ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ಕಲ್ಲಪ್ಪ ಕಲ್ಲಮ್ಮ Iದಂಪತಿಗಳ ಮಗನಾಗಿ 1933ರ ಅಕ್ಟೋಬರ್ 26ರಂದು ಜನಿಸಿದ ಸಾರೆಕೊಪ್ಪ ಬಂಗಾರಪ್ಪನವರು ಕರ್ನಾಟಕ ಕಂಡ ಅಪರೂಪದ, ಧೀಮಂತ ರಾಜಕಾರಣಿ. ಬಂಗಾರಪ್ಪನವರದು ಹತ್ತಾರು ಮುಖಗಳ ಪ್ರಖರ ವ್ಯಕ್ತಿತ್ವ. ಹಿಂದುಳಿದ ವರ್ಗದಲ್ಲಿ ಹುಟ್ಟು ಪಡೆದ ಬಂಗಾರಪ್ಪನವರು ಕುಲ ಕಸುಬಿಗೆ ಅಂಟಿಕೊಳ್ಳದೆ ಪ್ರತಿಭಾವಂತ ವಿದ್ಯಾರ್ಥಿಯಾಗಿ ಕಾನೂನು ಪದವಿಯನ್ನು ಪಡೆದರು. ಸಮಾಜ ವಿಜ್ಞಾನವನ್ನು ಅಭ್ಯಾಸ ಮಾಡಿದರು. ಲೋಹಿಯಾ ಚಿಂತನೆಗಳು ಅವರಿಗೆ ಎಳವೆಯಲ್ಲಿಯೇ ಅಗಾದ ಪರಿಣಾಮ ಬೀರಿದವು. ಅವರು ವಕೀಲರಾಗಿ ಪ್ರಾರಂಭಿಸಿದ ಸಮಾಜಮುಖಿ ಕಾರ್ಯ, ಹೋರಾಟಗಳು ಅವರನ್ನು ಎತ್ತರೆತ್ತರಕ್ಕೆ ನಿಲ್ಲಿಸಿದ್ದು ದಿಟ. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರವಿಚಾರಧಾರೆ
ಗಳಿಂದ ಪ್ರಭಾವಿತರಾದ ಬಂಗಾರಪ್ಪನವರು ಅವರ ಶಿಷ್ಯರಾಗಿ 1962 ರಲ್ಲಿ ರಾಜಕೀಯ ಕ್ಷೇತ್ರಕ್ಕೆ ದುಮುಕಿದರು. ಮುಂದೆ ಆದದ್ದೆಲ್ಲ ಒಂದು ಹೊಸ ಇತಿಹಾಸ.
ಬಂಗಾರಪ್ಪನವರು ಮೊದಲ ಬಾರಿಗೆ 1967 ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಸೋಷಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅದು ಅವರ ರಾಜಕೀಯ ಬದುಕಿನ ಭದ್ರ ಬುನಾಧಿ ಯಾಯಿತು ಅವರು ಸೊರಬದಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆಯಾದ ಸಂಗತಿ ಮಾತ್ರ ಅವರ ಬದುಕಿನಲ್ಲಿ ಒಂದು ಬಹು ದೊಡ್ಡ ಅಧ್ಯಾಯ. ಅಲ್ಲಿ ಅವರು ಎಂದೆಂದಿಗೂ ಸೋಲಿಲ್ಲದ ಸರದಾರ.
ಬಂಗಾರಪ್ಪನವರು ಹಠವಾದಿಯಾಗಿ ಹಿಡಿದ ಕೆಲಸವನ್ನು ಪಟ್ಟುಬಿಡದೆ ಸಾಧಿಸುವ ಗುಣ ಸ್ವಭಾವದಿಂದಾಗಿ ಅವರು ರಾಜಕೀಯದಲ್ಲಿ ಹಲವು ತಿರುವುಗಳನ್ನು ಸೃಷ್ಟಿಸಿಕೊಂಡರು. ಅವರಿಗೆ ಪಕ್ಷಕ್ಕಿಂತ ತಮ್ಮ ತತ್ವ, ಸಿದ್ಧಾಂತ ,ಸ್ವಾಭಿಮಾನಗಳೇ ಅಧಿಕವಾಗಿ ಕಂಡವು. ಹಾಗಾಗಿ ಅವರು ಒಂದೇ ಪಕ್ಷದಲ್ಲಿ ನೆಲೆ ನಿಂತ ವರಲ್ಲ .ಬದಲಾಗಿ ಅವರೇ ಹೊಸ ಹೊಸ ಪಕ್ಷಗಳನ್ನು ಕಟ್ಟಿ ಬೆಳೆಸಿದರು. ಸಮಯ ಬಂದಾಗ ಪಕ್ಷ ತೊರೆದು ಮರಳಿ ಬಂದು , ಮತ್ತೆ ಹೊರ ಹೋಗುವುದರಲ್ಲಿ ಅವರು ಹಿಂದೆ ಮುಂದೆ ನೋಡಿದವರಲ್ಲ !
ಬಹುಮುಖಿ ಬಂಗಾರಪ್ಪ
1967 ರಲ್ಲಿ ಅವರು ಇದ್ದಿದ್ದು ಗೆದ್ದಿದ್ದು ಸೋಷಲಿಸ್ಟ್ ಪಾರ್ಟಿಯಿಂದ .1972 ರಲ್ಲಿ ಅವರು ಅಲ್ಲಿ ನಿಲ್ಲದೆ ಕಾಂಗ್ರೆಸ್ ಪಕ್ಷ ಸೇರಿದರು. 1977 ರಿಂದ 1981 ರವರೆಗೆ ಅವರು ದೇವರಾಜ ಅರಸು ಮಂತ್ರಿ ಮಂಡಲದಲ್ಲಿ ಗೃಹ ಇಲಾಖೆ, ಲೋಕೋಪಯೋಗಿ ,ಕಂದಾಯ, ಕೃಷಿ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದರು. ಆದರೆ 1983 ರಲ್ಲಿ ಬಂಗಾರಪ್ಪನವರು ಕಾಂಗ್ರೆಸ್ ತೊರೆದು “ಕರ್ನಾಟಕ ಕ್ರಾಂತಿ ರಂಗ” ವನ್ನು ಕಟ್ಟಿದರು. ಏಳು ವರ್ಷಗಳ ಕಾಲ ಅದರ ನೇತೃತ್ವ ವಹಿಸಿದರು. ಜನತಾ ಪಕ್ಷದೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಜನತಾ ರಂಗದ ಹೆಸರಿನಲ್ಲಿ ಚುನಾವಣೆಗಳನ್ನು ಎದುರಿಸಿದರು. ಕಾಂಗ್ರೆಸ್ ಅಧಿಕಾರದಿಂದ ದೂರ ಸರಿಯುವಂತೆ ಮಾಡಿದರು. 1985 ರಿಂದ 2 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿಯೂ ಅವರು ಸೇವೆ ಸಲ್ಲಿಸಿದರು. ಕ್ರಾಂತಿ ರಂಗದಿಂದ ಮರಳಿ ಕಾಂಗ್ರೆಸ್ ಗೆ ಬಂದ ಬಂಗಾರಪ್ಪನವರು 1990ರಲ್ಲಿ ವೀರೇಂದ್ರ ಪಾಟೀಲರ ಸಂಪುಟದಲ್ಲಿ ಕೃಷಿ ಸಚಿವರಾಗಿ ಸೇರ್ಪಡೆಗೊಂಡರು. ಪಾಟೀಲರ ಅನಾರೋಗ್ಯದ ಕಾರಣದಿಂದ ಮುಖ್ಯಮಂತ್ರಿ ಯಾಗುವ ಸುಯೋಗ ಬಂಗಾರಪ್ಪನವರಿಗೆ ಒದಗಿ ಬಂತು. 1990ರ ಅಕ್ಟೋಬರ್ ನಿಂದ 1992ರ ನವಂಬರ್ ವರೆಗೆ ಎರಡು ವರ್ಷ ಒಂದು ತಿಂಗಳ ಕಾಲ ಬಂಗಾರಪ್ಪನವರು ಸಮರ್ಥವಾಗಿಯೇ ಆಡಳಿತ ನಡೆಸಿದರು. ರಾಜಕೀಯ ಏರು
ಪೇರುಗಳಿಂದ ಬಂಗಾರಪ್ಪನವರು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದು ವೀರಪ್ಪ ಮೊಯ್ಲಿಯ ವರು ಮುಖ್ಯಮಂತ್ರಿಗಳಾಗ
ಬೇಕಾಯಿತು. ಬಂಗಾರಪ್ಪನವರು ಕಾಂಗ್ರೆಸ್ ಪಕ್ಷದ ಜುಗಲ್ ಬಂದಿಯ ನಡುವೆ 1994ರಲ್ಲಿ ತಮ್ಮದೇ ಆದ ಕರ್ನಾಟಕ ಕಾಂಗ್ರೆಸ್ ಪಾರ್ಟಿ (ಕೆಸಿಪಿ) ಯನ್ನು ಕಟ್ಟಿದರು. ನಂತರ 1997ರಲ್ಲಿ ಕರ್ನಾಟಕ ವಿಕಾಸ ಪಾರ್ಟಿ (ಕೆವಿಪಿ)ಸ್ಥಾಪಿಸಿದರು. ಅದನ್ನು ಕಾಂಗ್ರೆಸ್ ನಲ್ಲಿ ವಿಲೀನ ಗೊಳಿಸಿದರು. 1996 ರಿಂದ 2004ರ ವರೆಗೆ ಕಾಂಗ್ರೆಸ್ ನಲ್ಲಿ ಉಳಿದರು. 2004ರಲ್ಲಿ ಬಿಜೆಪಿ ಪಕ್ಷ ಸೇರಿದರು. ಒಂದೇ ವರ್ಷದಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದರು. 2010ರಲ್ಲಿ ಆ ಪಕ್ಷವನ್ನು ತೊರೆದು ಜೆಡಿಎಸ್ ಸೇರಿದರು. ಅದೇ ಅವರ ಕೊನೆಯ ಪಕ್ಷವಾಯಿತು !
ಯಾವ ಪಕ್ಷ ವಾದರೇನು ಗೆಲುವು ಇವರದೇ!
:ಸೊರಬ ಮತಕ್ಷೇತ್ರದಲ್ಲಿ ಬಂಗಾರಪ್ಪನವರು ಸತತವಾಗಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ . ಅಲ್ಲಿನ ಮತದಾರ ಬಂಗಾರಪ್ಪನವರು ಯಾವ ಪಕ್ಷದಲ್ಲಿ ಇದ್ದಾರೆ ಎಂಬುದನ್ನು ನೋಡಿಯೇ
ಇಲ್ಲವೆಂಬಂತೆ ಅವರನ್ನು ಗೆಲ್ಲಿಸಿದ್ದಾರೆ. ಅದೇ ರೀತಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಗಾರಪ್ಪನವರು ಮೂರು ಬಾರಿ ಸಂಸದರಾಗಿದ್ದಾರೆ. ಅಲ್ಲಿಯೂ ಅದೇ ಕಥೆ!
ಸೋಲಿಲ್ಲದ ಸರದಾರ.
ಸೊರಬದ ಮತದಾರ ಬಂಗಾರಪ್ಪನವರ ಬಗ್ಗೆ ಹೊಂದಿದ್ದ ಅಖಂಡ ಅಭಿಮಾನ ಮಾತ್ರ ಮಾತಿಗೆ ನಿಲುಕದ್ದು . ಒಮ್ಮೆ ಅವರು ಶಾಸಕ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿ ಮತದಾನದ ದಿನದವರೆಗೆ ಕ್ಷೇತ್ರಕ್ಕೆ ಬರಲೇ ಇಲ್ಲ ಪಕ್ಷವನ್ನು ಗೆಲ್ಲಿಸ ಬೇಕೆಂಬ ಹಂಬಲದಿಂದ ಅವರು ರಾಜ್ಯ ಪ್ರವಾಸದಲ್ಲಿಯೇ ಕಾಲ ಕಳೆಯುವಂತಾಯಿತು. ಅವರು ಸೊರಬಕ್ಕೆ ಬಂದಿದ್ದು ಮತದಾನದ ದಿನ ತಮ್ಮ ಮತ ಮಾಡುವ ಕಾರಣಕ್ಕಾಗಿ! ಆಶ್ಚರ್ಯದ ಸಂಗತಿ ಎಂದರೆ ಆ ಚುನಾವಣೆಯಲ್ಲಿ ಬಂಗಾರಪ್ಪನವರು ಸೊರಬ ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದರು.ಇಂದಿನ ದಿನಮಾನದಲ್ಲಿ ಇಂತಹ ಅನುಬಂಧ ಅಪರೂಪ.
ಸೋಲಿನ ರುಚಿಯು ಉಂಟು
1994ರಲ್ಲಿ ಕಾಗೋಡು ತಿಮ್ಮಪ್ಪ ನವರನ್ನು ಸೋಲಿಸಬೇಕೆಂಬ ಉದ್ದೇಶದಿಂದ ಬಂಗಾರಪ್ಪನವರು ಸಾಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಚುನಾವಣೆಗೆ ನಿಂತರು. ಅಲ್ಲಿ ಅವರಿಗೆ ದೊರಕಿದ್ದು ಗೆಲುವಲ್ಲ, ಬದಲಾಗಿ ಮೂರನೇ ಸ್ಥಾನ !
ಅದೇ ರೀತಿ 2008ರಲ್ಲಿ ಸಮಾಜವಾದಿ ಪಕ್ಷದಿಂದ ಶಿಕಾರಿಪುರ ಕ್ಷೇತ್ರದಲ್ಲಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಬಂಗಾರಪ್ಪನವರು ಚುನಾವಣೆಗೆ ಸ್ಪರ್ಧಿಸಿದರು .ಅಲ್ಲಿಯೂ ಇವರಿಗೆ ಸೋಲಾಯಿತು.
ರಾಜಕೀಯದ ಸೋಲು ಗೆಲುವುಗಳನ್ನು ಸಮನಾಗಿಯೇ ಸ್ವೀಕರಿಸಿದ ಬಂಗಾರಪ್ಪನವರು ತಮ್ಮ ಸಮಾಜ ಮುಖಿ ಕೆಲಸಗಳಲ್ಲಿ ಮಾತ್ರ ಎಂದೂ ಸೋತವರಲ್ಲ. ಗೇಣಿದಾರರ ಪರ ಬಂಗಾರಪ್ಪನವರು ಮಾಡಿದ ಹೋರಾಟ ಮಾತ್ರ ತಲೆತಲಾಂತರ
ದವರೆಗೆ ಅವರ ಹೆಸರನ್ನು ಚಿರ
ಸ್ಥಾಯಿಯನ್ನಾಗಿ ಮಾಡು ವಂತಹದು.
ಆಶ್ರಯದಾತ
ಬಡವರಿಗೆ ಉಚಿತ ನಿವೇಶನ , ಮನೆಗಳನ್ನು ಕಟ್ಟಿಸಿ ಕೊಡುವ ಆಶ್ರಯ ಯೋಜನೆ ಬಂಗಾರಪ್ಪನವರ ಕಾಲದಲ್ಲಿ ರೂಪುಗೊಂಡ ಬಗೆ ಮಾತ್ರ ಎಂದಿಗೂ ಮರೆಯಲಾಗದು. ರಾಜ್ಯದ 36,000 ಧಾರ್ಮಿಕ ದೇವಾಲಯಗಳನ್ನು ಪುನರುಜ್ಜೀವನ ಗೊಳಿಸುವ ಆರಾಧನಾ ಯೋಜನೆ ಅನುಕರಣೇಯವಾಗಿಯೇ ಇದೆ. ಈ ಯೋಜನೆಗಳು ಇಂದಿಗೂ ಜನಪ್ರಿಯ ಹಾಗೂ ಅರ್ಥಪೂರ್ಣವಾಗಿ ಉಳಿದಿವೆ ಎಂಬುದೊಂದು ವಿಶೇಷ. ಗ್ರಾಮೀಣ ಕುಶಲಕರ್ಮಿಗಳು ಹಾಗೂ ಗುಡಿ ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ರೂಪುಗೊಂಡ ವಿಶ್ವ ಯೋಜನೆ ಆ ಜನರ ವಿಶ್ವಾಸವನ್ನು ಗಳಿಸುವಲ್ಲಿ ಸಫಲವಾಯಿತು.
ಹೀಗೆ ಬಂಗಾರಪ್ಪನವರ ಕೈಗೊಂಡ ಕೆಲಸ ಕಾರ್ಯಗಳು ವಿಶಿಷ್ಟ
ವಾದವುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.
ಮಂತ್ರಿಗಳಾಗುವುದು ಸುಲಭ, ಜನ ನಾಯಕನಾಗುವುದು ಕಷ್ಟ ಎಂಬ ಮಾತಿದೆ. ಬಡವರ ಬಂಧುವಾಗಿ, ಜನಸಾಮಾನ್ಯರ ಬದುಕಿಗೆ ಬೆನ್ನೆಲುಬಾಗಿ, ಹಿಂದುಳಿದ ವರ್ಗಗಳ ನೇತಾರರಾಗಿ, ತಮ್ಮ ಜನ ಮುಖಿ ಕಾರ್ಯಗಳ ಮೂಲಕ ಬಂಗಾರಪ್ಪನವರು ಚೊಕ್ಕ
ಬಂಗಾರವೇ ಸೈ ಎನಿಸಿಕೊಂಡವರು. ಜನರ ಎದೆಯಲ್ಲಿ ಅವರು ಜನಮನ ಗೆದ್ದ ಜನ ನಾಯಕನಾಗಿ ಶಾಶ್ವತವಾಗಿ ಉಳಿದಿರುವುದಂತೂ ಸತ್ಯ.
(ಎನ್ ಟಿ ಎರ್ರಿ ಸ್ವಾಮಿ
ಕೆನರಾ ಬ್ಯಾಂಕ್ ನಿವೃತ್ತ ಡಿ.ಎಂ ಜಗಳೂರು)