ಬೆಂಗಳೂರು ನಗರ ಜಿಲ್ಲೆ, ಅಕ್ಟೋಬರ್ 19 : ಕರ್ನಾಟಕ ರಾಜ್ಯದ ಘನತೆವೆತ್ತ ಉಪ ಲೋಕಾಯುಕ್ತರಾದ ನ್ಯಾ. ಕೆ.ಎನ್ ಫಣೀಂದ್ರ ಅವರು   ಅಕ್ಟೋಬರ್ 24 ಹಾಗೂ 25ರಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ನಗರದ ಯಲಹಂಕ ಉಪ ನಗರದಲ್ಲಿರುವ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಸಾರ್ವಜನಿಕ ಕುಂದು ಕೊರತೆ  ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಮಾನ್ಯ ಉಪಲೋಕಾಯುಕ್ತರು ಅಂದು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಮತ್ತು ಬೆಂಗಳೂರು ಪೂರ್ವ ತಾಲೂಕುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ತಮ್ಮ ಕುಂದು ಕೊರತೆ, ದೂರು ವಿಚಾರಣೆ ಹಾಗೂ ವಿವಿಧ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

ದಿನಾಂಕ 24.10.2024ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ಹಾಗೂ ಮಧ್ಯಾಹ್ನ 2:30 ರಿಂದ ಸಂಜೆ 5:00 ವರೆಗೆ ಅಹವಾಲುಗಳನ್ನು ಸ್ವೀಕರಿಸುವ ಮಾನ್ಯ ಉಪಲೋಕಾಯುಕ್ತರು ಒಂದು ಸಂಜೆ 5:30 ರಿಂದ 6:30ವರೆಗೆ ಅದೇ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ನಡೆಯಲಿರುವ ‘ಕರ್ನಾಟಕ ಲೋಕಾಯುಕ್ತ ಕಾಯ್ದೆ’ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ, ರೇಷ್ಮೆ, ಕೃಷಿ, ತೋಟಗಾರಿಕೆ, ಸಾರಿಗೆ, ಸಮಾಜ ಕಲ್ಯಾಣ, ಉಪ ನೋಂದಣಾಧಿಕಾರಿಗಳು, ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಇತರೆ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುವರು.

ಮರುದಿನ ಅಕ್ಟೋಬರ್ 25ರಂದು ಬೆಳಗ್ಗೆ 10 ಗಂಟೆಗೆ ಹಿಂದಿನ ದಿನದ ಕುಂದುಕೊರತೆಗಳಲ್ಲಿ ಬಾಕಿ ಉಳಿದಂತಹ ಅಹವಾಲುಗಳ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸುವರು.

ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ವರೆಗೆ ಹಾಗೂ ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆ ವರೆಗೆ ಸಾರ್ವಜನಿಕ ಅಹವಾಲುಗಳ ಬಾಕಿ ಪ್ರಕರಣಗಳ ಬಗ್ಗೆ ಚರ್ಚಿಸುವರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಎರಡೂ ದಿನಗಳ ಅಹವಾಲು ಸ್ವೀಕಾರ ಕಾರ್ಯಕ್ರಮದ ಸದುಪಯೋಗವನ್ನು  ಪಡೆದುಕೊಳ್ಳಬೇಕೆಂದು  ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here