ಗಂಗಾವತಿ : ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ. ಯುವ ಜನತೆ ಇದರಿಂದ ಹೊರ ಬಂದು ಸಮಾಜದಲ್ಲಿ ಉತ್ತಮ ಬದಕನ್ನು ರೂಪಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು.
ಗುರುವಾರದಂದು ನಗರದ ಕೃಷ್ಣ ದೇವರಾಯ ವೃತ್ತದಲ್ಲಿ ನಗರ ಪೋಲಿಸ್ ಇಲಾಖೆ, ಗೋಗ್ರಿನ್ ಸೈಕ್ಲಿಂಗ್, ಭಾರತೀಯ ವೈದ್ಯಕೀಯ ಸಂಘ ಮತ್ತು ಇತರೇ ಸಂಘಟನೆಗಳ ಸಹಯೋಗದಲ್ಲಿ ಮಾದಕ ವಸ್ತುಗಳ ಬಳಕೆ ವಿರೋಧಿ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವಸ್ತುಗಳಿಗೆ ಒಂದು ಬಾರಿ ಅಂಟಿಕೊಂಡರೇ ಅದರಿಂದ ಹೊರಬರಲು ಅಸಾಧ್ಯ, ವಿವಿಧ ಪಾರ್ಟಿಗಳಲ್ಲಿ ಇಂದು ಶೋಕಿಗಾಗಿ, ಅಂತಸ್ತಿಗಾಗಿ
ಸಿಗರೆಟ್, ಗುಟಖಾ, ಮದ್ಯ ಸೇವನೆ ಮಾಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ತಾವು ಅಲ್ಲದೇ ಮನೆಯವರು ಪಶ್ಚಾತಾಪ ಪಡುವ ಸನ್ನಿವೇಶ ಎದುರಾಗಲಿದೆ. ಇದರ ಬಳಕೆ ಕಾನೂನು ಬಾಹಿರವು ಆಗಿದ್ದು ಸಾಮಾಜಿಕ ಅನರ್ಥಗಳಿಗೂ ಕಾರಣವಾಗಲಿದೆ ಆದ್ದರಿಂದ ದಯಮಾಡಿ ಯಾವ ಯುವಕರು ಮಾದಕ ಸೇವನೆಯ ದಾಸರಾಗಬೇಡಿ ಎಂದು ಕರೆ ನೀಡಿದರು.
ನಂತರ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಎ.ಎಸ್.ಎನ್ ರಾಜು ಮಾತನಾಡಿ ಯುವ ಸಮೂಹ ದುಶ್ಚಟಗಳಿಗೆ ಅಂಟಿಕೊಂಡಿದ್ದು ಅದರಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಬಳೆಕೆ ಅಂಟಿಕೊಂಡ ಯುವಕ, ಯುವತಿಯರು ತಮ್ಮ ಪ್ರಜ್ಞೆಯನ್ನು ತಾವು ಕಳೆದುಕೊಂಡು ಸಮಾಜದಲ್ಲಿ ಕೆಟ್ಟ ಹೆಸರು ಪಡೆವ ಮೂಲಕ ಕುಟುಂಬ ಮತ್ತು ಸಮಾಜಕ್ಕೆ ಹಾನಿ ಮಾಡುತ್ತಾರೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಜಾಗೃತರಾಗಬೇಕು, ಆಡಿಕ್ಸನ್ ಸೆಂಟರ್ ಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದರು.
ನಂತರ ಜಾಗೃತಿಗಾಗಿ ಜರುಗಿದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಫೆದರ್ಸ್, ವಿಜಯನಗರ ಸ್ಪೋರ್ಟ್ಸ್ ಕ್ಲಬ್, ಲಯನ್ಸ್ ಕ್ಲಬ್, ಗಂಗಾವತಿ ಚಾರಣ ಸಂಘ, ಕಿಷ್ಕಿಂದ ಯುವ ಚಾರಣ ಬಳಗ ಮತ್ತು ಪರಿಸರ ಸೇವಾ ಟ್ರಸ್ಟ್ ಸೇರಿದಂತೆ ಹಲವು ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ್ ಮಾಳಿ, ಐಎಂಎ ಕಾರ್ಯದರ್ಶಿ ಡಾ. ನಾಗರಾಜ ವಕೀಲರಾದ ಅಭಿಷೇಕ, ಅರವಿಂದ ಗೌಳಿ, ಡಾ. ಅಮರ ಪಾಟೀಲ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್, ಶ್ರೀಕಾಂತ್ ಎಂ, ಜಂಬಣ್ಣ, ನಾಗೇಶ್ ಗುನ್ನಾಳ, ದೇವರಾಜ, ಚಂದ್ರಪ್ಪ, ದಂತ ವೈದ್ಯ ಚೇತನ್ ಕುಮಾರ ಹಿರೇಮಠ, ಶಿವಶಂಕರ ಭಂಡಾರಕರ್, ಮಂಜುನಾಥ ಗುಡ್ಲಾನೂರ, ಹನಮೇಶ, ಪಿಎಸ್ಐ ಶಾರದಮ್ಮ,ಎಸ್ಐ ಅಜೀಜ್, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.