ಕಲಬುರಗಿ:ಜಗತ್ತಿನ ಎಲ್ಲಾ ರಾಷ್ಟ್ರಗಳ ಸಂವಿಧಾನಕ್ಕಿಂತ ನಮ್ಮ ರಾಷ್ಟ್ರದ ಸಂವಿಧಾನ ಸರ್ವರಿಗೂ ಸಮಾನತೆ ನೀಡುವುದರೊಂದಿಗೆ ಬಲಿಷ್ಠ ರಾಷ್ಟ್ರ ಕಟ್ಟಲು ಸಹಕಾರಿಯಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ನ್ಯಾಯವಾದಿ ಜ್ಯೋತಿಲಕ್ಷ್ಮಿ ಎಸ್ ಶೆಟ್ಟಿ ಹೇಳಿದರು. ಕಲಬುರಗಿ ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 237ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ “ಜನಸಾಮಾನ್ಯರಿಗೆ ಕಾನೂನು ಅರಿವು ಅವಶ್ಯಕತೆ” ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ದೇಶದಲ್ಲಿ ಕಠಿಣವಾದ ಕಾನೂನುಗಳಿವೆ ಆದರೆ ಜನರಿಗೆ ಕಾನೂನಿನ ಅರಿವು ಕೊರತೆಯಿಂದ ಅಪರಾಧ ಕ್ರಿಯೆಗಳು ಹೆಚ್ಚಾಗುತ್ತಿರುವುದು ವಿಷಾದಕರ ಸಂಗತಿ. 12ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳಲ್ಲಿಯೇ ಹಲವಾರು ಕಾನೂನುಗಳ ಬಗ್ಗೆ ಅರಿವು ಮೂಡಿಸಿ ಉತ್ತಮವಾದ ಸಮಾಜ ನಿರ್ಮಿಸಿದರು. ಆಧುನಿಕ ಯುಗದಲ್ಲಿ ಜನರ ಜೀವನದ ಶೈಲಿ ಬದಲಾವಣೆಯಾಗಿ ಮಾನವೀಯ ಮೌಲ್ಯಗಳು ಕಡಿಮೆಯಾಗಿ  ವರದಕ್ಷಿಣೆ ಕಿರುಕುಳ, ಮಕ್ಕಳ ಅಪರಾಧ ಕ್ರಿಯೆ, ಕೌಟುಂಬಿಕ ಕಲಹ ಹಾಗೂ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಇಂತಹ ಸಮಯದಲ್ಲಿ ಸರ್ವ ಜ್ಞಾನದ ಜೊತೆಗೆ ಸಂಸ್ಕಾರ ನೀಡುತ್ತಿರುವ ಶ್ರೀಮಠದ ಕಾರ್ಯ ಶ್ಲಾಘನೀಯ ಎಂದು ಮಾರ್ಮಿಕವಾಗಿ ನುಡಿದರು. ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರತಿ ಸೋಮವಾರ ಶಿವಾನುಭವಗೋಷ್ಠಿಯಲ್ಲಿ ಸಮಾಜದ ಹಲವಾರು ಕ್ಷೇತ್ರಗಳ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡುವುದರೊಂದಿಗೆ ಜನಜಾಗ್ರತಿ ಮಾಡುತ್ತ ಉತ್ತಮ ಸಮಾಜ ಕಟ್ಟುವ ಪರಿಕಲ್ಪನೆ ಶ್ರೀಮಠದ ಪೂಜ್ಯರು ಹೊಂದಿದ್ದಾರೆ. ಸರ್ವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಶಿವಯ್ಯ ಎಸ್ ಹಿರೇಮಠ ಆಗಮಿಸಿದರು. ಕಾರ್ಯಕ್ರಮದಲ್ಲಿ ಸಂಗಮೇಶ ಹೂಗಾರ, ಸಂಜೀವಕುಮಾರ ಶೆಟ್ಟಿ, ಕಲಾವಿದ ಶ್ರೀಕಾಂತ ಪಾಟೀಲ ತೆಲ್ಲೂರ, ಶರಣು ವರನಾಳ, ಶಾಂತು ಕಲಬುರಗಿ, ಶಿವರಾಜ ಭಾಲಖೇಡ, ಗುರುರಾಜ ಹಸರಗುಂಡಗಿ, ಸಿದ್ದಣ್ಣ ವಾಡಿ, ಶಿವಕುಮಾರ ಸಾವಳಗಿ, ಬಲವಂತರಾಯ ಕಣ್ಣೂರ, ಸುಧಾರಾಣಿ ಎಸ್ ಕೆ, ಸುರೇಖಾ ಗುಬ್ಬಿ, ಕಮಲಾಬಾಯಿ ವಾಡಿ ಸೇರಿದಂತೆ ಅನೇಕ ಜನ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ನ್ಯಾಯಲಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೂ,  ಅತಿಥಿಗಳಿಗೂ ಶ್ರೀಮಠದ ವತಿಯಿಂದ ಗೌರವಿಸಲಾಯಿತು.(ಸಂಗಮೇಶ ಹೂಗಾರ)

LEAVE A REPLY

Please enter your comment!
Please enter your name here