ಚಾಮರಾಜನಗರ:ಕಲಿಯುವ ವಯಸ್ಸಿನಲ್ಲಿ ವಿದ್ಯಾರ್ಥಿಗಳಲ್ಲಿ ಜ್ಞಾನದ ದಾಹ ಮತ್ತು ಕಲಿಕೆಯ ಹಂಬಲ ಜ್ವರದಂತೆ ಕಾಡಬೇಕು. ಪ್ರತಿಭೆ ಅಂದರೆ ಕೇವಲ ಪರೀಕ್ಷಾ ಫಲಿತಾಂಶ ಅಲ್ಲ. ಜ್ಞಾನ ಮತ್ತು ನಿರಂತರ ಸಾಧನೆ ಮತ್ತು ನೀವು ಪಟ್ಟ ಪರಿಶ್ರಮ ಮೂರೂ ಬೆರೆತ ಮಿಶ್ರಣ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಕೆ.ವಿ.ಪ್ರಭಾಕರ್, ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಎಲ್ಲಾ ಮಕ್ಕಳಿಗೂ ಎಲ್ಲಾ ಪೋಷಕರ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇವತ್ತು ಶಿಕ್ಷಣ ವ್ಯವಸ್ಥೆ ಹೇಗಾಗಿದೆ, ಎಷ್ಟು ದುಬಾರಿ ಆಗಿದೆ‌ ಎಂದರೆ, ಪೋಷಕರು ಸದಾ ಮಕ್ಕಳ ಶಿಕ್ಷಣದ ಬಗ್ಗೆಯೇ ಯೋಚಿಸುವಂತಾಗಿದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಪೋಷಕರು ತಮ್ಮ ಅಗತ್ಯ ಮತ್ತು ಅನುಕೂಲಗಳ ಜೊತೆ ರಾಜಿ ಮಾಡಿಕೊಳ್ಳುತ್ತಾರೆ. ಪೋಷಕರ ಈ ತಪಸ್ಸಿಗೆ ಸಾರ್ಥಕತೆ ಬರುವುದು ಅವರ ಮಕ್ಕಳು ಸಾಧನೆ ಮಾಡಿದಾಗ, ಮಕ್ಕಳ ಪ್ರತಿಭಾ ಪುರಸ್ಕಾರವನ್ನು ಕಣ್ಣಲ್ಲಿ ಕಾಣುವ ಪೋಷಕರಿಗೆ ಇದಕ್ಕಿಂತ ದೊಡ್ಡ ಸಮಾಧಾನ ಬೇರೆ ಇರುವುದಿಲ್ಲ. ಜೊತೆಗೆ ಮಕ್ಕಳು ಪರಿಶ್ರಮದಿಂದ ಕಲಿತರೆ ಪೋಷಕರ ಮೇಲಿನ ಆರ್ಥಿಕ ಹೊರೆಯೂ ಕಡಿಮೆ ಆಗುತ್ತದೆ. ಆರ್ಥಿಕ ಹೊರೆ ಕಡಿಮೆ ಇದ್ದಾಗ ಸಹಜವಾಗಿ ಪೋಷಕರ ಆರೋಗ್ಯ ಮತ್ತು ಮನೆಯ ಆರೋಗ್ಯವೂ ಚೆನ್ನಾಗಿರುತ್ತದೆ. ಹೀಗಾಗಿ SSLC ಮತ್ತು PUC ದಾಟಿದ ನಿಮ್ಮಗಳ ಮೇಲೆ ಪೋಷಕರನ್ನು ಖುಷಿಯಾಗಿಡುವ ಜವಾಬ್ದಾರಿ ಇರುತ್ತದೆ.

ನಿಮ್ಮ ಪರಿಶ್ರಮ ಮತ್ತು ಜ್ಞಾನದಾಹ ಹಾಗೂ ಕಲಿಕೆಯ ಹಸಿವು ಹೆಚ್ಚಾಗಬೇಕು. ಈ ದಾಹ ಮತ್ತು ಹಸಿವು ನಿಮಗೆ ಜ್ವರದಂತೆ ಕಾಡಬೇಕು ಎಂದು ಕಿವಿಮಾತು ಹೇಳಿದರು.

LEAVE A REPLY

Please enter your comment!
Please enter your name here