ತುಮಕೂರು:ಕೊರಟಗೆರೆ ತಾಲ್ಲೂಕಿನ ಯಾದಗೆರೆ ಸೆಂಟ್ ಮೇರಿಸ್ ಪಬ್ಲಿಕ್ ಶಾಲೆಯಲ್ಲಿ ಶುಲ್ಕ ಪಾವತಿಸದ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ಕೊಡದಿದ್ದು, ಈ ಕುರಿತು ಪೋಷಕರು ಅಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಅದರಂತೆ, ಸದರಿ ಶಾಲೆಯ 1ರಿಂದ 9ನೇ ತರಗತಿಯ ಸುಮಾರು 35 ವಿದ್ಯಾರ್ಥಿಗಳು 2024-25ನೇ ಸಾಲಿನ ಶಾಲಾ ಶುಲ್ಕವನ್ನು ನಿಗದಿತ ಸಮಯದಲ್ಲಿ ನೀಡಿರುವುದಿಲ್ಲ. ಈ ಕಾರಣವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡದಿದ್ದು, ಪೋಷಕರು ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿರುತ್ತಾರೆ. ದೂರಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಉಳಿದಂತೆ ಪ್ರಸ್ತುತ ಶಾಲೆಯಲ್ಲಿ ಬೇಕಾದ ಮೂಲಭೂತ ಸೌಕರ್ಯವನ್ನು ಈಗಾಗಲೇ ಒದಗಿಸಲಾಗಿದ್ದು, ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ @osd_cmkarnataka ʼಎಕ್ಸ್ʼ ಖಾತೆಗೆ ಟ್ಯಾಗ್ ಮಾಡಿ ಎಂದು ತಿಳಿಸಿದ್ದಾರೆ.