ಅಬ್ರಹಾಂ ಲಿಂಕನ್ ಅಮೆರಿಕದ ಅಧ್ಯಕ್ಷರಾಗಿ ಆಯ್ಮೆಯಾದಾಗ, ಅಲ್ಲಿನ ಶ್ರೀಮಂತರು ( Aristocrats) ಅತ್ಯುನ್ನತ ಸರ್ಕಾರಿ ಹುದ್ದೆಯಲ್ಲಿರುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದರು. ಬೂಟು ತಯಾರಕನ ಮಗನೊಬ್ಬ ಅಮೆರಿಕದ ಅಧ್ಯಕ್ಷನಾಗುವುದನ್ನು ಅವರು ಹೇಗೆ ತಾನೆ ಸಹಿಸಿಯಾರು? ಮೊದಲ ದಿನ, ಅಬ್ರಹಾಂ ಲಿಂಕನ್ ಉದ್ಘಾಟನಾ ಭಾಷಣ ಮಾಡಲು ಸೆನೆಟ್ ಒಳಗೆ ಬಂದಾಗ, ಮಧ್ಯದಲ್ಲಿ, ಒಬ್ಬ ಶ್ರೀಮಂತ ವ್ಯಕ್ತಿ ಎದ್ದು ನಿಂತು, “ಮಿಸ್ಟರ್ ಲಿಂಕನ್, ನಿಮ್ಮ ತಂದೆ ನನ್ನ ಕುಟುಂಬಕ್ಕೆ ಶೂಗಳನ್ನು ತಯಾರಿಸುತ್ತಿದ್ದರು ಎಂಬುದನ್ನು ನೀವು ಮರೆಯಬಾರದು” ಎಂದನು ಮತ್ತು ಆಗ ಇಡೀ ಸೆನೆಟ್ ನಕ್ಕಿತು. ಅವರು ಅಬ್ರಹಾಂ ಲಿಂಕನ್ ಅವರನ್ನು ಮೂರ್ಖರನ್ನಾಗಿ ಮಾಡಿದ್ದಾರೆಂದು ಭಾವಿಸಿದರು.
ಆದರೆ ಲಿಂಕನ್ ಆ ವ್ಯಕ್ತಿಯನ್ನು ನೋಡಿ ಹೇಳಿದರು, “ಸರ್, ನನ್ನ ತಂದೆ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬಕ್ಕಾಗಿ ಶೂಗಳನ್ನು ತಯಾರಿಸುತ್ತಿದ್ದರು ಎಂಬುದು ನನಗೆ ಗೊತ್ತು, ಮತ್ತು ಈ ಸಭೆಯಲ್ಲಿ ಇನ್ನೂ ಅನೇಕರು ಆ ರೀತಿ ಶೂಗಳನ್ನು ಮಾಡಿಸಿಕೊಂಡವರು ಇದ್ದಿರಬಹುದು. ಅವರ ರೀತಿಯಲ್ಲಿ ಶೂಗಳನ್ನು ಮಾಡಲು ಬೇರೆ ಯಾರಿಗೂ ಸಾಧ್ಯವಿಲ್ಲ. ಅವರ ಶೂಗಳು ಕೇವಲ ಶೂಗಳಲ್ಲ, ಅವರು ಅದರಲ್ಲಿ ತಮ್ಮ ಸಂಪೂರ್ಣ ಆತ್ಮವನ್ನು ಸೇರಿಸುತ್ತಿದ್ದರು. ನಾನು ಈಗ ಕೇಳುತ್ತೇನೆ, ಅವರು ಮಾಡಿಕೊಟ್ಟ ಶೂಗಳ ಬಗ್ಗೆ ಏನಾದರೂ ದೂರುಗಳಿವೆಯೆ? ಏಕೆಂದರೆ ನನಗೂ ಶೂಗಳನ್ನು ಹೇಗೆ ತಯಾರಿಸಬೇಕೆಂದು ತಿಳಿದಿದೆ; ನಿಮ್ಮಲ್ಲಿ ಯಾರಿಗಾದರೂ ಯಾವುದಾದರೂ ದೂರುಗಳಿದ್ದರೆ, ನಾನು ಇನ್ನೊಂದು ಜೋಡಿ ಶೂಗಳನ್ನು ಮಾಡಿಕೊಡಬಲ್ಲೆ. ಆದರೆ ನನಗೆ ತಿಳಿದಿರುವಂತೆ, ನನ್ನ ತಂದೆಯ ಶೂಗಳ ಬಗ್ಗೆ ಯಾರೂ ಎಂದಿಗೂ ದೂರು ನೀಡಿಲ್ಲ. ಅವರು ಒಬ್ಬ ಪ್ರತಿಭಾವಂತ, ಸೃಷ್ಟಿಕರ್ತ, ಮತ್ತು ನನ್ನ ತಂದೆಯ ಬಗ್ಗೆ ನನಗೆ ಹೆಮ್ಮೆ ಇದೆ.”
ಇದಕ್ಕೆ ಆ ಶ್ರೀಮಂತ ವ್ಯಕ್ತಿ ಏನೂ ಉತ್ತರಿಸದಿದ್ದಾಗ ಅಬ್ರಹಾಂ ಮತ್ತೆ ಹೀಗೆ ಹೇಳುತ್ತಾರೆ, “ನೀವು ಮಾತನಾಡಲೇಬೇಕು! ನೀವ್ಯಾಕೆ ಸುಮ್ಮನಾದಿರಿ? ನೀವು ನನ್ನನ್ನು ಮೂರ್ಖನನ್ನಾಗಿ ಮಾಡಲು ಬಯಸಿದ್ದಿರಿ, ಮತ್ತು ಈಗ ಸುತ್ತಲೂ ನೋಡಿ: ನೀವು ನಿಮ್ಮನ್ನೇ ಮೂರ್ಖರನ್ನಾಗಿ ಮಾಡಿಕೊಂಡಿದ್ದೀರಿ.”
ಅಮೆರಿಕದಲ್ಲಿ ಯಾವುದು ವರ್ಗವಾಗಿತ್ತೋ, ಅದು ಭಾರತದಲ್ಲಿ ಜಾತಿಯಾಗಿದೆ.‌ ಹಾಗಾಗಿಯೇ ಇಲ್ಲಿನ ಎಲ್ಲಾ ಹುದ್ದೆಗಳಲ್ಲಿ ಜಾತಿ ಅಂಟಿಕೊಂಡಿರುತ್ತದೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳತ್ತ ಶೂ ಎಸೆಯುವ ಮಟ್ಟಕ್ಕೆ ಒಬ್ಬ ಸುಶಿಕ್ಷಿತ ವ್ಯಕ್ತಿಯನ್ನೇ ಅದು ಆರಿಸಿಕೊಳ್ಳುತ್ತದೆ ಎಂಬುದು ಜಾತಿ ಮನಸ್ಥಿತಿಯ ಕಟು ವಾಸ್ತವ. ಅಲ್ಲಿ ಲಿಂಕನ್ ಪ್ರತಿಕ್ರಿಯಿಸಿದ ರೀತಿಯಲ್ಲೇ ಇಲ್ಲಿ ನಮ್ಮ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದ್ದಾರೆ. ಕುಲುಮೆಯಲ್ಲಿ ಬೆಂದ ಕಬ್ಬಿಣ ಗಟ್ಟಿಮುಟ್ಟಾಗಿಯೇ ಇರುತ್ತದೆ.
(By:Ravi Metri Facebook)

LEAVE A REPLY

Please enter your comment!
Please enter your name here