ಬೆಂಗಳೂರು (ಏಪ್ರಿಲ್ 23):- ದೇಶದಲ್ಲಿ ಬಹಳ ಶಕ್ತಿಯುತ, ಪರಿಣಾಮಕಾರಿಯಾದ ಮಿಲಿಟರಿ ಇಂಟಲಿಜೆನ್ಸ್ ಇದ್ದರೂ ಸಹ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಹೇಗಾಯ್ತು ಎಂಬುದು ಅತಿದೊಡ್ಡ ಪ್ರಶ್ನೆಯಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸುತ್ತೇನೆ. ಪ್ರಾಣ ಕಳೆದುಕೊಂಡಿರುವ 27ಕ್ಕು ಹೆಚ್ಚು ಜನರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬ ವರ್ಗದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ. ಕರ್ನಾಟಕದ ಇಬ್ಬರು ಹತ್ಯೆಯಾಗಿದ್ದಾರೆ. ಅವರ ಕುಟುಂಬಸ್ಥರಿಗೆ ಸಾಂತ್ವಾನವನ್ನು ತಿಳಿಸಿದರು.

ನಮ್ಮಲ್ಲಿ ಬಹಳ ಪರಿಣಾಮಕಾರಿಯಾದ, ಶಕ್ತಿಯುತವಾದ ಮಿಲಿಟರಿ ಇಂಟಲಿಜೆನ್ಸ್ ಇದೆ. ಅನೇಕ ಸಂದರ್ಭಗಳಲ್ಲಿ ಮಿಲಿಟರಿ ಇಂಟಲಿಜೆನ್ಸ್ ಒಳ್ಳೆಯ ಕೆಲಸವನ್ನು ಮಾಡಿದೆ. ಯಾಕೆ ಇಂಟಲಿಜೆನ್ಸ್ ಫೇಲ್ಯೂರ್ ಆಯ್ತು. ಟೆರರಿಸ್ಟ್‌ಗಳು ಎಲ್ಲಿಂದ, ಹೇಗೆ ಬಂದ್ರು ಎಂಬುದು ಅತಿದೊಡ್ಡ ಪ್ರಶ್ನೆಯಾಗಿದೆ ಎಂದರು.

ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪುಲ್ವಾಮಾ ದಾಳಿ ನಂತರ ಇಲ್ಲಿಯವರೆಗೆ ಇಂತಹ ದುರ್ಘಟನೆಗಳು ನಡೆದಿರಲಿಲ್ಲ. ಹಿಂದುಗಳನ್ನು ಗುರಿ ಮಾಡಿದ್ದಾರೆ. ದಾಳಿ ವೇಳೆ ‘ನೀನು ಹಿಂದು ಅದಕ್ಕಾಗಿ ಕೊಲ್ಲುತ್ತಿದ್ದೇವೆ’ ಎಂದು ಭಯೋತ್ಪಾದಕರು ಹೇಳಿಕೊಂಡಿರುವುದು ನಿಜಕ್ಕು ಆತಂಕಕಾರಿ ವಿಚಾರ. ಇದು ಹೊಸದು ಅಲ್ಲ ಅನ್ನಿಸುತ್ತದೆ. ದಾಳಿ ಮಾಡುವಾಗ ಅನೇಕ ಸಂದರ್ಭದಲ್ಲಿ ಆ ಮಾತುಗಳನ್ನು ಹೇಳಿದ್ದಾರೆ. ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸೂಕ್ತವಾದ ಕ್ರಮವನ್ನು ಮುಲಾಜಿಲ್ಲದೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ನಾವೆ ಮಾಡಿರುವುದಾಗಿ ಸಂಘಟನೆಗಳು ಹೇಳಿಕೊಂಡಿವೆ. ಆ ಸಂಘಟನೆ ಎಲ್ಲಿವೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು. ಇಂಟಲಿಜೆನ್ಸ್ ವೈಫಲ್ಯ ಆದ ಮೇಲೆ ಭದ್ರತಾ ವೈಫಲ್ಯವೂ ಆಗಲೇಬೇಕು. ಮಿಲಿಟರಿ ಇಂಟಲಿಜೆನ್ಸ್ ಕಣ್ತಪ್ಪಿಸಿ ಉಗ್ರರು ಬಂದಿದ್ದಾರೆ. ಜನರನ್ನು ಕರೆದು, ಬಟ್ಟೆ ತೆಗೆಸಿ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಕೆಲ ಗಂಭೀರವಾದ, ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಕೃತ್ಯಕ್ಕೆ ಸ್ಥಳೀಯರ ಸಹಕಾರ ಇದ್ದುಕೊಂಡೇ ಆಗಿರಲಿ ಅಥವಾ ಸ್ಥಳೀಯರ ಸಹಕಾರ ಇಲ್ಲದೆಯೂ ಆಗಿರಲಿ. ನಮ್ಮ ಫೋರ್ಸ್ ಒಳಗಡೆ ಯಾರಾದರು ಸಹಕಾರ ಮಾಡಿದವರು ಇದ್ದರು ಸಹ ಅದನ್ನೆಲ್ಲ ಪತ್ತೆಹಚ್ಚಿ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇದು ನಮ್ಮ ದೇಶದ ಪ್ರಶ್ನೆ‌. ಹೆಚ್ಚಿನ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು‌ ಎಂದು ಹೇಳಿದರು.

ಕಾಶ್ಮೀರದಲ್ಲಿ ಸೆಕ್ಯೂರಿಟಿ ಕಡಿಮೆಯಾಗಿತ್ತು. ಶಾಂತಿ ನೆಲೆಸಿದ್ದರಿಂದ ಸೆಕ್ಯೂರಿಟಿಯನ್ನು ವಾಪಸ್ ಪಡೆದಿದ್ದರು ಎಂಬುದರ ಬಗ್ಗೆ ನಮಗೆ ನಿರ್ಧಿಷ್ಟವಾದ ಮಾಹಿತಿಗಳು ಇಲ್ಲ. ಊಹಾಪೋಹಗಳ ಮಾತನಾಡಲು ಆಗುವುದಿಲ್ಲ. ಸೆಕ್ಯೂರಿಟಿ ದೃಷ್ಟಿಯಲ್ಲಿ ನಾವು ಫೇಲ್ ಆಗಿದ್ದೇವೆ. ಅದಕ್ಕೆ ಕ್ರಮ ತೆಗೆದುಕೊಳ್ಳವೇಕು. ರಾಜ್ಯ ಸರ್ಕಾರದಿಂದ ಮಾನ್ಯ ಮುಖ್ಯಮಂತ್ರಿಯವರು ವಿಶೇಷ ತಂಡವನ್ನು ಕಾಶ್ಮೀರಕ್ಕೆ ಕಳಿಸಿದ್ದಾರೆ‌. ಸಚಿವರಾದ ಸಂತೋಷ್ ಲಾಡ್ ಅವರು ಸ್ಥಳಕ್ಕೆ ಹೋಗಿ ಮಾಹಿತಿ ತೆಗೆದುಕೊಂಡ ಮೇಲೆ ಕನ್ನಡಿಗರ ಬಗ್ಗೆ ಮಾಹಿತಿ ಸಿಗುತ್ತದೆ. ಅವರಿಗೆ ಅಗತ್ಯ ರಕ್ಷಣೆ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದಿರುವ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಹೆಸರು ಬಳಸಿ ನಾವು ಮಾತನಾಡೇ ಇಲ್ಲ. ಕಾಂಗ್ರೆಸ್, ಬಿಜೆಪಿ ಮತ್ತೊಂದು ಪಕ್ಷದ ಪ್ರಶ್ನೆ ಅಲ್ಲ ಇದು. ಇದು ದೇಶದ ಭದ್ರತೆ ಮತ್ತು ನಮ್ಮ ಸಮುದಾಯಗಳ ಪ್ರಶ್ನೆ. ಅದಕ್ಯಾಕೆ ನಾವು ರಾಜಕಾರಣ ಮಾಡಬೇಕು. ಈ ವಿಚಾರದಲ್ಲಿ ಯಾಕೆ ನಾವು ರಾಜಕಾರಣ ಮಾಡಬೇಕು‌. ಯಾವುದೇ ಪಕ್ಷಗಳ ಹೆಸರೇ ಹೇಳಬಾರದು. ನಾನು ಕೇಂದ್ರ ಸರ್ಕಾರ ಅಂತ ಹೇಳಿದ್ದೇನೆ. ಬಿಜೆಪಿ ಎಂದು ಹೇಳಿದ್ದೆನೆಯೇ? ಬಿಜೆಪಿ ಫೆಲ್ಯೂರ್ ಅಂತ ನನಗೆ ಹೇಳಲು ಆಗುವುದಿಲ್ಲವೇ? ಇಂತಹ ಸಂದರ್ಭದಲ್ಲಿ ನಾವು ಪಕ್ಷ, ಬೇದವನ್ನು ಮೀರಿ ಒಟ್ಟಾಗಿ ನಿಲ್ಲಬೇಕು ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ದುಡ್ಡು ಉಳಿಸಲು 1 ಲಕ್ಷ ಸೈನಿಕರನ್ನು ವಾಪಸ್ ಕರೆಸಿಕೊಂಡರು ಎಂಬ ಆರೋಪಗಳ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಏನುಬೇಕಾದರು ಊಹಿಸಬಹುದು. ಅದು ಬರೀ ವ್ಯಾಖ್ಯಾನ ಅಷ್ಟೆ ಆಗುತ್ತದೆ. ಯಾಕಾಯ್ತು ಅಂತ ವಿಶ್ಲೇಷಣೆ ಮಾಡೋಣ. ಇಷ್ಟು ದಿನ ಶಾಂತಿ ನೆಲೆಸಿತ್ತು ಎಂಬ ಕಾರಣದಿಂದ ರಿಲ್ಯಾಕ್ಸ್ ಮಾಡಿರಬಹುದು. ಆದರೆ, ಮುಂದೆ ಏನೆಲ್ಲ ವರದಿ ಬರುತ್ತದೆ ನೋಡೋಣ. ರಾಜ್ಯ ಸರ್ಕಾರವು ತನ್ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here