ಬೆಂಗಳೂರು ನಗರ ಜಿಲ್ಲೆ ಮಾರ್ಚ್ 10 : 1 ರಿಂದ 12 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುವ ಮೂಲ ಸೌಲಭ್ಯಗಳನ್ನು ಒಳಗೊಂಡ 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮುಂದಿನ ವರ್ಷದ ವೇಳೆಗೆ ರಾಜ್ಯಾದ್ಯಂತ ಪ್ರಾರಂಭ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದರು.
ಇಂದು ಬೆಂಗಳೂರು ಉತ್ತರ ವಲಯದ ಕೊಡಿಗೇಹಳ್ಳಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಪಬ್ಲಿಕ್ ಶಾಲಾ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಿ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸುವುದು ಸರಕಾರದ ಜವಾಬ್ದಾರಿಯಾಗಿದರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಶ್ರಮಿಸುತ್ತಿದ್ದು, ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 20 ಶಾಲೆಗಳ ಪೈಕಿ 2 ಶಾಲೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಹಾಗೂ 2 ಶಾಲೆಗಳನ್ನು ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ, ಬಗೆಂಗಳೂರು ನಗರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ನಡೆಸಲ್ಪಡುತ್ತಿರುವ 16 ಸರ್ಕಾರಿ ಶಾಲೆಗಳನ್ನು ಮೇರ್ಲ್ದಜೆಗೆ ತರುವ ಯೋಜನೆ ರೂಪುಗೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ಎರಡು ಗ್ರಾಮಗಳಿಗೆ ಒಂದರಂತೆ ಎರಡು ಸಾವಿರ ಕೆಪಿಎಸ್ ಶಾಲೆಗಳನ್ನು ನಿರ್ಮಿಸುವ ಗುರಿ ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರಕ್ಕೆ 2 ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ, ಮುಂದಿನ ತಿಂಗಳಿಂದ ರಾಗಿ ಮಾಲ್ಟ್ ನೀಡಲಾಗುವುದು. ಸದರಿ ಶಾಲೆಗಳ ಮೂಲಭೂತ ಸೌಕರ್ಯಗಳಾದ ಕೊಠಡಿಗಳ ನಿರ್ಮಾಣ ಮತ್ತು ನವೀಕರಣ, ಶೌಚಾಲಯ ಸಿದ್ಧತೆ, ಕಾಂಪೌಂಡ್ ಗಳ ನಿರ್ಮಾಣ, ಕುಡಿಯುವ ನೀರಿ ವ್ಯವಸ್ಥೆ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ಹಾಗೂ ಆಟದ ಮೈದಾನ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಮಾತನಾಡಿ, ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಹೆಚ್ಚಿನ ಮಕ್ಕಳ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬುದು ಸಾಬೀತು ಪಡಿಸಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ಮಟ್ಟ ತಲುಪಬೇಕು ಎಂದು ಹೇಳಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ವಿ ಸದಾನಂದ ಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಬಿ.ಬಿ ಕಾವೇರಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.