ಅಕ್ರಮ ಗಣಿಗಾರಿಕೆಯ ಕಿಂಗ್ ಪಿನ್ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಓಬಳಾಪುರ ಮೈನ್ ಪ್ರಕರಣದಲ್ಲಿ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯವು ತಪ್ಪಿತಸ್ಥ ಎಂದು ಮತ್ತು 7 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿರುವುದು ಬಹಳ ಉತ್ತಮ ಬೆಳವಣಿಗೆ ಮತ್ತು ಸ್ವಾಗತಾರ್ಹ. ಗಾಲಿ ಜನಾರ್ಧನ ರೆಡ್ಡಿಯವರ ಬಳ್ಳಾರಿ ರಿಪಬ್ಲಿಕ್ ಅನ್ನು ಉರುಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಸಮಾಜ ಪರಿವರ್ತನಾ ಸಮುದಾಯದ ಎಸ್. ಆರ್. ಹಿರೇಮಠ್ ಮತ್ತು ಆ ಸಂದರ್ಭದಲ್ಲಿ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹೆಗಡೆ ಅವರ ಪಾತ್ರ ಬಹಳ ಮಹತ್ವದ್ದು. ಇದು ಇಡೀ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಎರಡನೇ ಮಹತ್ವದ ತೀರ್ಪು. ಈಗಾಗಲೇ ಮತ್ತೊಂದು ಪ್ರಕರಣದಲ್ಲಿ ಸತೀಶ್ ಸೈಲ್ ಬೇಲೇಕೇರಿ ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಕಂಡು ಕೇಳದಂತಹ ವ್ಯಾಪಕ ಅಕ್ರಮ ಗಣಿಗಾರಿಕೆ ನಡೆದಿದ್ದು, ಆಯಾ ಮೂಲಕ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವ ಹಂತಕ್ಕೆ ಹೋಗಿದ್ದಂತಹ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಸುಧೀರ್ಘವಾಗಿ ಈ ಹೋರಾಟವನ್ನು ಹಿರೇಮಠ್ ಅವರು ಇಲ್ಲಿಯವರೆಗೂ ಮುಂದುವರೆಸಿರುವುದು ಗಮನಾರ್ಹ, ಅವರ ಬಗ್ಗೆ ರಾಜ್ಯವು ಅವರನ್ನು ನೆನೆಯಬೇಕು.

ಅನಂತಪುರ ಜಿಲ್ಲೆ ಪೆನುಕೊಂಡ ತಾಲೂಕಿನಲ್ಲಿನ ಅಂತರಗಂಗಮ್ಮ ಕೊಂಡದಲ್ಲಿ ಓಬಳಾಪುರ ಮೈನ್ಸ್ 3 ಗಣಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿ ಕೊಳ್ಳೆ ಹೊಡೆದಿರುವ ಪ್ರಕರಣ. ಈ ಗಣಿಯು ಕಳಪೆ ಗುಣಮಟ್ಟದ ಅದಿರನ್ನು ಹೊಂದಿತ್ತು, ಆದರೆ ಉತ್ತಮ ಅದಿರಿರುವ ಕರ್ನಾಟಕದ ಭಾಗದಲ್ಲಿ ಗಣಿಗಾರಿಕೆ ಮಾಡಿ ಕೃಷ್ಣಪಟ್ಟಣಂ ಬಂದಿರಿನ ಮೂಲಕ ರಫ್ತು ಮಾಡಿರುತ್ತಾರೆ.

ಬಿಜೆಪಿ ಅವರನ್ನು ತಕ್ಷಣ ಹೊರ ಹಾಕಬೇಕು. ದೇವಾಲಯಗಳನ್ನು ರಕ್ಷಣೆ ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿಯವರು, ಸುಗಲಮ್ಮ ದೇವಿ ಗುಡಿಯನ್ನು ಉರುಳಿಸಿದ ಜನಾರ್ದನ ರೆಡ್ಡಿಯವರನ್ನು ಪಕ್ಷದಲ್ಲಿ ಇರಿಸಿಕೊಂಡಿರುವುದು ಅವರು ಹೇಳುವುದಕ್ಕೂ ಮತ್ತು ನಡೆದುಕೊಳ್ಳುವುದಕ್ಕೂ ಬಹಳ ಅಂತರವಿದೆ ಎಂದು ತೋರಿಸುತ್ತದೆ. ಈ ವಿಚಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಬೇಕು.

ಕರ್ನಾಟಕ ರಾಜ್ಯ ಸರ್ಕಾರವು ಉಳಿದ ಅಕ್ರಮಗಳನ್ನು ಸೂಕ್ತವಾಗಿ ತನಿಖೆ ನಡೆಸಬೇಕು ಎಂದು ಕೆಆರ್ ಎಸ್ ಪಕ್ಷ ಆಗ್ರಹಿಸುತ್ತದೆ. ಈ ಹಿಂದೆ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆ, ಈಗ ಕಾನೂನಿನ ಅಡಿಯಲ್ಲಿ ವ್ಯಾಪಕವಾಗಿ ವಿನಾಶಕಾರಿ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿ, ಗಣಿಗಾರಿಕೆಗೆ ತದೆ ನೀಡಬೇಕು ಎಂದು ಆಗ್ರಹಿಸುತ್ತೇವೆ.

LEAVE A REPLY

Please enter your comment!
Please enter your name here