ಚಿಕ್ಕಬಳ್ಳಾಪುರ:ಬಾಗೆಪಲ್ಲಿ ವಿಧಾನಸಭಾ ಕ್ಷೇತ್ರದ ಜನರ ಭಾವನೆಗಳಿಗೆ ಬೆಲೆ ನೀಡದೆ ದಿಡೀರ್ ಎಂದು ಚಿತ್ರಾವತಿ ಜಲಾಶಯ ಹೆಸರನ್ನು ಎಸ್ ಎಂ ಕೃಷ್ಣ ಡ್ಯಾಂ ಎಂದು ನಾಮಕರಣ ಮಾಡಲು ಶಾಸಕರು ಅಕ್ರಮ ಮಾರ್ಗದಲ್ಲಿ ಸಾಗುತ್ತಿರುವುದು ಜನರನ್ನು ಕೆರಳಿಸಿದೆ. ಚಿತ್ರಾವತಿ ನದಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಹುಟ್ಟಿ ಬಾಗೇಪಲ್ಲಿ ಮೂಲಕ ಆಂಧ್ರಪ್ರದೇಶಕ್ಕೆ ಹರಿಯುತ್ತದೆ.ನಂದಿ ತಪ್ಪಲಿನಲ್ಲಿ ಹೆಚ್ಚು ಮಳೆ ಬಿದ್ದಾಗ ನದಿ ಹರಿಯುತ್ತದೆ. ಬರ ಪೀಡಿತ ಪ್ರದೇಶದಲ್ಲಿ ನೋಡಲು ಇರುವ ನದಿ ಚಿತ್ರಾವತಿ ನದಿ.
ಸಿಪಿಐಎಂ ಪಕ್ಷದ ನಿರಂತರ ಹೋರಾಟಗಳ ಬೀಡು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ. ಕಾಂ.ಜಿ.ವಿ. ಶ್ರೀರಾಮರೆಡ್ಡಿ ನಿರಂತರ ಜನರೊಂದಿಗೆ ಬೆರೆತು ಜನಪರ ಹೋರಾಟಗಳು ನಡೆಸಿದ ಜನನಾಯಕರು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಫ್ಲೋರೈಡ್, ನೈಟ್ರೇಟ್, ಆರ್ಸೆನಿಕ್ ರಾಸಾಯನಿಕ ಲವಣಗಳು ಹೆಚ್ಚಿರುವ ವಿಷಪೂರಿತ ನೀರನ್ನು ಕುಡಿಯುತ್ತಿದ್ದಾರೆ.ಈ ಅಪಾಯದ ಕುರಿತು 90 ರ ದಶಕದಲ್ಲಿ ಬಾಗೇಪಲ್ಲಿ ಮಾತ್ರವಲ್ಲದೆ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜನ ಜಾಗೃತಿ ಮೂಡಿಸುವ ಹಾಗು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಾ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿದ್ದರು.
1994 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ವಿಧಾನಸಭೆಯಲ್ಲಿ ಅವರ ಹೋರಾಟಗಳು ಜನತೆಗೆ ತಿಳಿದಿರುವ ವಿಷಯವಾಗಿದೆ. ಅತ್ಯಂತ ಉತ್ತಮ ಸಂಸದೀಯ ಪಟುವಾಗಿ ಕೆಲಸ ಮಾಡಿರುವುದು ಇತಿಹಾಸ.
ಅವರ ಅನುಭವ, ಬಾಗೇಪಲ್ಲಿ ಕ್ಷೇತ್ರದ ಜನರ ಜ್ವಲಂತ ಸಮಸ್ಯೆ ಪರಿಹಾರಕ್ಕಾಗಿ ಅವರ ಆಲೋಚನೆಯ ಕೊಸು
ಚಿತ್ರಾವತಿ ಅಣೆಕಟ್ಟು ಎಂಬುವುದು. 1998 ರಲ್ಲಿ ಜನರಿಗೆ ಉತ್ತಮ ನೀರಾವರಿ ಯೋಜನೆ ಕಲ್ಪಿಸುವ ಗುರಿಯೊಂದಿಗೆ ಅಂದಿನ ಮುಖ್ಯಮಂತ್ರಿ ಶ್ರೀ ಜೆ.ಹೆಚ್. ಪಟೇಲ್ ಸರ್ಕಾರದ ಮೇಲೆ ಒತ್ತಡ ಹೇರಿ ಚಿತ್ರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಬಾಗೇಪಲ್ಲಿ, ಗುಡಿಬಂಡೆ ಪಟ್ಟಣಗಳು ಸೇರಿದಂತೆ ಬಾಗೇಪಲ್ಲಿ ಕಸಬಾ ಹೋಬಳಿಯ ಹಾಗು ಗುಡಿಬಂಡೆ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಹಾಗು 2000 ಎಕರೆಗೆ ನೀರಾವರಿ ಕಲ್ಪಿಸುವ ಯೋಜನೆಯನ್ನು ರೂಪಿಸಿ ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯಲಾಯಿತು. ಅದೇ ರೀತಿ ಜೆ. ಹೆಚ್. ಪಟೇಲ್ ಸರ್ಕಾರದ ಕೊನೆ ಬಜೆಟ್ ನಲ್ಲಿ 8.50 ಕೋಟಿ ಯೋಜನೆಯ ಭಾಗವಾಗಿ 2.50 ಕೋಟಿ ಮೀಸಲಿಡಲಾಯಿತು. ನಂತರದ ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಪತನವಾಯಿತು.
1999 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂ ಜಿ.ವಿ.ಶ್ರೀರಾಮರೆಡ್ಡಿ ಸೋತರು. ಪಕ್ಷೇತರ ಶಾಸಕರಾಗಿ ಎನ್.ಸಂಪಂಗಿ ಗೆಲುವು ಸಾಧಿಸಿದರು. ಒಂದೂವರೆ ವರ್ಷ ಈ ಯೋಜನೆ ಬಗ್ಗೆ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ನಡೆಯಲಿಲ್ಲ ಮುಂದುವರೆದು ಯೋಜನೆಯನ್ನು ಮೂಲೆಗುಂಪು ಮಾಡಿದರು. ಈ ಸಂದರ್ಭದಲ್ಲಿ ಕಾಂ ಜಿ.ವಿ.ಶ್ರೀರಾಮರೆಡ್ಡಿ ಪಕ್ಷಾತೀತವಾಗಿ ಎಲ್ಲಾ ಜನರನ್ನು ಸಂಘಟಿಸಿ ಬಾಗೇಪಲ್ಲಿ ಪಟ್ಟಣದಲ್ಲಿ ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ರಚಿಸಿ ಅವರ ನಾಯಕತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು. ನಿರಂತರವಾಗಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಎಲ್ಲಾ ಹಳ್ಳಿಗಳಿಂದ ಜನರು ಸ್ವಯಂ ಪ್ರೇರಿತರಾಗಿ ಹೋರಾಟದಲ್ಲಿ ಭಾಗವಹಿಸಿದರು. 68 ದಿನಗಳ ನಿರಂತರ ಹೋರಾಟದಿಂದ ಜನರು ಬಾಗೇಪಲ್ಲಿ ಕ್ಷೇತ್ರದ ಬಂದ್ ನಡೆಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದರು. ಜನರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವವುದನ್ನು ಗಮನಿಸಿದ ಎಸ್ ಎಂ ಕೃಷ್ಣ ಸರ್ಕಾರ ಯೋಜನೆ ಜಾರಿಗೆ ಮುಂದಾಯಿತು. ಆಂದ್ರ ಪ್ರದೇಶ ಸರ್ಕಾರದ ಬಲಿಷ್ಠ ಶಾಸಕರಾಗಿದ್ದ ಪರಿಟಾಲ ರವಿ ನೇತೃತ್ವದಲ್ಲಿ ಅನಂತಪುರ ಶಾಸಕರು ಈ ಯೋಜನೆಗೆ ವಿರೋಧಿಸಿ ಪರಗೋಡು ಚಲೋ ಮೂಲಕ ರಾಜ್ಯ ಸರ್ಕಾರದ ವಿರೋಧದ ನಡೆವೆಯೂ ಬಾಗೇಪಲ್ಲಿ ಗೆ ನುಗ್ಗಿದರು ಆಂದ್ರದವರನ್ನು ಎದುರಿಸಿ ರಾಜ್ಯ ಪೊಲೀಸ್ ಗೆ ನೈತಿಕ ಧೈರ್ಯ ತುಂಬಿ ಅವರನ್ನು ಬಂಧಿಸುವ ಮೂಲಕ ಅವರ ಹೋರಾಟ ತೆಗೆದಿದ್ದು ಜಿವಿಎಸ್ ನೇತೃತ್ವದಲ್ಲಿ ಜನತೆ ನಡೆಸಿದ ಸಮರಶೀಲ ಹೋರಾಟ.


ಈ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಕ್ಷೇತ್ರದ ಶಾಸಕರಾಗಿದ್ದ ಎನ್ ಸಂಪಂಗಿ ಚಿತ್ರಾವತಿ ಡ್ಯಾಂ ನಿರ್ಮಾಣ ಮಾಡಬೇಕೆಂದು ಕೆಲ ಫ್ಲೋರೈಡ್ ಕಾಯಿಲೆಗೆ ತುತ್ತಾಗಿರುವ ಜನರನ್ನು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಭೇಟಿ ಮಾಡಿ ಮನವಿ ಮಾಡಿದ್ದರು.
ಚಿತ್ರಾವತಿ ಜಲಾಶಯದ ಮೂಲ ಯೋಜನೆಯನ್ನು ಬದಲಿಸಿ ಕೇವಲ ಕುಡಿಯುವ ಯೋಜನೆಯನ್ನಾಗಿ ಮಾರ್ಪಡಿಸಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಶಂಕುಸ್ಥಾಪನೆ ನೆರವೇರಿಸಿದರು.
2004 ರಲ್ಲಿ ಮತ್ತೆ ಶಾಸಕರಾಗಿ ಜಿ.ವಿ.ಶ್ರೀರಾಮರೆಡ್ಡಿ ಆಯ್ಕೆ ಆದ ನಂತರ ಈ ಯೋಜನೆಗೆ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳ 120 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯನ್ನು ಮತ್ತು ವಂಡಮಾನ್ ನದಿಯಿಂದ 63 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಹೆಚ್. ಡಿ. ಕುಮಾರಸ್ವಾಮಿ ಸರ್ಕಾರದಲ್ಲಿ ಅನುಮೋದನೆ ಪಡೆದು ಬಜೆಟ್ ನಲ್ಲಿ ಹಣವನ್ನು ತೆಗೆದಿಡಲಾಯಿತು ಮತ್ತು ಜಲಾಶಯದಿಂದ ಜಾಮೀನು ಕಳೆದುಕೊಳ್ಳುವ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸಿ ಈ ಅಣೆಕಟ್ಟು ಗೆ ಚಿತ್ರಾವತಿ ಜಲಾಶಯ ಎಂದು ಹೆಸರನ್ನು ಇಡಲಾಯಿತು. . ಈ ಯೋಜನೆ ಲೋಕಾರ್ಪಣೆ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ಹೆಚ್ ಡಿ ಕುಮಾರಸ್ವಾಮಿ ನೆರವೇರಿಸಿದರು.
2008 ರಲ್ಲಿ ಚುನಾವಣೆಯಲ್ಲಿ ಕಾಂ ಜಿ ವಿ ಶ್ರೀರಾಮರೆಡ್ಡಿ ಸೋತು ಕಾಂಗ್ರೆಸ್ ಶಾಸಕರಾಗಿ ಎನ್ ಸಂಪಂಗಿ ಆಯ್ಕೆಯಾದರು. ಅವರ ಅವಧಿಯಲ್ಲಿ ಹಳ್ಳಿಗಳಿಗೆ ನೀರು ಕೊಡಲಿಲ್ಲ.ಆವಾಗಲೂ ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ನೇತೃತ್ವದಲ್ಲಿ ನದಿಯಲ್ಲಿ ಇರುವ ಕಲ್ಲು, ಹೂಳು ತೆಗೆಯುವುದು ಮತ್ತು ಹಳ್ಳಿಗಳಿಗೆ ನೀರು ನೀಡಬೇಕೆಂದು ನಿರಂತರ ಹೋರಾಟವನ್ನು 65 ದಿನಗಳು ನಡೆಸಲಾಯಿತು.
ಅಂದಿನ ಶಾಸಕರು ಹಾಗೂ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡಿತು. ಮಾತ್ರವಲ್ಲದೆ ವ್ಯಾಪಕವಾದ ಭ್ರಷ್ಟಾಚಾರ ನಡೆಯಿತು. 2013-2025 ಈ ವರೆಗೂ ಶಾಸಕರಾಗಿ ಎಸ್ ಎನ್ ಸುಬ್ಬಾರೆಡ್ಡಿ ಇದ್ದಾರೆ. ಈ ಯೋಜನೆಯ ಒಂದು ಹಳ್ಳಿಗೂ ಚಿತ್ರಾವತಿ ಜಲಾಶಯ ದಿಂದ ನೀರು ಒದಗಿಸಿಲು ಸಾಧ್ಯವಾಗಿಲ್ಲ. ಕ್ಷೇತ್ರದ ಅಭಿವೃದ್ಧಿ ಸಂಪೂರ್ಣವಾಗಿ ನೆಲಕಚ್ಚಿದೆ ಈಗ ಬಾಗೇಪಲ್ಲಿ ಕ್ಷೇತ್ರ ಭೂಮಾಫಿಯಾ, ಬಾರ್ ಮಾಫಿಯಾಗಳ ಸ್ವರ್ಗವಾಗಿ ಮಾರ್ಪಟ್ಟಿದೆ. ಸುಬ್ಬಾರೆಡ್ಡಿ ನೂರಾರು ಎಕರೆ ಜಮೀನು ಅಕ್ರಮವಾಗಿ ಲೂಟಿ ಮಾಡಿದ್ದಾರೆ.ಇಡೀ ಕ್ಷೇತ್ರದಲ್ಲಿ ಲಂಚ, ಭ್ರಷ್ಟಾಚಾರ ಮಿತಿ ಮೀರಿದೆ. ಹೋರಾಟಗಾರರ ಮೇಲೆ ರೌಡಿಶೀಟರ್ ಓಪನ್ ಮಾಡಿ ಭೀತಿಗೊಳಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಿವಿಧ ರೀತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ, ಲಿಕ್ಕರ್ ಉದ್ಯಮ ಮಾಡುತ್ತಾ ಇರುವವರನ್ನು ಕ್ಷೇತ್ರದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ರಾಜಕೀಯ ನಾಯಕತ್ವ ನೀಡಿ ಕಾರ್ಪೊರೇಟ್ ರಾಜಕಾರಣ ಅನುಷ್ಠಾನಕ್ಕೆ ಮುಂದಾಗಿದ್ದಾರೆ.
ಈಗ ಹಳ್ಳಿಗಳಲ್ಲಿ ಬಡವರು, ರೈತರು ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರು ದಿವ್ಯ ನಿರ್ಲಕ್ಷ್ಯದಿಂದಾಗಿ ಇಂದು ಸಮಸ್ಯೆ ಬೆಳೆದಿದೆ.
ಶಾಸಕರು ಹೋರಾಟಗಳಿಂದ ಏನು ಸಾಧಿಸಲು ಸಾಧ್ಯವಿಲ್ಲ ಹಾಗೂ ಕೇವಲ ಕೆಲ ನಾಯಕರು ಅನುಗ್ರಹದಿಂದ ಆಗುತ್ತದೆ
ಎಂದು ಜನರನ್ನು ನಂಬಿಸುವ ಪ್ರಯತ್ನವೇ ಚಿತ್ರಾವತಿ ಜಲಾಶಯ ಹೆಸರನ್ನು ಎಸ್ ಎಂ ಕೃಷ್ಣ ಡ್ಯಾಂ ಎಂದು ನಾಮಕರಣ ಮಾಡಲು ಹೊರಟಿರುವುದು. ಸಿಪಿಐಎಂ ಪಕ್ಷವು ಕಳೆದ ಏಳು ದಶಕಗಳಿಂದ ಬಡವರಿಗೆ ಭೂಮಿಗಾಗಿ
ಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಜನರೊಂದಿಗೆ ಬೆರೆತು ಅಂದಿನ ಭೂಮಾಲಿಕರ ವಿರುದ್ಧ ಹೋರಾಡಿ ಚಳುವಳಿ ಬಲಿಷ್ಠ ವಾಗಿ ಬೆಳೆಯಿತು. ಈಗ ಬಂಡವಾಳಗಾರರು ಮತ್ತು ನವ ಭೂಮಾಲಿಕರ ಮೈತ್ರಿ ಈಗ ಬಾಗೇಪಲ್ಲಿ ಕ್ಷೇತ್ರದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ.ಇದೇ
ಸಂದರ್ಭದಲ್ಲಿ ಬಂಡವಾಳಗಾರರು ಮತ್ತು ಕೋಮುವಾದಿಗಳ ಮೈತ್ರಿ ಕ್ಷೇತ್ರದಲ್ಲಿ ಬೆಳೆಯಲು ಗ್ರಾಮೀಣ ಶ್ರೀಮಂತರನ್ನು ಸಂಘಟಿಸಲು ಮುಂದಾಗಿದೆ. ಈ ಎರಡೂ ಜನ ವಿರೋಧಿ ವರ್ಗಗಳ ವಿರುದ್ಧ ಗ್ರಾಮೀಣ ಬಡವರು,
ಬಡ ರೈತರು,ಮದ್ಯಮ ರೈತರನ್ನು ಸಂಘಟಿಸಲು ಸಿಪಿಐಎಂ ಪಕ್ಷವು ಬೀದಿಗೆ ಇಳಿದಿದೆ. ಚಿತ್ರಾವತಿ ಅಣೆಕಟ್ಟು ಹೆಸರು ಬದಲು ಮಾಡಲು ಹೊರಟಿರುವ ಶಾಸಕರ ಧೋರಣೆ ಖಂಡಿಸಿ ಪ್ರಾರಂಭವಾಗಿರುವ ಹೋರಾಟ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಪ್ರಾರಂಭವಾಗಿದೆ. ಶಾಸಕರು ಕ್ಷೇತ್ರದ ಜನರ ಭಾವನೆಗಳಿಗೆ ಗೌರವ ನೀಡಿ ತನ್ನ ಧೋರಣೆಯಿಂದ ವಾಪಸ್ ಬರ್ತಾರ ಇಲ್ಲವೇ ಎಂಬುದರ ಮೇಲೆ ಮುಂದಿನ ನಡೆ ಇರಲಿದೆ.
— —

LEAVE A REPLY

Please enter your comment!
Please enter your name here