:ನಾನು ರಾಜಕೀಯವಾಗಿ ನಿಮ್ಮ ( ಕೆ. ಚಂದ್ರಶೇಖರ ರಾವ್) ಅಂತ್ಯವನ್ನು ನೋಡ್ತೀನಿ. ಇನ್ನು ಏನಿದ್ದರೂ ನನ್ನ ಸಮಯ.
ಅವರು ಅಕ್ಷರಶಃ ಮೀಸೆ ತಿರುವಿ ಹೀಗೆ ಸವಾಲು ಹಾಕಿದ್ದರು. ಆ ಸವಾಲನ್ನು ಅವರು ನಿಜ ಮಾಡಿದ್ದಾರೆ. ಅವರು ಬೇರೆ ಯಾರೂ ಅಲ್ಲ; ತೆಲಂಗಾಣದಲ್ಲಿ ಇವತ್ತು ಮುಖ್ಯಮಂತ್ರಿ ಗಾದಿಯ ಹೊಸ್ತಿಲಲ್ಲಿ ಬಂದು ನಿಂತಿರುವ ತೆಲಂಗಾಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ
ಅದು 2015ನೇ ಇಸವಿಯ ಮೇ 31. ಆಗ ರೇವಂತ್ ರೆಡ್ಡಿ ತೆಲುಗುದೇಶಂ ನಾಯಕ ಮಾಜಿ ಸಿ. ಎಂ. ಚಂದ್ರ ಬಾಬು ನಾಯ್ಡು ಅವರ ಅನುಯಾಯಿ. ವಿಧಾನಪರಿಷತ್ ಚುನಾವಣೆಯಲ್ಲಿ ಹಣದ ಆಮಿಷವೊಡ್ಡಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದಿಂದ ಬಂಧಿತ. ಆಗಲೇ ಅವರು ಮೀಸೆ ತಿರುವಿ ಆಗಿನ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರಿಗೆ ಗುಡುಗಿದ್ದು.
ರೇವಂತ್ ರೆಡ್ಡಿ ಇಪ್ಪತ್ತೊಂದನೇ ಶತಮಾನದ ರಾಜಕಾರಣಿ. ಅಂದರೆ 2000 ಇಸವಿ ಮುನ್ನ ರಾಜಕಾರಣದಲ್ಲಿ ಅನಾಮಧೇಯ. ರೇವಂತ್ ರೆಡ್ಡಿ ಅವರಿಗೆ ವಿದ್ಯಾರ್ಥಿ ಜೀವನದಲ್ಲಿ ಸಂಘ ಪರಿವಾರದ ನಂಟು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಸಕ್ರಿಯ. ಹಿರಿಯ ನಾಯಕರಾಗಿದ್ದ ಜೈಪಾಲ್ ರೆಡ್ಡಿ ಅವರ ಹತ್ತಿರದ ಸಂಬಂಧಿ. ತಂದೆ ನರಸಿಂಹ ರೆಡ್ಡಿ. ತಾಯಿ ರಾಮಚಂದ್ರಮ್ಮ. ಕೃಷಿ ಕುಟುಂಬ.
ರೇವಂತ್ ರೆಡ್ಡಿ ಮೊದಲಿನಿಂದಲೂ ರಾಜಕೀಯ ಮಹತ್ವಾಕಾಂಕ್ಷಿ. ರಾಜಕೀಯದ ಆರಂಭದ ದಿನಗಳಲ್ಲಿ ಚಂದ್ರಶೇಖರ ರಾವ್ ಅವರೊಂದಿಗೂ ಒಡನಾಟ.
ರೇವಂತ್ ರೆಡ್ಡಿ ಅವರದು ಪ್ರಾರಂಭದಲ್ಲಿ ಜಾಹೀರಾತು ಹಾಗೂ ಪ್ರಿಂಟಿಂಗ್ ಬಿಸಿನೆಸ್. ನಂತರ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರವೇಶ. 2000ನೇ ಇಸವಿಯಲ್ಲಿ ಹೈದರಾಬಾದಿನ ವಸತಿ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು. ಆಗ ರೇವಂತ್ ರೆಡ್ಡಿಗೆ 31 ವರ್ಷ ವಯಸ್ಸು. ಆಗಲೇ ಅವರು ತಮ್ಮ ಆತ್ಮೀಯ ಸ್ನೇಹಿತನೊಬ್ಬನಿಗೆ ಹೇಳಿದ್ದರಂತೆ- ನೋಡ್ತಾ ಇರು ಮಗಾ. ನಾನು ಒಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗುವೆ ಅಂತ.
2006 ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರರಾಗಿ ಆಯ್ಕೆ. ಆಗಲೇ ವೈ. ಎಸ್. ರಾಜಶೇಖರ ರೆಡ್ಡಿ ಅವರಿಂದ ಇವರ ಶಕ್ತಿಯನ್ನು ಗುರುತಿಸಿ ಕಾಂಗ್ರೆಸ್ ಸೇರಲು ಆಹ್ವಾನ. ಆದರೆ ರೇವಂತ್ ರೆಡ್ಡಿ ಆಯ್ಕೆ ಮಾಡಿಕೊಂಡ ಪಕ್ಷ ತೆಲುಗು ದೇಶಂ, ನಾಯಕ ಚಂದ್ರ ಬಾಬು ನಾಯ್ಡು.
ರೇವಂತ್ ರೆಡ್ಡಿ ಅವರಿಗೆ 2009ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಡಂಗಾಲ ಕ್ಷೇತ್ರದಿಂದ ಜಯ. 2014ರಲ್ಲೂ ವಿಜಯದ ಸರಣಿ ಮುಂದುವರಿಕೆ. ನಂತರ ರೇವಂತ್ ರೆಡ್ಡಿ ಅವರಿಂದ ಪಕ್ಷಾಂತರ. 2017ರಲ್ಲಿ ಕಾಂಗ್ರೆಸ್ ಸೇರ್ಪಡೆ. ಆ ಪಕ್ಷದಲ್ಲಿ ಬಹುಬೇಗ ಮುಂಚೂಣಿ ನಾಯಕನ ಅಗ್ರ ಪಟ್ಟ. ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹುದ್ದೆ. 2021 ರಲ್ಲಿ ಅಧ್ಯಕ್ಷ ಗಾದಿಯ ಕಿರೀಟ. ಈ ಮಧ್ಯೆ 2018ರಲ್ಲಿ ಕಡಂಗಾಲ ಕ್ಷೇತ್ರದಲ್ಲಿ ಚಂದ್ರಶೇಖರ ರಾವ್ ಅವರ ಪಕ್ಷದ ಎದುರು ಸೋಲು. ಮನೆ ಮೇಲೆ ಇಡಿ, ಐಟಿ ದಾಳಿ. ರೇವಂತ್ ರೆಡ್ಡಿ ಜನಪ್ರಿಯತೆ ಕುಗ್ಗಲಿಲ್ಲ. ಅಸೆಂಬ್ಲಿ ಚುನಾವಣೆಯಲ್ಲಿ ಸೋತ ನಾಲ್ಕೇ ತಿಂಗಳಲ್ಲಿ 2019ರಲ್ಲಿ ಮಲ್ಕಜ್ ಗಿರಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ, ವಿಜಯದ ನಗೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಇವತ್ತು ಬೂದಿಯಿಂದ ಎದ್ದು ಬಂದಿದೆ. ಮುಖ್ಯಮಂತ್ರಿಯಾಗಿ ಜನರಿಂದ ದೂರ ಸರಿದು ದಂತಗೋಪುರದಲ್ಲಿದ್ದ ಚಂದ್ರಶೇಖರ ರಾವ್ ಅವರನ್ನು ಅಲ್ಲಿನ ಜನರು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ನ ಮಾರ್ಪುಕಾವಲಿ, ಕಾಂಗ್ರೆಸ್ ರಾವಲಿ ( ಬದಲಾವಣೆ ಆಗಲಿ, ಕಾಂಗ್ರೆಸ್ ಬರಲಿ ) ಘೋಷಣೆ ನಿಜವಾಗಿದೆ. ಫುಟ್ ಬಾಲ್ ಆಟದ ಪ್ರಿಯ ರೇವಂತ್ ರೆಡ್ಡಿ ಅವರಿಗೆ ರಾಜಕೀಯ ಆಟದಲ್ಲಿ ಈಗ ಗೋಲು ಹೊಡೆದ ಸಂತಸ.
ರೇವಂತ್ ಅವರೇ ಹೇಳುವಂತೆ ಅವರು ಮಂತ್ರಿಯಾಗಲು ಯಾವತ್ತೂ ಆಸೆಪಟ್ಟವರಲ್ಲ. ಅವರ ಗುರಿ ಏನಿದ್ದರೂ ಮುಖ್ಯಮಂತ್ರಿ ಪಟ್ಟವೇ. ಅಂತಹ ಸಾಧ್ಯತೆಯ ಕಾಲ ಈಗ ಅವರ ಸನಿಹದಲ್ಲಿದೆ.
ರೇವಂತ್ ರೆಡ್ಡಿ ಅವರು ಮುಖ್ಯಮಂತ್ರಿಯಾದರೆ ತೆಲಂಗಾಣದ ಅತ್ಯಂತ ಹಿಂದುಳಿದ ಪ್ರಾಂತ್ಯ ಪಲಮುರುದಿಂದ ಬಂದವವರೊಬ್ಬರು ಇದೇ ಮೊದಲ ಬಾರಿಗೆ ಆ ಹುದ್ದೆಯನ್ನು ಏರಿದಂತಾಗುತ್ತದೆ.
- ಕೂಡ್ಲಿ ಗುರುರಾಜ