ಬೆಂಗಳೂರು: 108 ಆಂಬ್ಯುಲೆನ್ಸ್ ಸೇವೆಯನ್ನು ಇನ್ಮುಂದೆ ಸರ್ಕಾರವೇ ನಿರ್ವಹಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದುವರೆಗೂ ಈ ಸೇವೆಯನ್ನು ಖಾಸಗಿಯವರು ನಿರ್ವಹಿಸುತ್ತಿದ್ದು, ಇದರಿಂದಾಗಿ ಸಾಕಷ್ಟು ಸಮಸ್ಯೆಗಳಿದ್ದವು. ಈ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ಹಾಗೂ ಖಾಸಗಿ ನಿರ್ವಹಣೆಯಿಂದಾಗಿ ಸರ್ಕಾರಕ್ಕೆ ಆಗುತ್ತಿದ್ದ ನಷ್ಟ ತಪ್ಪಿಸಲು ನಮ್ಮ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಆಂಬ್ಯುಲೆನ್ಸ್‌ಗಳು ಸರ್ಕಾರದ್ದೇ ಆದರೂ ನಿರ್ವಹಣೆ ಮಾತ್ರ ಖಾಸಗಿಯವರದ್ದಾಗಿತ್ತು. ವಾಹನಗಳ ಡಿಸೇಲ್ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಚಾಲಕರ ವೇತನವನ್ನು ಸರ್ಕಾರ ಬಿಡುಗಡೆಗೊಳಿಸಿದರೂ ಏಜೆನ್ಸಿಗಳು ಸಕಾಲಕ್ಕೆ ಪಾವತಿ ಮಾಡುತ್ತಿರಲಿಲ್ಲ. ಏಜೆನ್ಸಿಗಳು ವೇತನ ಬಿಡುಗಡೆಗೊಳಿಸಲು ಪ್ರತಿ ಬಾರಿ ಸರ್ಕಾರ ಮಧ್ಯೆ ಪ್ರವೇಶಿಸಬೇಕಾಗಿತ್ತು. ಖಾಸಗಿ ನಿರ್ವಹಣೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವೇ ಆಗುತ್ತಿತ್ತು.

ಹೀಗಾಗಿ ಸರ್ಕಾರ ಈ ಐತಿಹಾಸಿಕ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಸಾಫ್ಟ್‌ವೇರ್‌ ಸಿದ್ಧಪಡಿಸಲಾಗಿದ್ದು ಚಾಮರಾಜನಗರದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ಸೇವೆಗಳನ್ನು ಆರೋಗ್ಯ ಇಲಾಖೆಯ ನಿರ್ವಹಣಾ ವ್ಯಾಪ್ತಿಗೆ ತರಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here