ಬೆಂಗಳೂರು:ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರು,
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ
“ಹೈಕೋರ್ಟ ಆದೇಶದಂತೆ ಶೈಕ್ಷಣಿಕ ಧನಸಪಾಯ ಪಾವತಿಸಬೇಕು ಖರೀದಿಗಳ ಮೂಲಕ ನಡೆಸಲಾಗುವ ವ್ಯಾಪಕ ಭ್ರಷ್ಟಾಚಾರದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು” ಎಂದು ಆಗ್ರಹಿಸಿ ಆಗಸ್ಟ್ 5 ರಂದು 2024 ಬೆಂಗಳೂರಿನಲ್ಲಿ ಬೃಹತ್ ಮುಖ್ಯಮಂತ್ರಿ ಮನೆ ಚಲೋ ನಡೆಸಲು ನಿರ್ಧರಿಸಿದ್ದಾರೆ.ಇದೊಂದು ನ್ಯಾಯಯುತ ಹೋರಾಟವಾಗಿದ್ದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ರಾಜ್ಯ ಸಮಿತಿ ಅದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ
ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಂ ಹೆಬ್ಬಾರ್ ಆಹಾರ ಕಿಟ್, ಟೂಲ್ ಕಿಟ್ ಇತ್ಯಾದಿಗಳ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ಮನಸೋಇಚ್ಛೆ ಖರ್ಚು ಮಾಡಿದ್ದರು
ಇದೀಗ, ಕಾಂಗ್ರೆಸ್ ಸರ್ಕಾರದ ಕಾರ್ಮಿಕ ಸಚಿವ ಸಂತೋಷಲಾಡ್ ಖರೀದಿಗಳನ್ನು ನಿಲ್ಲಿಸಿ ಕಾರ್ಮಿಕರಿಗೆ ನೇರ ಹಣ ವರ್ಗಾವಣೆಯ ಮೂಲಕ ಸೌಲಭ್ಯ ವಿತರಿಸಲಾಗುವುದೆಂದು ಘೋಷಿಸಿ, ಮರಳಿ ಕಾರ್ಮಿಕರ ಹೆಸರಲ್ಲಿ ಮತ್ತೆ ಲ್ಯಾಪ್ ಟಾಪ್ ಖರೀದಿ, ಖಾಸಗಿ ಆಸ್ಪತ್ರೆಗಳಿಂದ ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ ಕಿಟ್ ಖರೀದಿ (ಆಯುರ್ವೇದ ಪೌಡರ್),ಕೌಶಲ್ಯ ತರಬೇತಿ ಇತ್ಯಾದಿಗಳ ಮೂಲಕ ಈಗಾಗಲೇ ನೂರಾರು ಕೋಟಿ ರೂಪಾಯಿ ಅನಗತ್ಯ ಖರ್ಚು ಮಾಡುತ್ತಿರುವುದು ಗಮನಿಸಿದಾಗ ಹಿಂದಿನ ಭ್ರಷ್ಟ ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರ ಭಿನ್ನವಾಗಿಲ್ಲ ಎನ್ನುವ ಭಯ ನಿರ್ಮಾಣ ಕಾರ್ಮಿಕರಲ್ಲಿ ಮನೆ ಮಾಡಿದೆ. ಈ ಎಲ್ಲ ಖರೀದಿಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಸತ್ಯವೇನೆಂದು ಕಾರ್ಮಿಕರು ತಿಳಿಯುವಂತೆ ಕ್ರಮವಹಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ಕಲ್ಯಾಣ ಮಂಡಳಿಯಲ್ಲಿ ರೂ 14 ಸಾವಿರ ಕೋಟಿ ಸೆಸ್ ಸಂಗ್ರಹವಾಗಿದೆ ಅದರಲ್ಲಿ ರೂ 6500. ಕೋಟಿ ಖರ್ಚಾಗಿದ್ದು ಸುಮಾರು 6700 ಕೋಟಿ ನಿಧಿ ಬಾಕಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ 2007 ರಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ. ಕಾರ್ಮಿಕರಿಗಾಗಿ 19 ಸೌಲಭ್ಯಗಳನ್ನು ಘೋಷಿಸಿದೆ.ಮಕ್ಕಳ ಶಿಕ್ಷಣ, ಮದುವೆ,ಆರೋಗ್ಯ, ಅಪಘಾತ ಸಹಜ ಮರಣ, ಹೆರಿಗೆ ಮೊದಲಾದ ಕೆಲ ಸೌಲಭ್ಯಗಳ ಹೊರತು ಪಡಿಸಿ ಇತರೆ ಸೌಲಭ್ಯಗಳನ್ನು ಜಾರಿಗೊಳಿಸದಿರುವುದು ಖಂಡನೀಯ !
ಬೋಗಸ್ ಕಾರ್ಡ ನಿಯಂತ್ರಣದ ಹೆಸರಿನಲ್ಲಿ ಶೈಕ್ಷಣಿಕ ಧನ ಸಹಾಯ, ಮದುವೆ, ವೈದ್ಯಕೀಯ, ಹೆರಿಗೆ ಮೊದಲಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಂತೆ ಮಾಡಿದೆ.
ವಿವಿಧ ಸೌಲಭ್ಯಗಳಿಗಾಗಿ ಸಲ್ಲಿಸಲಾದ ಸಾವಿರಾರು ಅರ್ಜಿಗಳಿಗೆ ಧನ ಸಹಾಯ ಪಾವತಿ ಸರಿಯಾಗಿ ಆಗುತ್ತಿಲ್ಲ. ಅಲ್ಲದೆ ಶೈಕ್ಷಣಿಕ ಧನ ಸಹಾಯವನ್ನು ಶೇ 60 ರಿಂದ 80 ದವರೆಗೆ ಶೈಕ್ಷಣಿಕ ಧನ ಸಹಾಯ ಕಡಿತ ಮಾಡಿರುವುದು ಅತ್ಯಂತ ಖಂಡನಾರ್ಹ ನಡೆಯಾಗಿದೆ.
ಕಲ್ಯಾಣ ಮಂಡಳಿಯು ಶೈಕ್ಷಣಿಕ ಧನ ಸಹಾಯ ಕಡಿತ ಮಾಡಿದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ ಹೈಕೋರ್ಟ ನಲ್ಲಿ ಅರ್ಜಿ ಹಾಕಿ ಇಬ್ಬರು ಬಡ ಕಾರ್ಮಿಕರ ಮಕ್ಕಳಿಗೆ ದಂಡ ಸಹಿತ ಧನ ಸಹಾಯ ಕೊಡಿಸಿರುವುದು ಶ್ಲಾಘನೀಯವಾಗಿದೆ. ಇದು ಸರಕಾರದ ಕಾರ್ಮಿಕ ವಿತೋದಿ ನಡೆಯನ್ನು ಎತ್ತಿ ತೋರಿದೆ.
ಹತ್ತಾರು ವರ್ಷಗಳಿಂದ ಕಾನೂನು ರಚನೆ ಮತ್ತು ಕಲ್ಯಾಣ ಮಂಡಳಿ ಜಾರಿಗಾಗಿ ಹಾಗೂ ಕಾರ್ಮಿಕರು ಸಂಘಟಿಸಿದ್ದ ಕಾರ್ಮಿಕ ಸಂಘಗಳನ್ನು, ಸಚಿವರು, ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದೂರವಿಟ್ಟಿದ್ದಾರೆ. ಕಲ್ಯಾಣ ಮಂಡಳಿ ಸಭೆ ನಡೆಸದೇ ಹಲವು ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಕಾರ್ಮಿಕರು ಸಲ್ಲಿಸಿದ ಮನವಿ, ಹೋರಾಟಕ್ಕೂ ಕಿವಿಗೊಡುತ್ತಿಲ್ಲ ಸಚಿವರ ಈ ನಡೆ ಒಪ್ಪತಕ್ಕದ್ದಲ್ಲ. ಮಂಡಳಿಯಲ್ಲಿರುವ ನಿಧಿ ಕಾರ್ಮಿಕರ ಕಲ್ಯಾಣಕ್ಕೆ ಮಾತ್ರವೇ ಬಳಕೆಯಾಗಬೇಕು ಮತ್ತು ಘೋಷಿಸಲಾದ ಸೌಲಭ್ಯಗಳು ಕಾರ್ಮಿಕರ ಖಾತೆಗೆ ನೇರ ಹಣ ವರ್ಗಾವಣೆ ಮೂಲಕ ಸಿಗಬೇಕು.
ಮಂಡಳಿಯ ಅನಗತ್ಯ ಖರೀದಿಗಳ ಟೆಂಡರ್ ಗಳನ್ನು ಕೂಢಲೇ ತಡೆದು, ಈಗಾಗಲೇ ನಡೆದಿರುವ ಎಲ್ಲ ಖರೀದಿಗಳ ವ್ಯವಹಾರಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಸಿಪಿಐ(ಎಂ) ಆಗ್ರಹಪಡಿಸುತ್ತದೆ.
ಹೋರಾಟಕ್ಕೆ ಮುಂದಾಗಿರುವ ಕಾರ್ಮಿಕ ಸಂಘಗಳ ಜತೆ ಮಾತುಕತೆ ನಡೆಸಿ ಅವರ ಬೇಡಿಕೆಗಳಿಗನ್ನು ಇತ್ಯರ್ಥ್ಯಪಡಿಸಲು ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರು ಅಗತ್ಯ ಕ್ರಮವಹಿಸಬೇಕೆಂದು ಸಿಪಿಐ(ಎಂ) ಆಗ್ರಹಪಡಿಸುತ್ತದೆ.
ಎಂದು ಯು.ಬಸವರಾಜ
ಕಾರ್ಯದರ್ಶಿಯವರು ತಿಳಿಸಿದ್ದಾರೆ.