ಮೂಡಲಗಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾದವಾಡದಲ್ಲಿ ನಮಗೆ ಅಭೂತಪೂರ್ವ ಬೆಂಬಲ ಸಿಕ್ಕರೂ ಸೋಲಬೇಕಾಯಿತು. ಸೋತೆವು ಎಂದ ಮಾತ್ರಕ್ಕೆ ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ತಾಲೂಕಿನ ಯಾದವಾಡ ಗ್ರಾಮದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯಾದವಾಡ ಘಟಕ ವತಿಯಿಂದ ಆಯೋಜಿಸಲಾಗಿದ್ದ, ಯಾದವಾಡ ಸಾಂಸ್ಕೃತಿಕ ಉತ್ಸವ-2024 ರ ಕಾರ್ಯಕ್ರವನ್ನು ಉದ್ಘಾಟಿಸಿ, ಮಾತನಾಡಿದ ಅವರು ,ಯಾವುದೇ ಕೆಲಸಗಳನ್ನು ಮಾಡಲು ಮುಂದಾದರೆ ವಿಘ್ನಗಳಿರುತ್ತವೆ. ಅದನ್ನು ಜಯಿಸಿ ಯಾದವಾಡದ ಯುವಕರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ, ಹೀಗೆ ಸತತ 16 ವರ್ಷಗಳಿಂದ ಯಾದವಾಡ ಸಾಂಸ್ಕೃತಿಕ ಉತ್ಸವ ಆಯೋಜಿಸುತ್ತಿರುವ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ನಮ್ಮ ಸಂಸ್ಕೃತಿ ಪಸರಿಸಲು, ಕನ್ನಡದ ಮೇಲಿನ ಪ್ರೀತಿ, ದೇಶಭಕ್ತಿ. ನಾಡಭಕ್ತಿ ನಮಗೆಲ್ಲರಿಗೂ ಇದೆ. ರಾಜ್ಯದ ತುಂಬೆಲ್ಲ ಮಳೆ ಚೆನ್ನಾಗಿ ಆಗಿದೆ. ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮಾಡುತ್ತಿದೆ. ನಾವು ಮಾಡುವ ಕೆಲಸಗಳೇ ನಮಗೆ ಶ್ರೀರಕ್ಷೆ, ಅವುಗಳನ್ನು ಸಾಕ್ಷಿಯಾಗಿ ಬಿಟ್ಟು ಹೋಗಬೇಕು. ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತ ಕೆಲಸ ಮಾಡಬೇಕು. ನಾನೇ ಎಲ್ಲವೂ ಎಂದರೆ ನಮ್ಮಷ್ಟು ಮೂರ್ಖರು ಯಾರೂ ಇಲ್ಲ ಎಂದರು.

ಹಾಲು ಕುಡಿದವರೇ ಬದುಕುವುದು ಕಷ್ಟ, ಇನ್ನು ವಿಷ ಕುಡಿದವರು ಬದುಕುತ್ತಾರಾ?. ದ್ವೇಷ ಬಿಡಬೇಕು, ಎಲ್ಲರೂ ಒಂದಾಗಿ ಹೋಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ ಅವರು, ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ ಹೊಸ ಉತ್ಸಾಹ, ಚೈತನ್ಯವನ್ನು ತುಂಬುತ್ತವೆ, ಎಷ್ಟೋ ಕಲಾವಿದರನ್ನು ಬೆಳಕಿಗೆ ತರುತ್ತವೆ, ಎಷ್ಟೊ ಕಲಾವಿದರ ಜೀವನ ರೂಪಿಸುತ್ತವೆ. ಜೊತೆಗೆ, ಪಕ್ಷ ಭೇದ ಮರೆತು ಜನರನ್ನೆಲ್ಲ ಒಂದೆಡೆ ಸೇರಿಸುವ ಮೂಲಕ ಊರಿನ ಒಗ್ಗಟ್ಟಿಗೆ, ಬೆಳವಣಿಗೆಗೆ, ಅಭಿವೃದ್ಧಿಗೆ ಕಾರಣವಾಗುತ್ತವೆ ಎಂದರು.

ಕಾಂಗ್ರೆಸ್ ಮುಖಂಡರಾದ ಮಹಾಂತೇಶ್ ಕಡಾಡಿ ಮಾತನಾಡಿದರು. ಯಾದವಾಡ ಚೌಕಿಮಠದ ಪರಮಪೂಜ್ಯ ಶಿವಯೋಗಿ ದೇವರು, ಶಿವಾನಂದ ಮಠದ ಬಸವರಾಜ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ನಂತರದಲ್ಲಿ ರಾಷ್ಟ್ರಮಟ್ಟದ ಸಾಮೂಹಿಕ ಹಾಗೂ ವೈಯಕ್ತಿಕ ನ್ಯತ್ಯ ಸ್ಪರ್ಧೆಯಗಳು ಜರುಗಿದವು.

ಕಾರ್ಯಕ್ರಮದಲ್ಲಿ ನಮ್ಮ ಕರವೇ ಸಂಸ್ಥಾಪಕ ಅಧ್ಯಕ್ಷ ಕಲ್ಮೇಶ ಗಾಣಿಗಿ, ಘಟದ ಅಧ್ಯಕ್ಷ ಅಜಯ ಜಾಧವ, ಕುಮಾರ ಹಿರೇಮಠ್, ಯಾದವಾಡದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡರ್, ಶ್ರೀಹರ್ಷಾ ನಿಲೋಪಂತ್, ಸಂಗಮೇಶ್ ಕತ್ತಿ, ರಾವುಸಾಬ್ ಬೆಳಕೊಡ್, ಶಿವನಗೌಡ ಪಾಟೀಲ, ಬಿ.ಬಿ. ಹಂದಿಗುಂದ, ಈರಣ್ಣ ಕೊಣ್ಣೂರ್, ಮಲ್ಲಿಕಾರ್ಜುನ ಚೌಕಾಶಿ, ರಾಜನಗೌಡ ಪಾಟೀಲ, ಪ್ರಕಾಶ ಕಾಳಶೆಟ್ಟಿ, ಮಲ್ಲಪ್ಪ ಮದುಗುಣಕಿ, ಈರಣ್ಣ ಮುದ್ದಾಪುರ ಹಾಗೂ ಅನೇಕರು ಉಪಸ್ಥಿತರಿದ್ದರು. ಶೃತಿ ಜಾಧವ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here