ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಯ ಆವರಣದಲ್ಲಿ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆರೋಗ್ಯ ಧಾಮ ಹಾಗೂ ಶೌಚಾಲಯದ ನೂತನ ಕಟ್ಟಡದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಇಂದು ನೆರವೇರಿಸಿದರು.
ನಂತರ ಮಾತನಾಡಿದ ಅವರು ಅನೇಕ ದಿನಗಳಿಂದ ಮಿಮ್ಸ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಆರೈಕೆ ಮಾಡಲು ಬರುವ ಸಂಬಂಧಿಕರಿಗೆ ತಂಗಲು ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗುತ್ತಿತ್ತು ಇವೆಲ್ಲವನ್ನೂ ನೀಗಿಸಲು ಹಾಗೂ ಜಿಲ್ಲೆಯ ಸಾರ್ವಜನಿಕರ ಅನುಕೂಲಕ್ಕಾಗಿ 60 ಲಕ್ಷ ಸಿ.ಆರ್.ಎಸ್. ಅನುದಾನದಲ್ಲಿ ಶೌಚಾಲಯ ಹಾಗೂ ಆರೋಗ್ಯ ಧಾಮವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಮಿಮ್ಸ್ ಆವರಣದ ಹೆರಿಗೆ ವಾರ್ಡ್ ಮುಂಭಾದಲ್ಲಿ 34×56 ಚದರ ಅಡಿಯ ವಿಶಾಲವಾದ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ, ಕೊಠಡಿಯಲ್ಲಿ ವಿದ್ಯುತ್ ದೀಪ, ಫ್ಯಾನ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ, ಆರೋಗ್ಯ ಧಾಮದ ಪಕ್ಕದಲ್ಲೇ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದರು.
ಆರೋಗ್ಯ ಧಾಮ ಕೊಠಡಿಯಲ್ಲಿ 150 ಜನ ಉಳಿದುಕೊಳ್ಳುವ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಕಾಟ್ ಗಳ ವ್ಯವಸ್ಥೆ ಮಾಡಲಾಗುವುದು, ಮಿಮ್ಸ್ ನಲ್ಲಿ ಅನೇಕ ಸಮಸ್ಯೆಗಳಿದ್ದು ಮುಂದಿನ ವರ್ಷದೊಳಗೆ ಸಾಧ್ಯವಾದ ಮಟ್ಟಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಹಾಗೂ ನಾನು ಶ್ರಮಿಸುತುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಿಮ್ಸ್ ನಿರ್ದೇಶಕ ಡಾ. ನರಸಿಂಹ ಸ್ವಾಮಿ, ಮುಡಾ ಅಧ್ಯಕ್ಷ ನಯೀಮ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.