ನಮ್ಮ ಸರ್ಕಾರ ಆರಂಭಿಸಿದ ₹600 ಕೋಟಿಗೂ ಅಧಿಕ ವೆಚ್ಚದ ಅನುಭವ ಮಂಟಪವನ್ನು ಮುಂದಿನ ವರ್ಷ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು.

ಸಕಲ ವೃತ್ತಿಗಳೂ ಪವಿತ್ರ ಎನ್ನುವ ಮಹಾನ್ ಮಾನವೀಯ ಸಂದೇಶವನ್ನು ಜಗತ್ತಿಗೆ ನೀಡಿದ ಬಸವಣ್ಣನವರು ಕ್ರಾಂತಿಪುರುಷ ಮಾತ್ರವಲ್ಲ, ವಿಶ್ವ ವಿಖ್ಯಾತ ಆರ್ಥಿಕ ತಜ್ಞರೂ ಆಗಿದ್ದರು. ಕಾಯಕ ಮತ್ತು ದಾಸೋಹದ ಶ್ರಮ ಸಂಸ್ಕೃತಿಯ ಮಹತ್ವವನ್ನು ಬಸವಣ್ಣ ಇಡೀ ವಿಶ್ವಕ್ಕೆ ನೀಡಿದರು.

ಬಸವಾದಿ ಶರಣರಿಂದ ಆದ ಜಾತಿ ವ್ಯವಸ್ಥೆ ವಿರುದ್ದದ ಸಾಮಾಜಿಕ ಕ್ರಾಂತಿ ಪ್ರಪಂಚದ ಬೇರೆ ಎಲ್ಲೂ ನಡೆದಿಲ್ಲ. ಸಮ ಸಮಾಜ ಮತ್ತು ಜಾತ್ಯತೀತ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಬಸವಾದಿ ಶರಣರು ನುಡಿದಂತೆ ನಡೆದರು.

ಜಾತಿ, ವರ್ಗ ರಹಿತ ಮಾನವೀಯ ಸಮಾಜ ಅವರ ತುಡಿತವಾಗಿತ್ತು. ಬಸವಾದಿ ಶರಣರ ಅನುಭಾವವೇ ವಚನಗಳಾಗಿವೆ. ವಚನ‌ ಎಂದರೆ ಮಾತು. ಕನ್ನಡ ಸಾಹಿತ್ಯದಲ್ಲಿ ವಚನ ಮತ್ತು ದಾಸ ಸಾಹಿತ್ಯ ದೊಡ್ಡ ಮೈಲಿಗಲ್ಲು. ಅಕ್ಷರ ಸಂಸ್ಕೃತಿಯಿಂದ ವಂಚಿತರನ್ನಾಗಿ ಮಾಡಲಾಗಿದ್ದವರಿಗೆ ವಚನ ಸಾಹಿತ್ಯ ಆಡು ಮಾತಿನ ಮೂಲಕ ತಲುಪಿತು.

ಸಂಸ್ಕೃತ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸ ಹುಯ್ಯುವ ಶಿಕ್ಷೆ ಇದ್ದುದ್ದರಿಂದ ಶೂದ್ರ ಸಮುದಾಯ ಶಿಕ್ಷಣದಿಂದ ವಂಚಿತರಾದರು.
ನನ್ನ ಅಪ್ಪ, ಅಮ್ಮ ಇಬ್ಬರೂ ಶಿಕ್ಷಣದಿಂದ ವಂಚಿತರಾಗಿದ್ದರು. ರಾಜಪ್ಪ ಮೇಸ್ಟ್ರು ಕಾರಣದಿಂದ ನಾನು ನೇರವಾಗಿ ಐದನೇ ತರಗತಿಗೆ ದಾಖಲಾಗಿ ಶಿಕ್ಷಣ ಪಡೆದು ಎರಡು ಬಾರಿ ಮುಖ್ಯಮಂತ್ರಿಯಾದೆ. ಅಂಬೇಡ್ಕರ್ ಅವರ ಕಾರಣದಿಂದ ನನಗೆ ಶಿಕ್ಷಣ ಸಿಕ್ಕರೆ, ಸಂವಿಧಾನದ ಕಾರಣದಿಂದ ನಾನು ಮುಖ್ಯಮಂತ್ರಿಯಾದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here