1. ಭಾರತದ ಆರ್ಥಿಕತೆಯ ಪರಿವರ್ತನೆಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿರವ ರಾಜ್ಯ; ಇಂದು ದೇಶದಲ್ಲಿಯೇ ಕರ್ನಾಟಕ ಅತ್ಯಂತ ಹೂಡಿಕೆದಾರ ಸ್ನೇಹಿ ರಾಜ್ಯವೆಂಬ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಧೃಢೀಕರಿಸುತ್ತಿದ್ದೇವೆ.
    ಸದೃಢ ನೀತಿ ನಿರೂಪಣೆ, ಸಕ್ರಿಯ ಆಡಳಿತ ಮತ್ತು ವ್ಯವಹಾರ-ಸ್ನೇಹಿ ಪರಿಸರ ವ್ಯವಸ್ಥೆಯಿದ್ದು, ಇಲ್ಲಿ ಮಾಡುವ ಪ್ರತಿ ಹೂಡಿಕೆಯೂ ಯಶಸ್ವಿಯಾಗುವಂತೆ ಹಾಗೂ ಸುಸ್ಥಿರ ಬೆಳವಣಿಗೆಗೆ ಕೊಡುಗೆ ನೀಡುವಂತೆ ಖಾತ್ರಿಪಡಿಸುತ್ತೇವೆ.
  2. ಕದಂಬ, ಗಂಗರು, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಒಡೆಯರ ಆಳ್ವಿಕೆಯಲ್ಲಿ ಕರ್ನಾಟಕ ನೇಕಾರಿಕೆ, ಲೋಹಶಾಸ್ತ್ರ, ಶಿಲ್ಪಕಲೆ, ಕರಕುಶಲ ಸಾಮಗ್ರಿಗಳ ತಯಾರಿಕೆಯ ತವರಾಗಿತ್ತು ಮತ್ತು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು.
  3. ಪ್ರಖ್ಯಾತ ಬಿದರಿ ಕಲೆ (ಲೋಹಕಲೆ), ಮೈಸೂರು ರೇಷ್ಮೆ ನೇಕಾರಿಕೆ ಮತ್ತು ಶ್ರೀಗಂಧ ಕೆತ್ತನೆಯಂತಹ ಕುಶಲಕಲೆಗಳು ರಾಜ ಮನೆತನಗಳ ಆಶ್ರಯದಲ್ಲಿ ಅಭಿವೃದ್ಧಿ ಹೊಂದಿದವು. ಈ ಮೂಲಕ ಕರ್ನಾಟಕದ ಶ್ರೀಮಂತ ಕೈಗಾರಿಕಾ ಪರಂಪರೆಗೆ ಬುನಾದಿಯನ್ನು ಹಾಕಲಾಗಿತ್ತು.
  4. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯುಳ್ಳ ನಾಯಕತ್ವದಲ್ಲಿ 1923ರಲ್ಲಿ ಸ್ಥಾಪನೆಗೊಂಡ ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಭಾರತದ ಮೊತ್ತಮೊದಲ ಬೃಹತ್ ಉಕ್ಕು ಕೈಗಾರಿಕೆಯಾಗಿತ್ತು.
  5. ಒಡೆಯರ್ ಮಹಾರಾಜರ ಆಳ್ವಿಕೆಯಲ್ಲಿ ಪ್ರಾರಂಭವಾದ ಮೈಸೂರು ರೇಷ್ಮೆ ಉದ್ಯಮ ಪ್ರಾಮುಖ್ಯತೆಯನ್ನು ಪಡೆದುಕೊಂಡು ಶ್ರೀಮಂತಿಕೆಯ ಜಾಗತಿಕ ಚಿಹ್ನೆಯಾಗಿ ಗುರುತಿಸಿಕೊಂಡಿತು. ಈ ಪರಂಪರೆ ಇಂದಿಗೂ ಮುಂದುವರೆದಿದೆ.
  6. ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಕಾಫಿ ಕೃಷಿಯು ಅಭಿವೃದ್ಧಿಗೊಂಡು ಕರ್ನಾಟಕವನ್ನು ಭಾರತದ ಕಾಫಿ ರಾಜಧಾನಿಯನ್ನಾಗಿಸಿತು, ಈ ವೈಶಿಷ್ಯತೆಗೆ ಕರ್ನಾಟಕ ಇಂದಿಗೂ ಪಾತ್ರವಾಗಿದೆ.
  7. ಹೆಚ್.ಎ.ಎಲ್, ಬಿಇಎಲ್, ಬಿಇಎಂಎಲ್ ಮುಂತಾದ ಸಾರ್ವಜನಿಕ ವಲಯದ ಉದ್ಯಮಗಳಿಗೆ ತವರೂರಾದ ಕರ್ನಾಟಕ ಭಾರತದ ಕೈಗಾರಿಕಾ ಬೆಳವಣಿಗೆಗೆ ಬೆನ್ನೆಲುಬಾಗಿದೆ.
  8. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಐಎಸ್ಸಿ, ಐಐಎಂ ಬೆಂಗಳೂರು, ಎನ್‍ಎಲ್‍ಎಸ್.ಯು ಮುಂತಾದ ಜಾಗತಿಕ ಮಟ್ಟದ ಸಂಸ್ಥೆಗಳು ಮತ್ತು 200ಕ್ಕೂ ಹೆಚ್ಚು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿಂದ ಉತ್ತಮ ಪ್ರತಿಭೆಗಳು ಪ್ರತಿ ವರ್ಷ ಹೊರಬರುತ್ತಿದ್ದಾರೆ.
  9. ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಸ್ಪೇಸ್ ಮತ್ತು ಬಯೋಟೆಕ್ ನಲ್ಲಿ 400 ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿರುವ ರಾಜ್ಯವು ಭಾರತದ ಬೌದ್ಧಿಕ ಕೇಂದ್ರವಾಗಿ ತಲೆಎತ್ತಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ವಲಯಗಳಲ್ಲಿ ಶೈಕ್ಷಣಿಕ ಸಂಸ್ಥೆ ಹಾಗೂ ಉದ್ಯಮಗಳ ಸಹಭಾಗಿತ್ವದಲ್ಲಿ ಯುವಕರಿಗೆ ತರಬೇತಿಯನ್ನು ಸಕ್ರಿಯವಾಗಿ ನೀಡಲಾಗುತ್ತಿದೆ.
  10. ಜವಾಬ್ದಾರಿಯುತ, ಸುಸ್ಥಿರ ಬೆಳವಣಿಗೆಗೆ ಆದ್ಯತೆ ನೀಡುವ ಕರ್ನಾಟಕ, ಹಸಿರು ಆರ್ಥಿಕತೆ, ಪರಿಸರ ಸ್ನೇಹಿ ಕೈಗಾರಿಕಾ ಸಮುಚ್ಚಯಗಳು ಹಾಗೂ ಸುಸ್ಥಿರ ನಗರಾಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಭಾರತದ ಸೌರ ಶಕ್ತಿ ಉತ್ಪಾದನೆಯಲ್ಲಿ ಕರ್ನಾಟಕ ಮಂಚೂಣಿಯಲ್ಲಿದ್ದು, ಪವನ ಶಕ್ತಿ, ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಸುಸ್ಥಿರ ನಗರಾಭಿವೃದ್ದಿಯಲ್ಲಿಯೂ ನಾಯಕತ್ವ ವಹಿಸಿದೆ.
  11. ಬಿಯಾಂಡ್ ಬೆಂಗಳೂರು ಪರಿಕಲ್ಪನೆ ರಾಜ್ಯದಾದ್ಯಂತ ಸಮತೋಲಿತ ಕೈಗಾರಿಕಾ ಬೆಳವಣಿಗೆಯನ್ನು ಖಾತ್ರಿ ಪಡಿಸುತ್ತದೆ. ಅಂತೆಯೇ ಪರಿಸರದ ಜವಾಬ್ದಾರಿಯ ನಿರ್ವಹಣೆಯನ್ನೂ ಖಾತ್ರಿಪಡಿಸುತ್ತದೆ.
  12. ಆಹ್ಲಾದಕರ ಹವಾಮಾನಕ್ಕೆ ಹೆಸರಾಗಿರುವ ಬೆಂಗಳೂರು, ಉತ್ತಮ ಮಟ್ಟದ ಪ್ರತಿಭೆಗಳನ್ನು ಆಕರ್ಷಿಸುವುದಲ್ಲದೇ, ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಹಿರಿಮೆಯನ್ನೂ ತನ್ನದಾಗಿಸಿಕೊಂಡಿದೆ. ಕಾಸ್ಮೊಪಾಲಿಟನ್ ಸಂಸ್ಕೃತಿ, ಜಾಗತಿಕ ಮಟ್ಟದ ಸಂಸ್ಥೆಗಳು ಮತ್ತು ಉನ್ನತ ಜೀವನ ಮಟ್ಟದೊಂದಿಗೆ, ವ್ಯಾಪಾರದ ಬೆಳವಣಿಗೆಯನ್ನು ಹಾಗೂ ನೌಕರರಿಗೆ ಸರಿಸಾಟಿಯಿಲ್ಲದ ಕೆಲಸ ಮತ್ತು ಜೀವನದ ಸಮತೋಲನವನ್ನು ಕೊಡಮಾಡುತ್ತಾ, ಕರ್ನಾಟಕ ಹೂಡಿಕೆದಾರರಿಗೆ ಸೂಕ್ತವಾದ ಗಮ್ಯವಾಗಿ ಪರಿಣಮಿಸಿದೆ.
  13. ಕರ್ನಾಟಕದ ಸಮೃದ್ಧ ಪ್ರವಾಸೋದ್ಯಮ ಮತ್ತು ಸೇವಾ ವಲಯವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸುಂದರ ನೈಸರ್ಗಿಕ ಪ್ರದೇಶ ಮತ್ತು ವಿಶ್ವಮಟ್ಟದ ಮೂಲಸೌಕರ್ಯಗಳಿಂದಾಗಿ ರಾಜ್ಯವನ್ನು ಪ್ರವಾಸಿಗರು ಮತ್ತು ಜಾಗತಿಕ ಹೂಡಿಕೆದಾರರಿಗೆ ಪ್ರಮುಖ ಗಮ್ಯವನ್ನಾಗಿಸಿದೆ.
  14. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದಂತೆ ರಾಜ್ಯಾದ್ಯಂತ ಉತ್ತಮ ಸಂಪರ್ಕ ಹೊಂದಿರುವ ವಿಮಾನನಿಲ್ದಾಣಗಳನ್ನು ಹೊಂದಿರುವ ಕಾರಣ ಕರ್ನಾಟಕ ವೈಮಾನಿಕ ಸಂಪರ್ಕದಲ್ಲಿಯೂ ಮುಂಚೂಣಿಯಲ್ಲಿದೆ. ಪ್ರಯಾಣಿಕರು ಮತ್ತು ಸರಕುಗಳಿಗೆ ಜಾಗತಿಕ ಕೇಂದ್ರವಾಗಿರುವ ಬೆಂಗಳೂರು ಮತ್ತು ಇತರೆ ನಿರ್ಮಾಣ ಹಂತದ ವಿಮಾನ ನಿಲ್ದಾಣಗಳು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಂಪರ್ಕವನ್ನು ಉತ್ತೇಜಿಸಲಿದೆ.
  15. ಬೆಂಗಳೂರಿಗೆ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಸೂಕ್ತವಾದ ಸ್ಥಳವನ್ನು ಗುರುತಿಸುವ ಕಾರ್ಯ ಸಕ್ರಿಯವಾಗಿ ನಡೆದಿದೆ. ಬೆಂಗಳೂರಿನ ಜಾಗತಿಕ ಸಂಪರ್ಕ ಮತ್ತು ಆರ್ಥಿಕ ಸಾಮರ್ಥ್ಯವನ್ನು ಇದು ಇನ್ನಷ್ಟು ಉತ್ತೇಜಿಸಲಿದೆ.
  16. ರಾಜ್ಯದ 320 ಕಿ.ಮೀ ಉದ್ದದ ಕರಾವಳಿ ಪ್ರದೇಶವು ಅನೇಕ ಬಂದರುಗಳನ್ನು ಹೊಂದಿದ್ದು, ಕಡಲತೀರದ ವ್ಯಾಪಾರ, ಮೀನುಗಾರಿಕೆ ಮತ್ತು ಕರಾವಳಿ ತೀರದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ.
  17. ಹದಿನೈದು ಸಾವಿರಕ್ಕೂ ಹೆಚ್ಚು ಸ್ಟಾರ್ಟ್‍ಅಪ್ ಹಾಗೂ 40ಕ್ಕೂ ಹೆಚ್ಚು ಯೂನಿಕಾರ್ನ್ ಗಳನ್ನು ಹೊಂದಿರುವ ಕರ್ನಾಟಕ ಭಾರತದ ಅತಿದೊಡ್ಡ ಸ್ಟಾರ್ಟ್ ಅಪ್ ಹಬ್ ಮತ್ತು ಜಾಗತಿಕವಾಗಿ ಮೊದಲ ಐದರಲ್ಲಿ ಗುರುತಿಸಿಕೊಂಡಿದೆ. ಎಲಿವೇಟ್ 100 ಮತ್ತು ಬಿಯಾಂಡ್ ಬೆಂಗಳೂರು ನಂತಹ ಯೋಜನೆಗಳು ನಾವೀನ್ಯತೆಯನ್ನು ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಕೊಂಡೊಯ್ದು ಡಿಜಿಟಲ್ ಪರಿವರ್ತನೆಯಲ್ಲಿ ತನ್ನ ನಾಯಕತ್ವವನ್ನು ಒತ್ತಿ ಹೇಳುತ್ತದೆ.
  18. ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಳ್ಳುತ್ತಿರುವ ಕರ್ನಾಟಕ ಇಂಟೆಲ್, ಟಿಎಸ್‍ಎಂಸಿ ಮತ್ತು ಮೈಕ್ರಾನ್ ಸಂಸ್ಥೆಗಳಿಂದ ಪ್ರಮುಖ ಹೂಡಿಕೆಗಳನ್ನು ಹೊಂದಿದೆ.
  19. ಭಾರತದ ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತಿನಲ್ಲಿ ಶೇ.60 ರಷ್ಟನ್ನು ಪೂರೈಸುವ ಮೂಲಕ ಕರ್ನಾಟಕ ನೆಕ್ಸ್ಟ್ ಜೆನ್ ಚಿಪ್ಸ್ ಹಾಗೂ ಸಾಧನಗಳ ಜಾಗತಿಕ ಪೂರೈಕೆದಾರ ಎನಿಸಿದೆ.
  20. ಇನ್‍ಫೋಸಿಸ್, ವಿಪ್ರೋ, ಟಿಸಿಎಸ್, ಗೂಗಲ್, ಅಮೆಜಾನ್ ಮತ್ತು ಆಪಲ್ ನಂತಹ ಪ್ರಮುಖ ಟೆಕ್ ಕಂಪನಿಗಳಿಗೆ ನೆಲೆಯಾಗಿರುವ ಕರ್ನಾಟಕ ಭಾರತದ ಸಾಫ್ಟ್ ವೇರ್ ರಫ್ತಿಗೆ ಶೇ. 40 ರಷ್ಟು ಕೊಡುಗೆ ನೀಡುತ್ತಿದೆ.
  21. ಡಿಜಿಟಲ್ ಅರ್ಥಿಕತೆಯನ್ನು ಭವಿಷ್ಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಅಣಿಮಾಡಲು ಕರ್ನಾಟಕವು ಎಐ ಆಡಳಿತ, ಬ್ಲಾಕ್ ಚೈನ್ ಅಳವಡಿಕೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಗಳಲ್ಲಿ ಹೂಡಿಕೆ ಮಾಡುತ್ತಿದೆ.

22.ರಾಜ್ಯದಲ್ಲಿ ಟೆಸ್ಲಾ, ಓಲಾ ಎಲೆಕ್ಟ್ರಿಕ್, ಏಥರ್ ಎನರ್ಜಿ ಮತ್ತು ಮಹಿಂದ್ರಾ ಎಲೆಕ್ಟ್ರಿಕ್ ಹೂಡಿಕೆ ಮಾಡುವ ಮೂಲಕ ಕರ್ನಾಟಕ , ಭಾರತದ ಇವಿ ರಾಜಧಾನಿಯಾಗಿ ಹೊರಹೊಮ್ಮಿದೆ.

  1. ಶೇ. 65 ಕ್ಕೂ ಹೆಚ್ಚು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆ ರಾಜ್ಯದಲ್ಲಿ ಆಗುತ್ತಿದ್ದು, ಕರ್ನಾಟಕ ಭಾರತದ ಅತಿ ದೊಡ್ಡ ಏರೋಸ್ಪೇಸ್ ಕೇಂದ್ರವೂ ಆಗಿದೆ.
  2. ರೇಷ್ಮೆ ಉತ್ಪಾದನೆ ಹಾಗೂ ಉಡುಪುಗಳ ರಫ್ತಿನಲ್ಲಿ ರಾಜ್ಯವು ಮುಂಚೂಣಿಯಲ್ಲಿದ್ದು, ವಿಶೇಷವಾಗಿ ಮಹಿಳೆಯರಿಗೆ ಲಕ್ಷಾಂತರ ಉದ್ಯೋಗವನ್ನು ಸೃಜಿಸಿದೆ.
  3. ಬಯೋಟೆಕ್ ಸಂಶೋಧನೆ, ಲಸಿಕೆ ಮತ್ತು ಜೀವ ವಿಜ್ಞಾನದಲ್ಲಿಯೂ ರಾಜ್ಯ ಮುಂಚೂಣಿಯಲ್ಲಿದ್ದು, ವೈದ್ಯಕೀಯ ಸಂಶೋಧನೆ ಮತ್ತÀು ಅಭಿವೃದ್ಧಿಗೆ ಪ್ರಮುಖ ತಾಣವಾಗಿದೆ.
  4. ಕರ್ನಾಟಕ ಭಾರತದ ಅದಿರು ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಕಬ್ಬಿಣದ ಅದಿರು, ಚಿನ್ನ ಮತ್ತಿತರ ಖನಿಜಗಳ ನಿಕ್ಷೇಪವನ್ನು ಹೊಂದಿರುವ ರಾಜ್ಯ ಕೈಗಾರಿಕೆ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣೀಭೂತವಾಗಿದೆ.
  5. ಕ್ವಿನ್ ಸಿಟಿ ಯನ್ನು (ಕರ್ನಾಟಕ ವರ್ಲ್ಡ್ ಇನ್ನೊವೇಷನ್ ನೆಟ್‍ವರ್ಕ್) ಕೃತಕ ಬುದ್ಧಿಮತ್ತೆ, ಅಂತರಿಕ್ಷ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಬಯೋಟೆಕ್ ಗಾಗಿಯೇ ಮೀಸಲಿಡಲಾಗಿದೆ.
  6. ವಿಶ್ವಮಟ್ಟದ ವೈದ್ಯಕೀಯ ಕೇಂದ್ರವಾಗುವ ಆರೋಗ್ಯ ನಗರ (ಹೆಲ್ತ್ ಸಿಟಿ) ಯನ್ನು ಕರ್ನಾಟಕ ಅಭಿವೃದ್ಧಿಗೊಳಿಸುತ್ತಿದ್ದು, ಜಾಗತಿಕ ಆರೋಗ್ಯ ಅಗತ್ಯಗಳು, ವೈದ್ಯಕೀಯ ಪ್ರವಾಸೋದ್ಯಮ ಮತ್ತು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಳನ್ನು ಒದಗಿಸಲಿದೆ.
  7. ಬೀದರ್ ನಿಂದ ಬೆಂಗಳೂರಿನವರೆಗೆ, ಬೆಳಗಾವಿಯಿಂದ ಬಳ್ಳಾರಿಯವರೆಗೆ ಅಭಿವೃದ್ಧಿ ರಾಜ್ಯದ ಮೂಲೆ ಮೂಲೆಯನ್ನೂ ತಲುಪಲಿದೆ. ಸ್ಥಳೀಯ ಶಕ್ತಿಗೆ ಅನುಸಾರವಾಗಿ ವಿಶೇಷ ಸಮುಚ್ಚಯಗಳನ್ನು ಸೃಜಿಸಿ ಪ್ರತಿ ಭಾಗವೂ ಏಳಿಗೆಹೊಂದುವಂತೆ ಖಾತ್ರಿ ಪಡಿಸಲಾಗುತ್ತಿದೆ.
  8. ಹೂಡಿಕೆದಾರರಿಗೆ ಕಾನೂನು ಸುವ್ಯವಸ್ಥೆ ಪಾಲನೆಯನ್ನೂ ಒಳಗೊಂಡು ಸುಭದ್ರವಾದ ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ.
  9. ಜಾಗತಿಕ ಹೂಡಿಕೆದಾರರ ಸಮಾವೇಶ – ಇನೆವೆಸ್ಟ್ ಕರ್ನಾಟಕ-2025ರಲ್ಲಿ ಆಯೋಜಿಸಿರುವ ನಾವೀನ್ಯತೆಯ ಭವಿಷ್ಯ ಕುರಿತ ವಸ್ತುಪ್ರದರ್ಶನವು ಸುಮಾರು 40ಕ್ಕೂ ಹೆಚ್ಚು ಜಾಗತಿಕ ಕಂಪನಿಗಳು, ಸ್ಟಾರ್ಟ್ ಅಪ್ ಕಂಪನಿಗಳಿಂದ, ಡ್ರೋನ್ ತಂತ್ರಜ್ಞಾನ, ಅಂತರಿಕ್ಷ ತಂತ್ರಜ್ಞಾನ, ಆರೋಗ್ಯ ವಲಯ, ಕೃಷಿ ಹಾಗೂ ಆರೋಗ್ಯ ತಂತ್ರಜ್ಞಾನ ಮತ್ತು ವೈಮಾನಿಕ ಮತ್ತು ರಕ್ಷಣಾ ವಲಯಗಳ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ವಲಯಗಳ ಕುರಿತು ಸ್ವಾಯತ್ತ ಪರಿಹಾರಗಳನ್ನು ಒದಗಿಸುತ್ತಿರುವುದನ್ನು ಬಿಂಬಿಸಲಿದೆ.
  10. ನೂತನ ಕೈಗಾರಿಕಾ ನೀತಿ-2025, ನಾವೀನ್ಯತೆ, ಸುಸ್ಥಿರತೆ ಮತ್ತು ಒಳಗೊಳ್ಳುವ ಬೆಳವಣಿಗೆಯನ್ನು ಸೇರಿದಂತೆ ಕರ್ನಾಟಕದ ಮಹತ್ವಾಕಾಂಕ್ಷಿ ದೂರದೃಷ್ಟಿಯನ್ನು ಒತ್ತಿಹೇಳಿದೆ. ಉತ್ಪಾದನಾ ವಲಯದಲ್ಲಿ ಶೇ.12 ರಷ್ಟು ವಾರ್ಷಿಕ ಬೆಳವಣಿಗೆಯ ದರದ ಗುರಿಯನ್ನು ಹೊಂದಿದ್ದು, 2030 ರೊಳಗೆ 7.5 ಲಕ್ಷ ಕೋಟಿ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಜನೆಯ ಗುರಿಯನ್ನು ಹೊಂದಿದೆ.
  11. ತನ್ನ ಸುಭದ್ರ ನೀತಿಗಳು, ವಿಶ್ವ ಮಟ್ಟದ ಮೂಲಸೌಕರ್ಯ, ಕೌಶಲ್ಯಭರಿತ ಸಂಪನ್ಮೂಲ ಮತ್ತು ಸುಸ್ಥಿರತೆಯ ಮೇಲಿನ ತನ್ನ ಗಮನದಿಂದಾಗಿ ಭವಿಷ್ಯಕ್ಕೆ ಸಿದ್ಧವಾಗಿರುವ ಹೂಡಿಕೆಗಳಿಗೆ ಕರ್ನಾಟಕ ಸೂಕ್ತವಾದ ತಾಣವಾಗಿದೆ. ಬೆಳವಣಿಗೆಯನ್ನು ಉತ್ತೇಜಿಸುವ ಪರಿಸರ ವ್ಯವಸ್ಥೆಯನ್ನು ನಾವು ನಿರ್ಮಿಸುತ್ತಿದ್ದು, ಉದ್ಯೋಗ ಸೃಜನೆ ಮತ್ತು ಜಾಗತಿಕ ಮಹತ್ವಾಕಾಂಕ್ಷೆಯನ್ನು ಬಲಪಡಿಸುತ್ತಿದ್ದೇವೆ.
  12. ಡಿಜಿಟಲೀಕರಣಗೊಂಡಿರುವ ನಮ್ಮ ವ್ಯವಸ್ಥೆ, ಸುವ್ಯವಸ್ಥಿತ ಪ್ರಕ್ರಿಯೆಗಳು, ಸದೃಢ ಬೆಂಬಲಿತ ಕಾರ್ಯವಿಧಾನಗಳು ಸರಳೀಕೃತ ವ್ಯವಹಾರವನ್ನು ಖಾತ್ರಿಪಡಿಸುತ್ತವೆ. ಐಟಿ ಉತ್ಪಾದನೆಯಿದ ಹಿಡಿದು, ಡೀಪ್‍ಟೆಕ್ ನಿಂದ ನವೀಕರಿಸಬಹುದಾದ ಇಂಧನದವರೆಗೆ, ಏರೋಸ್ಪೇಸ್ ನಿಂದ ಆರೋಗ್ಯದವರೆಗೆ, ಕರ್ನಾಟಕ ಯಶಸ್ಸನ್ನು ಪೋಷಿಸಲು ಹಾಗೂ ಈ ದಾರಿಯಲ್ಲಿ ಮುನ್ನಡೆಯಲು ಬದ್ಧವಾಗಿದೆ.
  13. ಇಲ್ಲಿ ನೆರೆದಿರುವ ಜಾಗತಿಕ ಹೂಡಿಕೆದಾರರಿಗೆ, ನಾನು ಹೇಳುವುದೇನೆಂದರೆ, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಇದು ಸುಸಮಯ. ನಮ್ಮೊಂದಿಗೆ ಪಾಲುದಾರರಾಗಿ, ನಮ್ಮೊಂದಿಗೆ ಬೆಳೆಯಿರಿ. ಯಶಸ್ಸು ಮತ್ತು ಸಮೃದ್ಧಿಯಲ್ಲಿ ನಾವು ಹೊಸ ಅಧ್ಯಾಯವನ್ನು ಬರೆಯೋಣ.
  14. ಅವಕಾಶಗಳಿಗೆ ಮಿತಿಯಿಲ್ಲದ, ಉಜ್ವಲ ಭವಿಷ್ಯವುಳ್ಳ ಕರ್ನಾಟಕದ ಬೆಳವಣಿಗೆಯ ಕಥೆಯಲ್ಲಿ ನಿಮ್ಮನ್ನು ಸ್ವಾಗತಿಸಲು ನಾನು ಎದುರುನೋಡುತ್ತಿದ್ದೇನೆ. ಜಾಗತಿಕ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಭಹಾರೈಸಿದರು.

LEAVE A REPLY

Please enter your comment!
Please enter your name here