ಶಾಂತರಸರು ಕತೆ, ಕವಿತೆ, ಕಾದಂಬರಿ, ನಾಟಕ, ಗಜಲ್, ಸಂಪಾದನೆ, ಸಂಶೋಧನೆ, ಅನುವಾದ ಕ್ಷೇತ್ರಗಳಲ್ಲಿ ಅಚ್ಚಳಿಯದಂತಹ ಛಾಪು ಮೂಡಿಸಿದ್ದಾರೆ. ಜೊತೆಗೆ ಪ್ರಕಾಶನ ಸಂಸ್ಥೆಯನ್ನು ಕೂಡ ಸ್ಥಾಪಿಸಿ ಹಲವು ಸಾಹಸಗಳನ್ನು ಮೆರೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡು ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಯಿಂದ ನಿವೃತ್ತರಾದವರು. ಮಾನವೀಯತೆಯ ಪ್ರತಿಪಾದನೆ, ಪುಸ್ತಕಪ್ರೇಮ, ಪ್ರಜಾಸತ್ತಾತ್ಮಕ ಮೌಲ್ಯಗಳು ಅವರಲ್ಲಿ ನಿರಂತರವಾಗಿ ಅಭಿವ್ಯಕ್ತಿ ರೂಪಪಡೆಯುತ್ತಿದ್ದವು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಮ್ಮ ನಡೆನುಡಿಯಲ್ಲಿ ಅಳವಡಿಸಿಕೊಂಡಿದ್ದ ಇವರು, ಶರಣರ ನಿರ್ಭೀತ ಮನೋಧರ್ಮವನ್ನು ಜೀವನದ ಉಸಿರಾಗಿಸಿಕೊಂಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕೂಡ ತಿರಸ್ಕರಿಸುವಷ್ಟು ನಿಷ್ಠುರತೆ ಅವರ ವ್ಯಕ್ತಿತ್ವದಲ್ಲಿ ನೆಲೆಯಾಗಿತ್ತು. ಜನರ ಆಶೋತ್ತರಗಳನ್ನು ಈಡೇರಿಸದ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲವೆಂದು ಬಂಡಾಯದ ಬಾವುಟ ಹಾರಿಸಿ ಶಾಂತರಸರು ಲಾವಾರಸವಾಗಿ ಚಿಮ್ಮಿದ್ದರು. ಹೀಗೆ ಪ್ರಭುತ್ವವನ್ನು ಅತ್ಯಂತ ವಿಮರ್ಶಾತ್ಮಕವಾಗಿ ನೋಡುತ್ತಿದ್ದ ಅವರ ಕ್ರಮ ವಿಶಿಷ್ಟವಾದುದು. ವಿವಿಧ ಪ್ರಕಾರಗಳಲ್ಲಿ ಸುಮಾರು 46 ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ. ಅವರ ಶತಮಾನೋತ್ಸವವನ್ನು ಕರ್ನಾಟಕದ ನೂರಾರು ಕಡೆಗೆ ಆಚರಿಸುವ ಮೂಲಕ ಅವರ ಬರಹ – ಬದುಕನ್ನು ಯುವ ಜನರಿಗೆ ತಲುಪಿಸುವ ಶಾಂತರಸ 100 ಮೂವತ್ತೊಂದು ಜಿಲ್ಲೆಗಳು, ಒಂದೇ ಕರ್ನಾಟಕ ಎಂಬ ಕಾರ್ಯಕ್ರಮವನ್ನು ಸಂಸ ಥಿಯೇಟರ್‌ ಜೊತೆ ಕರ್ನಾಟಕದ 31 ಜಿಲ್ಲೆಗಳ ಸಂಘ-ಸಂಸ್ಥೆಗಳು ಕೈ ಜೋಡಿಸಿವೆ.ಈ ಪ್ರಯತ್ನಕ್ಕೆ ನೀವೆಲ್ಲ ಬನ್ನಿ ನಮ್ಮ ಜೊತೆಗೂಡಿ.

LEAVE A REPLY

Please enter your comment!
Please enter your name here