ಬೆಂಗಳೂರು ನಗರ ಜಿಲ್ಲೆ, ಆಗಸ್ಟ್ 19: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿದಲ್ಲಿ ಮುಂಚಿತವಾಗಿ  ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಸಾರ್ವಜನಿಕರು ತಮ್ಮ ಪ್ರಕರಣಗಳನ್ನು  “ರಾಷ್ಟ್ರೀಯ  ಲೋಕ್ ಅದಾಲತ್” ನಲ್ಲಿ  ಇತ್ಯರ್ಥಪಡಿಸಿಕೊಂಡು ಲೋಕ್ ಅದಾಲತ್ ನ ಸದುಪಯೋಗಪಡಿಸಿಕೊಳ್ಳುವಂತೆ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಮುರಳೀಧರ್ ಪೈ ಅವರು ತಿಳಿಸಿದರು.

          ಇಂದು ನಗರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ ವತಿಯಿಂದ “ರಾಷ್ಟ್ರೀಯ ಲೋಕ ಅದಾಲತ್” ನ ಪತ್ರಿಕಾಗೋಷ್ಟಿ ಉದ್ದೇಶಿ ಮಾತನಾಡಿದರು.

          ಸೆಪ್ಟೆಂಬರ್ 09 ರಂದು ಹಮ್ಮಿಕೊಂಡಿರು “ರಾಷ್ಟ್ರೀಯ ಲೋಕ್ ಅದಾಲತ್” ನಲ್ಲಿ  ಬಾಕಿ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳಾದ ಚೆಕ್ಕು ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ  ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಮತ್ತು ಇತರೆ ಸಿವಿಲ್ ಪ್ರಕರಣಗಳು ಇತ್ಯಾದಿ., ಕರ್ನಾಟಕ  ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧಿಕರಣದ ಪ್ರಕರಣಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಹಾಗೂ ಖಾಯಂ ಜನತಾ ನ್ಯಾಯಾಲಯದಲ್ಲಿ ನ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಕಾರ್ಮಿಕ  ವಿವಾದಗಳು, ವೈವಾಹಿಕ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು  ಭತ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಪಿಂಚಣಿ ಪ್ರಕರಣಗಳು, ಕಂದಾಯ ಇಲಾಖೆಯಲ್ಲಿರುವ ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಪ್ರಕರಣಗಳ ಇತ್ಯರ್ಥಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ  ನೀಡಲಾಗುವುದು. ಕಡಿಮೆ ಖರ್ಚಿನಲ್ಲಿ  ಶೀಘ್ರ ತೀರ್ಮಾನಕ್ಕಾಗಿ ಇದೊಂದು  ವಿಶೇಷ ಅವಕಾಶವಾಗಿದೆ ಎಂದು ಮಾಹಿತಿ ನೀಡಿದರು.

          ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಬರುವ  ಬ್ಯಾಂಕ್ ವಸೂಲಿ ಪ್ರಕರಣಗಳಲ್ಲಿ ರಾಜೀ ಸಂಧಾನದಲ್ಲಿ ಶೇಕಡ 30 ರಷ್ಟು ರಿಯಾಯಿತಿ ಪಕ್ಷಕಾರರಿಗೆ  ನೀಡಲಾಗುವುದು. ಈ ಅದಾಲತ್ ಸಹಕಾರಿಯಾಗಿದ್ದು, ಇದೇ ತಿಂಗಳ 28 ರಿಂದ  ಪ್ರತಿಯೊಂದು ಬ್ಯಾಂಕ್ ಗಳಿಗೆ ನಿವೃತ್ತ ನ್ಯಾಯಾಂಗ ಅಧಿಕಾರಿ ಮತ್ತು ವಕೀಲರನ್ನು ಕೌನ್ಸಿಲೇಟರ್ ಗಳಾಗಿ ನೇಮಿಸಿ ಪ್ರಕರಣಗಳನ್ನು ಅತೀ ಶೀಘ್ರದಲ್ಲಿ ವಿಲೇವಾರಿ ಮಾಡಲಾಗುವುದು.

          ಹಿಂದಿನ ಲೋಕ ಅದಾಲತ್ ನಲ್ಲಿ  ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬಂದಿರುವ 584 ಹಣ ವಸೂಲಿಗೆ ಸಂಬಂಧಪಟ್ಟ  ವಿವಾದಗಳ ವ್ಯಾಜ್ಯ ಪೂರ್ವ ಪ್ರಕರಣಗಳನ್ನು  ಇತ್ಯರ್ಥಪಡಿಸಲಾಗಿದೆ.  ಟ್ರಾಫಿಕ್ ಚಲನ್ ಗೆ ಸಂಬಂಧಪಟ್ಟಂತೆ 49 ಲಕ್ಷ  ಪ್ರಕರಣಗಳ ತೀರ್ಮಾನವಾಗಿ ಸುಮಾರು 130 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಹಿಂದಿನ ಲೋಕ ಅದಾಲತ್ ನಿಂದ  ಈವರೆಗೆ 1,40,000 ಟ್ರಾಫಿಕ್ ಚಲನ್ ಪ್ರಕರಣಗಳು ಇತ್ಯರ್ಥವಾಗಿದ್ದು,  ಫೆಬ್ರವರಿ 11. 2023ರ ಹಿಂದಿನ ಟ್ರಾಫಿಕ್ ಚಲನ್ ಪ್ರಕರಣಗಳಿಗೆ  ಶೇ. 50ರಷ್ಟು ರಿಯಾಯಿತಿಯನ್ನು ಸೆಪ್ಟೆಂಬರ್ 09ರ ವರೆಗೆ ನೀಡಲಾಗಿರುತ್ತದೆ. ಫೆಬ್ರವರಿ 11 ರ ನಂತರದ ಪ್ರಕರಣಗಳಿಗೆ ಯಾವುದೇ ರೀಯಾಯಿತಿ ಅನ್ವಯಿಸುವುದಿಲ್ಲ  ಎಂದು ತಿಳಿಸಿದರು.

          ಈ ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವರದರಾಜ್. ಬಿ ಅವರು ಮತ್ತು  ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here