ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಎಫ್ ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ನಾಯಕರು ಹೋರಾಟ ಪ್ರಾರಂಭಿಸಿದ್ದಾರೆ. ಈ ಹೋರಾಟದ ತಾರ್ಕಿಕ ಅಂತ್ಯ ಯಾರ್ಯಾರ ಮನೆ ಬಾಗಿಲು ತಟ್ಟಬಹುದೆಂಬ ಕನಿಷ‍್ಠ ಸಾಮಾನ್ಯ ಜ್ಞಾನವಾದರೂ ಈ ನಾಯಕರಿಗಿದೆಯಾ?
ತಮ್ಮ ಹೋರಾಟದ ಪರಿಣಾಮ ಏನಾಗಬಹುದೆಂದು ಇವರಿಗೆ ಸರಿಯಾಗಿ ಅರಿವಾದರೆ ಇವರೆಲ್ಲರೂ ಕೂಡಿ ಸಿದ್ದರಾಮಯ್ಯನವರ ಕಾಲು ಹಿಡಿದು ದಯವಿಟ್ಟು ರಾಜೀನಾಮೆ ಕೊಡಬೇಡಿ ಎಂದು ಬೇಡಿಕೊಳ್ಳಬೇಕಾಗಬಹುದು.
ಎಫ್ ಐ ಆರ್ ಆಗಿರುವ ಕಾರಣಕ್ಕೆ ರಾಜೀನಾಮೆ ನೀಡಬೇಕೆಂಬ ಮಾನದಂಡವನ್ನು ನಿಗದಿಪಡಿಸಿದರೆ ಸಿದ್ದರಾಮಯ್ಯನವರು ಮಾತ್ರವಲ್ಲ ನರೇಂದ್ರ ಮೋದಿಯವರ ಸಂಪುಟದ ಕನಿಷ್ಠ 23-24 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಇವರಲ್ಲಿ ನಿರ್ಮಲಾ ಸೀತಾರಾಮನ್, ಹೆಚ್.ಡಿ.ಕುಮಾರಸ್ವಾಮಿ, ಕುಮಾರಿ ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ, ಬಂಡಿ ಸಂಜಯ್, ಸುರೇಶ್ ಗೋಪಿ, ಜುಯಲ್ ಓರಮ್ ಮೊದಲಾದವರು ಸೇರಿದ್ದಾರೆ. ಇವರಲ್ಲಿ ಕೆಲವರು ಚುನಾವಣಾ ಕಾಲದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಕ್ರಿಮಿನಲ್ ಪ್ರಕರಣಗಳ ಪ್ರಮಾಣಪತ್ರದಲ್ಲಿಯೇ ತಮ್ಮ ವಿರುದ್ದದ ಅಪರಾಧ ಪ್ರಕರಣಗಳನ್ನು ಒಪ್ಪಿಕೊಂಡಿದ್ದಾರೆ.
‘’ನಾನು ಸಿದ್ದರಾಮಯ್ಯನವರ ರಾಜೀನಾಮೆ ಕೇಳುವುದಿಲ್ಲ’’ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಯಾಕೆ ಔದಾರ್ಯ ತೋರಿಸುತ್ತಿರುವುದು ಎನ್ನುವುದು ಗೊತ್ತಾಯಿತಲ್ಲಾ? ಜಾಣ ಹಣ್ಣ! ಇವರ ವಿರುದ್ದ ಲೋಕಾಯುಕ್ತ ಪೊಲೀಸರು ಎಫ್ ಐ ಆರ್ ಮಾತ್ರವಲ್ಲ ಆರೋಪಪಟ್ಟಿಯನ್ನೂ ಸಲ್ಲಿಸಿದ್ದಾರೆ..
ಎಫ್ ಐಆರ್ ಇಲ್ಲದ ವ್ಯಕ್ತಿಯನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಹುಡುಕಾಡುವುದು ಸಾವಿಲ್ಲದ ಮನೆಯಲ್ಲಿ ಸಾಸಿವೆ ಹುಡುಕುವುದಕ್ಕಿಂತಲೂ ಕಷ್ಟದ ಕೆಲಸ. ಯಾರಲ್ಲಿಯಾದರೂ ಈ ಸಾಸಿವೆ ಹುಡುಕುವಷ್ಟು ತಾಳ್ಮೆ ಇದ್ದರೆ ಅವರು ದಯವಿಟ್ಟು ಎಡಿಆರ್ ( Association for Democratic Reform) ವೆಬ್ ಸೈಟಿಗೆ ಒಂದು ಇಣುಕು ಹಾಕಬಹುದು. 2024ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ 543 ಸಂಸದರಲ್ಲಿ 251 ಸಂಸದರ (41%) ವಿರುದ್ದ ಕ್ರಿಮಿನಲ್ ಪ್ರಕರಣಗಳಿವೆ. ಇವರಲ್ಲಿ 131 ಸಂಸದರ ವಿರುದ್ದ ಕೊಲೆ, ಅತ್ಯಾಚಾರ, ಸುಲಿಗೆ, ಅಪಹರಣದಂತ ಘೋರ ಅಪರಾಧಗಳ ಪ್ರಕರಣಗಳಿವೆ.
ಕೇಂದ್ರ ಸಚಿವರಾದ ದೊಡ್ಡ ಬಾಯಿ ಶೋಭಾ ಕರಂದ್ಲಾಜೆ ವಿರುದ್ದ ಭಾರತೀಯ ದಂಡ ಸಂಹಿತೆಯಡಿ ದಾಖಲಾಗಿರುವ ನಾಲ್ಕು ಗಂಭೀರ ಕ್ರಿಮಿನಲ್ ಪ್ರಕರಣಗಳು ಮತ್ತು ಇತರ ನಾಲ್ಕು ಪ್ರಕರಣಗಳಿವೆ. ಇನ್ನೊಬ್ಬ ಸಚಿವರಾದ ವಿ.ಸೋಮಣ್ಣ ವಿರುದ್ದ ಐಪಿಸಿಯಡಿ ದಾಖಲಾಗಿರುವ ಒಂದು ಪ್ರಕರಣ ಇದೆ. ಇವರ ಜೊತೆ ಸಂಸದರಾದ ಬಿ.ವೈ.ರಾಘವೇಂದ್ರ, ಪಿ.ಸಿ.ಮೋಹನ್ ವಿರುದ್ದವೂ ಕ್ರಿಮಿನಲ್ ಅಪರಾಧದ ಪ್ರಕರಣಗಳು ದಾಖಲಾಗಿವೆ. ಈಗಿನ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಮುಖ್ಯಮಂತ್ರಿ ಸದಾನಂದ ಗೌಡ ಸಂಪುಟದಲ್ಲಿ ಸಚಿವರಾಗಿದ್ದಾಗ ಅವರ ವಿರುದ್ದ ಲೊಟ್ಟೆಗೊಳ್ಳಹಳ್ಳಿಯಲ್ಲಿನ ಭೂಮಿಗೆ ಸಂಬಂಧಿಸಿದ ಡಿನೋಟಿಫಿಕೇಷನ್ ಪ್ರಕರಣ ದಾಖಲಾಗಿತ್ತು.
ಈ ಸಣ್ಣವರನ್ನೆಲ್ಲ ಬಿಟ್ಟು ಬಿಡಿ, ದೊಡ್ಡವರನ್ನು ನೋಡುವ. 2014ರಲ್ಲಿದ ನರೇಂದ್ರಮೋದಿಯವರ ಬಲಗೈ ಬಂಟ ಅಮಿತ್ ಶಹಾ ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರು ತ್ರಿವಳಿ ಹತ್ಯೆಯ ಆರೋಪಿಯಾಗಿದ್ದರು. ಕುಖ್ಯಾತ ರೌಡಿ ಸೊಹ್ರಾಬುದ್ದೀನ್ ಅವನ ಹೆಂಡತಿ ಹಾಗೂ ಬೆಂಬಲಿಗನೊಬ್ಬನ ಪೊಲೀಸ್ ಎನ್ ಕೌಂಟರ್ ಪ್ರಕರಣದಲ್ಲಿ ಅವರ ಮೇಲೆ ಹತ್ಯೆಯ ಆರೋಪ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅದೇ ವರ್ಷದ ಡಿಸೆಂಬರ್ ನಲ್ಲಿ ಶಹಾ ವಿರುದ್ದದ ಆರೋಪಗಳನ್ನು ಕೈಬಿಟ್ಟಿತ್ತು.
ಇದರ ಅರ್ಥ ಕೇವಲ ಬಿಜೆಪಿ ನಾಯಕರ ವಿರುದ್ದ ಮಾತ್ರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ ಎಂದಲ್ಲ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಶಶಿ ತರೂರು ಸೇರಿದಂತೆ ಅನೇಕ ಕಾಂಗ್ರೆಸ್ ಸಂಸದರ ವಿರುದ್ದವೂ ಇಂತಹ ಪ್ರಕರಣಗಳು ದಾಖಲಾಗಿವೆ.
-ದಿನೇಶ್ ಅಮಿನ್ ಮಟ್ಟು