ಬೆಂಗಳೂರು, ಸೆ. 26:
“ಕ್ವಿನ್ ಸಿಟಿ ಮೂಲಕ ಕೇವಲ ಕಟ್ಟಡಗಳನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಲ್ಲ. ಶಿಕ್ಷಣ, ತಂತ್ರಜ್ಞಾನ, ಉದ್ಯೋಗ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಕರ್ನಾಟಕದ ಭವಿಷ್ಯವನ್ನು ಗುರಿಯಾಗಿಟ್ಟುಕೊಂಡು ಜನರ ಜೀವನದಲ್ಲಿ ಬದಲಾವಣೆ ತರುವುದು ಯೋಜನೆಯ ಗುರಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಕ್ವಿನ್ ಸಿಟಿ (ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ) ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಸ್ವಾತಂತ್ರ್ಯ ಬಂದ ದಿನದಿಂದಲೂ ಬೆಂಗಳೂರು ಬೌದ್ಧಿಕ ನಗರ ಎಂದು ಹೆಸರು ಮಾಡಿದೆ. ಈ ನಗರದ ಅಭಿವೃದ್ಧಿಗೆ ನೆಹರು ಸಾಕಷ್ಟು ಶಕ್ತಿ ಕೊಟ್ಟಿದ್ದಾರೆ. ನಾವೆಲ್ಲರೂ ಸೇರಿ ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ” ಎಂದರು.
“ಕರ್ನಾಟಕದ ಸಾಮರ್ಥ್ಯದ ಬಗ್ಗೆ ಕಿಂಚಿತ್ತೂ ಅನುಮಾನ ಬೇಡ. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ, ಈ ನಗರದ ಅಭಿವೃದ್ಧಿಗೆ ನಾನು ಕಟಿಬದ್ಧನಾಗಿದ್ದೇನೆ. ನೀರು ವಿದ್ಯುತ್ ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯವನ್ನು ಜನರಿಗೆ ಹಾಗೂ ಕೈಗಾರಿಕೆಗಳಿಗೆ ಒದಗಿಸುವುದು ನಮ್ಮ ಆದ್ಯತೆ” ಎಂದರು.
ಕಡಿಮೆ ದರದಲ್ಲಿ ಆರೋಗ್ಯ ಸೇವೆ–
“ಆಗಾದ ಮಾನವ ಸಂಪನ್ಮೂಲವನ್ನು ಕರ್ನಾಟಕ ಹೊಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಬೆಂಗಳೂರು ಹಾಗೂ ಕರ್ನಾಟಕ ಮುಂಚೂಣಿಯಲ್ಲಿದೆ. ಆರೋಗ್ಯ ತಪಾಸಣೆ ವೆಚ್ಚ ಕಡಿಮೆ ದರದಲ್ಲಿ ದೊರಕುತ್ತದೆ” ಎಂದು ಹೇಳಿದರು.
ಭವಿಷ್ಯ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಣೆ–
“ಎರಡು ದಿನಗಳ ಹಿಂದೆ ಕರ್ನಾಟಕದ ಮೊಟ್ಟ ಮೊದಲ ನೈಸರ್ಗಿಕ ಅನಿಲ ವಿದ್ಯುತ್ ಉತ್ಪಾದನಾ ಸ್ಥಾವರವನ್ನು ಯಲಹಂಕದಲ್ಲಿ ಉದ್ಘಾಟನೆ ಮಾಡಲಾಯಿತು. ಈ ರೀತಿಯ ಭವಿಷ್ಯವನ್ನು ಮುಂದಿಟ್ಟುಕೊಂಡ ಅನೇಕ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ರಾಜ್ಯಕ್ಕೆ ನೀಡಿದೆ” ಎಂದರು.
“ಇನ್ನೇನು ಕೆಲವೇ ದಿನಗಳಲ್ಲಿ ಕಾವೇರಿ ಕುಡಿಯುವ ನೀರಿನ ಐದನೇ ಹಂತ ಕಾಮಗಾರಿ ಮುಗಿಯಲಿದೆ. ಈ ಹಿಂದಿನ ನಾಲ್ಕು ಹಂತಗಳಿಂದ 1,450 ಎಂಎಲ್ ಡಿ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ. ಈ ಐದನೇ ಹಂತದ ಯೋಜನೆಯಲ್ಲಿ 775 ಎಂಎಲ್‌ಡಿ ನೀರನ್ನು ಬೆಂಗಳೂರಿಗೆ ನಾವು ನೀಡುತ್ತಿದ್ದೇವೆ. ಮುಂದಿನ 10 ವರ್ಷ ಬೆಂಗಳೂರು ಹಾಗೂ ನಗರದ ಸುತ್ತಮುತ್ತ ನೀರಿನ ತೊಂದರೆ ಇರುವುದಿಲ್ಲ” ಎಂದು ತಿಳಿಸಿದರು.
ದೇಶಕ್ಕೆ ಒಂದೇ ಗಿಫ್ಟ್ ಸಿಟಿಯೆಂದ ಪಿಎಂ ಮೋದಿ–
“ನಾನು ಮತ್ತು ಸಿದ್ದರಾಮಯ್ಯ ಅವರು ದೆಹಲಿ ಭೇಟಿ ವೇಳೆ ಪ್ರಧಾನಿ ಮೋದಿ ಅವರ ಬಳಿ ಗುಜರಾತಿಗೆ ಗಿಫ್ಟ್ ಸಿಟಿ ಯೋಜನೆ ನೀಡಿದಂತೆ ನಮಗೂ ನೀಡಬೇಕೆಂದು ಮನವಿ ಮಾಡಿದೆವು. ಈ ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಇರಬೇಕು ಎಂದು ಅವರು ಮನವಿಯನ್ನು ತಿರಸ್ಕರಿಸಿದ್ದರು. ನಾವು ಈ ಯೋಜನೆಯನ್ನು ಆ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಸಾಧಿಸಿ ತೋರಿಸಬೇಕು” ಎಂದು ಹೇಳಿದರು.
ಭಾರತದ ಅಭಿವೃದ್ಧಿಗೆ ಕರ್ನಾಟಕದ ಅಡಿಪಾಯ–
“ಕರ್ನಾಟಕದ ಹೆಸರನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗೋಣ. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಉತ್ತಮ ತಂತ್ರಜ್ಞರಿದ್ದಾರೆ, ಸ್ಟಾರ್ಟ್ ಅಪ್ ಗಳಿವೆ, ಎಲ್ಲವನ್ನು ಬಳಸಿಕೊಂಡು ಭವಿಷ್ಯವನ್ನು ಗಟ್ಟಿಗೊಳಿಸೋಣ. ಭಾರತವನ್ನು ಗಟ್ಟಿಗೊಳಿಸಲು ಕರ್ನಾಟಕದಲ್ಲಿ ಅಡಿಪಾಯ ನಿರ್ಮಾಣ ಮಾಡೋಣ” ಎಂದರು.
“ಕರ್ನಾಟಕ ಅನೇಕ ಉತ್ಪನ್ನಗಳನ್ನು ರಫ್ತು ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಶೇಕಡ 40ರಷ್ಟು ರಫ್ತು ಇಲ್ಲಿಂದಲೇ ಆಗುತ್ತದೆ” ಎಂದರು.
“ಕ್ವಿನ್ ಸಿಟಿ ಯೋಜನೆಯ ಮೂಲಕ ಸರ್ಕಾರ ಮತ್ತು ಸಂಪುಟ ಸಹೋದ್ಯೋಗಿಗಳು ಉದ್ಯಮಿಗಳ ಜೊತೆ ನಿಲ್ಲುತ್ತದೆ. ಎಲ್ಲರೂ ಒಟ್ಟಿಗೆ ಸೇರಿ ಉತ್ತಮ ಯೋಜನೆಯನ್ನು ಸಾಕಾರಗೊಳಿಸೋಣ” ಎಂದು ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಕ್ವಿನ್ ಸಿಟಿ (ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ) ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್, ಸಚಿವರಾದ ದಿನೇಶ್ ಗುಂಡೂರಾವ್, ರಾಜಣ್ಣ, ಆರ್.ವಿ ದೇಶಪಾಂಡೆ ಹಾಗೂ ಮತ್ತಿತರು ಉಪಸ್ಥಿತರಿದ್ದರು.