ಬೆಂಗಳೂರು ಮಹಾನಗರದ ಒಡಲಿನಲ್ಲಿ ಕರಗಿಹೋಗಿರುವ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಅನೇಕ ಗ್ರಾಮಗಳ ಮೂಲ ಹೆಸರಗುಗಳನ್ನು ಮೇಲ್ಜಾತಿ ವರ್ಗಗಳ ರಾಜಕೀಯ- ಸಾಂಸ್ಕೃತಿಕ ಒತ್ತಡಗಳಿಂದಾಗಿ ಮನಬಂದಂತೆ ಬದಲಾಯಿಸಲಾಗಿದೆ. ಈಗ ಕುರುಬರಹುಂಡಿ ಎಂಬ ಗ್ರಾಮವನ್ನು ಶ್ರೀ ಶಿವಕುಮಾರಪುರ ಎಂದು ಬದಲಾಯಿಸುವ ಸಾಂಸ್ಕೃತಿಕ ಅಪಸವ್ಯದ ಪ್ರಯತ್ನಗಳು ನಡೆಯುತ್ತಿವೆ.
‘ಕುರುಬರಹುಂಡಿ’ ಎಂಬುದು ಇಡೀ ಕುರುಬ ಸಮುದಾಯದ ಅಸ್ಮಿತೆಯ ಸಂಕೇತ. ಕುರುಬರು ಕರ್ನಾಟಕದ ಆದಿಮವಾದ ಒಂದು ದ್ರಾವಿಡ ಸಮುದಾಯ. ಕುರುಬರ ಇಡೀ ಸಮುದಾಯಕ್ಕಿಂತಲೂ ಲಿಂಗಾಯತ ಮಠದ ಒಬ್ಬ ಸ್ವಾಮೀಜಿ ದೊಡ್ಡವರಾಗಲು ಸಾಧ್ಯವಿಲ್ಲ. ಕುರುಬರಹುಂಡಿ ಎಂಬ ಹೆಸರನ್ನು ಶ್ರೀ ಶಿವಕುಮಾರಪುರ ಎಂದು ಬದಲಾಯಿಸಲು ಹೊರಟಿರುವ ಅಪನಡೆಯ ವಿರುದ್ಧ ಪ್ರಜ್ಞಾವಂತರು ಮಾತಾಡಬೇಕು.
ಕುರುಬರಹುಂಡಿ ಎಂಬ ಮೂಲ ಹೆಸರನ್ನೇ ಮುಂದುವರೆಸುವುದರಿಂದ ಆಗುವ ಸಾಮಾಜಿಕ ಅಪಮಾನ ಅಥವಾ ಸಾಂಸ್ಕೃತಿಕ ನಷ್ಟವಾದರೂ ಏನು ? ಈಗಾಗಲೇ ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ ಅನೇಕ ಬಡಾವಣೆಗಳು, ರಸ್ತೆಗಳು, ಶಾಲೆಗಳು, ಪಾರ್ಕುಗಳು ಕಾಲೇಜಗಳು, ಆಸ್ಪತ್ರೆಗಳು, ವಸತಿ ನಿಲಯಗಳು ಇನ್ನೂ ಮುಂತಾದವುಗಳಿವೆಯಲ್ಲಾ ? ಲಿಂಗಾಯತ ಮಠದ ಸ್ವಾಮೀಜಿಯ ಹೆಸರನ್ನು ಬೆಳಗಲು ಕುರುಬರಹುಂಡಿ ಎಂಬುದು ಬದಲಾಗಬೇಕಿಲ್ಲ. ಕುರುಬರಹುಂಡಿ ಎಂಬ ಹೆಸರು ಮುಂದುವರೆಯುವುದು ಇಡೀ ಪಶುಪಾಲಕ ಸಮುದಾಯಗಳಿಗೆ ತೋರಿಸುವ ಗೌರವವೂ ಆಗುತ್ತದೆ.
ಕುರಿಗಳನ್ನು ಕೂಡುವ ಕೊಟ್ಟಿಗೆಯನ್ನು ರೊಪ್ಪ ಅಥವಾ ಹುಂಡಿ (ದೇವರ ದುಡ್ಡಿನ ಪೆಟ್ಟಿಗೆ, ಗೋಲಕ) ಎಂದು ಕರೆಯುತ್ತೇವೆ. ಕುರಿಗಳ ಉಣ್ಣೆಯನ್ನು ಬಂಡ (ಭಂಡಾರ);ಎಂದು ಕರೆಯುತ್ತೇವೆ. ಹೀಗೆ ಹುಂಡಿ- ಬಂಡ- ಭಂಡಾರಕ್ಕೆ ಜೀವಂತ ಆರ್ಥಿಕತೆಯ ಸಂಬಂಧವಿದೆ. ದನಗಳನ್ನು ಕೂಡಾ ನಾವು ಜೀವಧನ (ಜೀವಂತ ಹಣ) ಎಂದು ಕರೆಯುತ್ತೇವೆ. ಇಂತಹ ಅಸ್ಮಿತೆ ಕುರುಬರಹುಂಡಿ ಎಂಬ ಪದಕ್ಕೂ ಇದೆ ಎಂಬುದನ್ನು ನಾವು ಮರೆಯಬಾರದು.
–ವಡ್ಡಗೆರೆ ನಾಗರಾಜಯ್ಯ
8722724174