ಬಳ್ಳಾರಿ,ಅ.29:ಈ ಬಾರಿಯ ದೀಪಾವಳಿ ಹಬ್ಬವನ್ನು ಪ್ರತಿಯೊಬ್ಬರೂ ಸ್ವಚ್ಛತೆಯೊಂದಿಗೆ ಆಚರಿಸಬೇಕು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ಅವರು ಹೇಳಿದರು.
ಕೇಂದ್ರ ಸರ್ಕಾರದ ಸ್ಥಾಯಿ ಸಂಸ್ಥೆಯಾದ ನೆಹರು ಯುವ ಕೇಂದ್ರ, ರಾಷ್ಟೀಯ ಅಂಕಿ ಸಂಖ್ಯೆಗಳ ಇಲಾಖೆ ಇವರ ಸಹಯೋಗದಲ್ಲಿ ‘ನನ್ನ ಭಾರತದೊಂದಿಗೆ ದೀಪಾವಳಿ ಕಾರ್ಯಕ್ರಮ’ ಅಂಗವಾಗಿ ರಾಷ್ಟೀಯ ಅಂಕಿ ಸಂಖ್ಯೆಗಳ ಇಲಾಖೆಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಚ್ಛತಾ ಸೇವೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಸ್ಥ ಹಾಗೂ ಸುಂದರ ಸಮಾಜ ನಿರ್ಮಾಣದಲ್ಲಿ ಸ್ವಚ್ಛತೆಯ ಪಾತ್ರ ಬಹಳ ಮುಖ್ಯವಾಗಿದೆ. ಹಾಗಾಗಿ ವ್ಯಾಪಾರಸ್ಥರು ಅಂಗಡಿ ಹಾಗೂ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ನೆಹರೂ ಯುವ ಕೇಂದ್ರದಿಂದ ಅಕ್ಟೋಬರ್ 30 ರ ವರೆಗೆ ನನ್ನ ಭಾರತದೊಂದಿಗೆ ದೀಪಾವಳಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಾರುಕಟ್ಟೆ, ಆಸ್ಪತ್ರೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಸಂಚಾರ ಜಾಗೃತಿ ಮೊದಲಾದವು ಅಭಿಯಾನದ ಭಾಗವಾಗಿವೆ. ಪ್ರತಿಯೊಬ್ಬರೂ ಮನೆ, ಸುತ್ತಮುತ್ತಲಿನ ಆವರಣ ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಸೇವೆಯ ಜಾಗೃತಿ ಜಾಥಾ ನಡೆಸಲಾಯಿತು.
ಜಾಥಾವು ನಗರದ ರಾಘವೇಂದ್ರ ಟಾಕೀಸ್, ವಡ್ಡರಬಂಡಿ, ಪ್ರಭಾತ್ ಟಾಕೀಸ್ ವ್ಯಾಪ್ತಿಯಲ್ಲಿ ಸಂಚರಿಸಿ ದಿನನಿತ್ಯದ ಕಸ ವಿಲೇವಾರಿ ಕುರಿತು ಅಂಗಡಿಯವರಿಗೆ ಅರಿವು ಮೂಡಿಸಲಾಯಿತು.ಈ ವೇಳೆ ಅಂಕಿ ಸಂಖ್ಯೆಗಳ ಇಲಾಖೆಯ ಅಧಿಕಾರಿಗಳಾದ ಮನಿಶ್ ಕುಮಾರ, ಮಿತೇಶ ವಿಶ್ವಕರ್ಮ ಸೇರಿದಂತೆ ಸ್ವಯಂ ಸೇವಕರು ಹಾಗೂ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here