ಕಲಬುರಗಿ,ಡಿ.೯-ಸಂಗೀತದಿಂದ ಆತ್ಮ ಸಾಕ್ಷಾತ್ಕಾರವಾಗುತ್ತದೆ ಎಂದು ನ್ಯಾಯವಾದಿ ಸಂಜೀವಕುಮಾರ ಡೊಂಗರಗಾಂವ ಹೇಳಿದರು.
ಇಲ್ಲಿನ ರಂಗಾಯಣದ ಸಭಾಂಗಣದಲ್ಲಿ ಸಂಗೀತ ಮಹರ್ಷಿ ಪಂಡಿತ್ ಶಾಂತಾರಾಮ ಚಿಗರಿ ಕಲಾ ಸಂಸ್ಥೆಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ “ಸೂರ್ ತಾಲ್ ಸಂಗೀತ ಅಕಾಡೆಮಿ ಕಲಬುರಗಿ”ಯ ಉದ್ಘಾಟನಾ ಹಾಗೂ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ವೃತ್ತಿಯಿಂದ ವಕೀಲನಾಗಿದ್ದರೂ ಸಂಗೀತದ ಕಡೆ ಒಲವು ಹೆಚ್ಚಿದೆ. ಉದಯಕುಮಾರ ಫುಲಾರಿ ಅವರು ಸೂರ್ ತಾಲ್ ಸಂಗೀತ ಅಕಾಡೆಮಿ ಆರಂಭಿಸಿ ಮಕ್ಕಳಿಗೆ ಸಂಗೀತ ಜ್ಞಾನ ನೀಡುತ್ತಿರುವುದು ಶ್ಲಾಘನೀಯಕಾರ್ಯವಾಗಿದೆ ಎಂದರು. ಸಂಗೀತ ಕಲಾವಿದರನ್ನು ಸಮಾಜ ಮತ್ತು ಸರ್ಕಾರ ಗುರುತಿಸಿ ಗೌರವಿಸಬೇಕಾಗಿದೆ ಎಂದು ಹೇಳಿದರು.
ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ನಾಸಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತವು ಮನುಷ್ಯನಿಗೆ ಆರೋಗ್ಯ, ಆಯುಷ್ಯ, ಆನಂದ ನೀಡುತ್ತದೆ. ಕಲೆಗಳಲ್ಲಿ ಸಂಗೀತ ಕಲೆ ಅತ್ಯಂತ ಶ್ರೇಷ್ಠವಾದುದ್ದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಲ್ಲಿನಾಥ ದೇಶಮುಖ, ಹಿರಿಯ ಕಲಾವಿದರಾದ ಸುಭಾಷ ಬಿರಾದಾರ ಕಲಕೋರಾ ಉಪಸ್ಥಿರಿದ್ದರು.
ಪ್ರಾರಂಭದಲ್ಲಿ ಪ್ರಾರ್ಥನಾಗೀತೆಯನ್ನು ಪ್ರಕಾಶ ಪೂಜಾರಿ ನಡೆಸಿಕೊಟ್ಟರು. ಎಲ್ಲ ಗಣ್ಯರಿಗೆ ಸ್ವಾಗತಕೋರಿ ಸನ್ಮಾನಿಸಲಾಯಿತು. ಶಂಕರ ರುದ್ರವಾಡಿಯವರಿಂದ ಸಿತಾರ ವಾದನ, ವಾಣಿಶ್ರೀ ಸುರಪುರ ಅವರಿಂದ ಹಿಂದೂಸ್ತಾನಿ ಸಂಗೀತ ಗಾಯನ ಜರುಗಿತು. ಅಕಾಡೆಮಿಯಲ್ಲಿ ಸಂಗೀತ ಕಲಿಯುತ್ತಿರುವ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಘದ ಅಧ್ಯಕ್ಷ ಉದಯಕುಮಾರ ಫುಲಾರಿ, ಕಾರ್ಯದರ್ಶಿ ಸುಹಾಸಿನಿ ಫುಲಾರಿ ವೇದಿಕೆ ಮೇಲಿದ್ದರು. ಶ್ರೀಮಂತ ಚಿಂಚನಸೂರ ಸ್ವಾಗತಿಸಿದರು. ಡಾ.ಸಂಗೀತಾ ಎಂ.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.