ಮಲೇಷ್ಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಸ್ಫೋಟ
ಮಲೇಷ್ಯಾದ ಕೌಲಾಲಂಪುರ ಮಹಾನಗರದ ಹೊರವಲಯದಲ್ಲಿ ಪುಚಾಂಗ್ ಎಂಬಲ್ಲಿ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿ, ನೂರಾರು ಮಂದಿ ಸುಟ್ಟಗಾಯಗಳಿಗೆ, ಉಸಿರಾಟದ ತೊಂದರೆಗಳಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಿನ ಪ್ರಮಾಣ ಇನ್ನೂ ವರದಿ ಆಗಿಲ್ಲ.
ಇಂದು (ಮಂಗಳವಾರ ಬೆಳಗ್ಗೆ) ಸಂಭವಿಸಿರುವ ಈ ಅವಘಡದಲ್ಲಿ ಬೆಂಕಿಯ ಕೆನ್ನಾಲಗೆ 20 ಮಹಡಿಗಳ ಮನೆಯಷ್ಟು ಎತ್ತರಕ್ಕೆ ಹರಡಿದ್ದು, ಐದಾರು ಮೈಲಿ ದೂರದಿಂದಲೂ ಕಾಣಿಸುತ್ತಿದೆ ಅಂತೆ.
ಇದು ಎಲ್ಲೋ ದೂರದ ಕಥೆ.
ನಮ್ಮ ಕರಾವಳಿಯಲ್ಲೂ ನಾವು ಇಂತಹದೇ ಅಗ್ನಿಕುಂಡದ ಮೇಲೆ ಬದುಕುತ್ತಿದ್ದೇವೆ ಎಂಬುದನ್ನು ಮರೆಯುವಂತಿಲ್ಲ. ಮಂಗಳೂರು-ಕೊಚ್ಚಿ ಗ್ಯಾಸ್ ಪೈಪ್‌ಲೈನ್, ಮಂಗಳೂರು – ಹಾಸನ – ಬೆಂಗಳೂರು ಪೈಪ್ ಲೈನ್, ಪೆರ್ಮುದೆಯಿಂದ ಪಾದೂರಿಗೆ ISPRL ಪೈಪ್‌ಲೈನ್.. ಹೀಗೆ.

ರಾಜಕಾರಣಿಗಳ ಗದ್ದಲ, ಬೇಜವಾಬ್ದಾರಿಗಳೆಲ್ಲ ಏನೇ ಇರಲಿ…. ಇಂತಹ ಅಪಾಯಕಾರಿ ಪೈಪ್‌ಲೈನ್‌ಗಳು, ಪೆಟ್ರೋಲಿಯಂ ರಿಸರ್ವ್ ಎಲ್ಲವೂ ಸುವ್ಯವಸ್ಥಿತ ಮತ್ತು ಸುರಕ್ಷಿತವಾಗಿ ಇರುವಂತೆ ಜವಾಬ್ದಾರಿ ಹೊಂದುವ ಬುದ್ಧಿಯನ್ನು ನಮ್ಮ ದೈವದೇವರುಗಳು ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕರುಣಿಸಲಿ. ಈ ಎಲ್ಲ ಪೈಪ್‌ಲೈನ್‌ಗಳು ದಟ್ಟ ಜನಸಂದಣಿಗಳ-ಫಲವತ್ತಾದ ಭೂಮಿಗಳ ನಡುವೆಯೇ ಇರುವಂತಹವು. ಹಾಗಾಗಿ ಕರಾವಳಿಯನ್ನು ಇಂತಹ ಅಗ್ನಿ ಅವಘಡಗಳಿಂದ ರಕ್ಷಿಸುವ ಜವಾಬ್ದಾರಿಯನ್ನು ನಾವು ನಂಬಿದ ದೈವಗಳಿಗೇ ಬಿಡೋಣ.

ಮಲೇಷ್ಯಾದಲ್ಲಿ ಸಂಭವಿಸಿದಂತಹ ಈ ಅವಘಡಗಳ ಸುದ್ದಿ ಕೇಳಿದಾಗಲೆಲ್ಲ, ಮನಸ್ಸು ತಳಮಳಿಸುತ್ತದೆ. ಯಾರದ್ದೋ “ವಿಕಾಸಕ್ಕೆ” ನಮ್ಮ ಜೀವಗಳನ್ನೆಲ್ಲ ನಾವು ಅಡಾವು ಇಟ್ಟು ಕುಳಿತುಕೊಳ್ಳುವ ಸ್ಥಿತಿ ಬಂದಿದೆಯಲ್ಲಾ ಎಂದು…
(ಚಿತ್ರ ಸೌಜನ್ಯ: ರಾಯಿಟರ್)(ಕೃಪೆ ರಾಜಾರಾಮ್ ತಳ್ಳುರ್)

LEAVE A REPLY

Please enter your comment!
Please enter your name here