ಬೆಂಗಳೂರು: ಬಜೆಟ್ ನಲ್ಲಿ ಉತ್ತರ ಕರ್ನಾಟಕ ಭಾಗದ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ ಮನವಿ ಮಾಡಿದ್ದಾರೆ.
ಮಹಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ ಹಾಗೂ ಅಧ್ಯಕ್ಷರಾದ ಶಿವಕುಮಾರ ಮೇಟಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದು, ಉತ್ತರ ಕರ್ನಾಟಕ ಭಾಗದ ಜನರು ವಿವಿಧ ಉದ್ಯೋಗ ಅರಸಿ ಹಾಗೂ ವಿದ್ಯಾಭ್ಯಾಸ, ವ್ಯಾಪಾರ ವಹಿವಾಟು ನಡೆಸಲು ರಾಜ್ಯದ ರಾಜಧಾನಿ ಬೆಂಗಳೂರಿಗೆ ಆಗಮಿಸಿ, ಇಲ್ಲಿಯೇ ನೆಲೆಸಿ ಜೀವನ ಕಂಡುಕೊಂಡಿದ್ದು, ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ನೆಲೆಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನರು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಂಘಗಳನ್ನು ಕಟ್ಟಿಕೊಂಡಿದ್ದು, ಎಲ್ಲ ಉತ್ತರ ಕರ್ನಾಟಕ ಸಂಘಗಳು ಸೇರಿಕೊಂಡು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಕಟ್ಟಿಕೊಂಡಿದ್ದು ಇದೊಂದು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು, ಆ ಭಾಗದ ಸಂಸ್ಕೃತಿ ಪರಂಪರೆ, ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತಿದೆ.
ಅಲ್ಲದೇ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ತಾವು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ ದಾಖಲೆಯ ಬಜೆಟ್ ಮಂಡನೆ ಮಾಡುತ್ತಿರುವುದು ಸಂತಸದ ವಿಷಯವಾಗಿದ್ದು, ತಮ್ಮ ಈ ಬಜೆಟ್ ನಲ್ಲಿ ಹಿಂದುಳಿದ ಉತ್ತರ ಕರ್ನಾಟಕ ( ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ) ಭಾಗದ ಅಗತ್ಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಆಸ್ಪತ್ರೆ, ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣದಂತ ಅಗತ್ಯ ಸೌಲಭ್ಯ ಕಲ್ಪಿಸಲು ಹೆಚ್ಚಿನ ಅನುದಾನ ಮೀಸಲಿಟ್ಟು, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಜೊತೆಗೆ ಸಮಗ್ರ ಕರ್ನಾಟಕದ ಅಭಿವೃದ್ಧಿಯನ್ನು ಸಾಧಿಸುವಂತಾಗಲು ಆ ಭಾಗದ ಈ ಕೆಳಗಿನ‌ ಬೇಡಿಕೆಗಳಿಗೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ.
ಪ್ರಮುಖವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕಾಮಗಾರಿ ಪೂರ್ಣಗೊಳಿಸಲು ಬಜೆಟ್ ನಲ್ಲಿ ವಾರ್ಷಿಕ 25 ಸಾವಿರ ಕೋಟ ರೂ. ಮೀಸಲಿಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರು ಸೇರಿದಂತೆ ಸರ್ಕಾರಿ ಹುದ್ದೆಗಳನ್ನು ವಿಶೇಷ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮವಹಿಸಿ ಅದಕ್ಕೆ ಅಗತ್ಯ ಅನುದಾನ ಮೀಸಲಿಡಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ವಾರ್ಷಿಕ 10 ಸಾವಿರ ಕೋಟಿ ರೂ. ಮೀಸಲಿಡಬೇಕು‌ ಎಂದು ಮನವಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕು. ತುಂಗಭದ್ರಾ ಜಲಾಶಯಕ್ಕೆ ಪರ್ಯಾಯವಾಗಿ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ, ಯೋಜನೆ ಆರಂಭಿಸಲು ಅಗತ್ಯ ಅನುದಾನ ಮೀಸಲಿಡಬೇಕು. ಮಹಾದಾಯಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರದಿಂದ ಪರಿಸರ ಇಲಾಖೆ ಅನುಮತಿ ಪಡೆದು ಯೋಜನೆ ಕಾರ್ಯಾರಂಭ‌ ಮಾಡಲು ಘೊಷಸಿ ಅನುದಾನ ಮೀಸಲಿಡಬೇಕು. ವರದಾ ಬೆಡ್ತಿ ನದಿ ಜೋಡಣೆ ಮಾಡುವ ಕುರಿತು ಘೋಷಣೆ ಮಾಡಿ ಯೋಜನೆಯ ಕಾರ್ಯ ಸಾಧ್ಯತೆ ತಿಳಿಯಲು ಅಗತ್ಯ ಅನುದಾನ ಮೀಸಲಿಡಬೇಕು. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಹಣ ಬಜೆಟ್ ನಲ್ಲಿ ಘೋಷಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರ ಚನ್ನಬಸವಣ್ಣನವರ ಐಕ್ಯ ಸ್ಥಳ ಉಳವಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲದೇ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಗೆ ಹಿಂದಿನ ಸರ್ಕಾರ ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಕಮ್ಮಸಂದ್ರ ಗ್ರಾಮದಲ್ಲಿ 3 ಎಕರೆ 24 ಗುಂಟೆ ವಿಸ್ತೀರ್ಣದ ಜಮೀನು ಮಂಜೂರು ಮಾಡಿದೆ. ಇಲ್ಲಿ ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು, ಉತ್ತರ ಕರ್ನಾಟಕ ಭಾಗದಿಂದ ಉದ್ಯೋಗ ಹಾಗೂ ಶಿಕ್ಷಣ ಹಾಗೂ ಇನ್ನಿತರ ಕೆಲಸಗಳಿಗೆ ಬೆಂಗಳೂರಿಗೆ ಆಗಮಿಸುವವರಿಗೆ ವಸತಿ ನಿಲಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ. ಅದಕ್ಕಾಗಿ ಬಜೆಟ್ ನಲ್ಲಿ 10 ಕೋಟಿ ರೂ. ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ‌.

LEAVE A REPLY

Please enter your comment!
Please enter your name here