ಹೇಗೆ ಬರೆದರೂ ಸರಿಯಾಗಿ ಓದಿಕೊಳ್ಳುತ್ತೇವೆ. ಆದರೆ ಕ್ರಮವರಿತು ಬರೆಯೋಣ. ನಿರ್ದೇಶಕ ಸರಿ ಎಂಬುದನ್ನು ಸಮ್ಮತಿಸೋಣ.
ಅರ್ಕಾವೊತ್ತನ್ನು ಬರೆಯುವ ಬಗೆ ಹೇಗೆ?
ಇದೆಲ್ಲವೂ ಸರಿ. ಆದರೆ ಅರ್ಕಾವೊತ್ತನ್ನು ಬರೆಯುವಾಗ ನಮ್ಮ ಕೈಚಲನೆಯ ಮಾರ್ಗ ಕುರಿತು ಬಹಳಷ್ಟು ಜನರಿಗೆ ಸರಿಯಾದ ತಿಳಿವಳಿಕೆ ಇಲ್ಲ. ಮೇಲಿನಿಂದ ಕೆಳಕ್ಕೆ ಬರೆಯುತ್ತಾರೆ. ಸರಿಯಾದ ಕ್ರಮವೆಂದರೆ ಕೆಳಗಿನಿಂದ ಮೇಲಕ್ಕೆ ಬರೆಯಬೇಕು.
ಈ ಚಿಹ್ನೆಯನ್ನು ಒಂದೇ ಹಂತದಲ್ಲಿ ಬರೆದು ಮುಗಿಸಬೇಕು. ಮಧ್ಯೆ ಕೈ ಎತ್ತಬಾರದು. ಬಲಕ್ಕೆ ಚಾಚಿಕೊಂಡಿರುವ ಭಾಗಗಳ ಪ್ರಮಾಣ ಎಷ್ಟಿರಬೇಕು? ಕೆಳಗಿನ ಭಾಗ ಒಂದು, ಮಧ್ಯದ ಭಾಗ ಎರಡು, ಮೇಲಿನ ಭಾಗ ಮೂರರಷ್ಟಿರಬೇಕು. ನಡುವಿನ ಭಾಗ ಸುರುಳಿ ಸುತ್ತಿಕೊಂಡಿರು ವಂತೆ ಬರೆಯಬಾರದು. ನೆನಪಿಡಿ: ಅರ್ಕಾವೊತ್ತು ತನ್ನ ಆಕಾರದಲ್ಲಿ ಕನ್ನಡದ ಅಂಕಿ ಒಂಬತ್ತನ್ನು ಹೋಲುತ್ತದೆ.
- ಕೆ. ರಾಜಕುಮಾರ್ .