ಬೆಂಗಳೂರು ನಗರ ಜಿಲ್ಲೆ, ಜುಲೈ 22 : ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು 2024-25 ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ನೂತನ ಕೋರ್ಸ್ ಗಳನ್ನು ಅಳವಡಿಸಿಕೊಂಡು ಪ್ರವೇಶಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಬೆಂಗಳೂರು ಪ್ರಾದೇಶಿಕ ಕೇಂದ್ರದ ಹೆಚ್ಚುವರಿ ಪ್ರಾದೇಶಿಕ ನಿರ್ದೇಶಕಿ ಡಾ.ಎಸ್.ರಾಧಾ ಅವರು ತಿಳಿಸಿದರು.
ಅವರು ಇಂದು ಆನೇಕಲ್ ತಾಲೂಕಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆಡಳಿತ ವಿಭಾಗದ ಕಟ್ಟಡದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ವಿವಿಧ ಸ್ನಾತಕೋತ್ತರ, ಪದವಿ, ಪಿಜಿ ಡಿಪ್ಲೋಮಾ, ಡಿಪ್ಲೋಮಾ ಮತ್ತು ಪ್ರಮಾಣ ಪತ್ರ ಮಟ್ಟದ ಕೋರ್ಸುಗಳ 2024-25 ನೇ ಸಾಲಿನ ಪ್ರವೇಶಾತಿಯು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಪ್ರವೇಶಾತಿಗಳನ್ನು ಪಡೆಯಬಹುದು ಎಂದು ಅವರು ತಿಳಿಸಿದರು.
ಈ ಶೈಕ್ಷಣಿಕ ಸಾಲಿನಲ್ಲಿ ಇಗ್ನೋ ಹೊಸ ಕಾರ್ಯಕ್ರಮಗಳಾದ ಕನ್ ಸ್ಟ್ರಕ್ಷನ್ ಮ್ಯಾನೇಜ್ ಮಂಟ್, ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ ಮಂಟ್, ಅಗ್ರಿ ಬಿಸಿನೆಸ್, ಕಾರ್ಪೋರೇಟ್ ಆಡಳಿತ., ಹೆಲ್ತ್ ಕೇರ್ ಮತ್ತು ಆಸ್ಪತ್ರೆ ನಿರ್ವಹಣೆ ಕೇತ್ರಗಳಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಕೋರ್ಸುಗಳು ಪ್ರಾರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ದೈಹಿಕವಾಗಿ ಅಶಕ್ತ ವ್ಯಕ್ತಿಗಳಿಗೆ ಸೀಟುಗಳ ಮೀಸಲಾತಿಯನ್ನು ಒದಗಿಸಲಾಗುತ್ತಿದೆ. ಇತರೆ ಹಿಂದುಳಿದ ವರ್ಗ ಮತ್ತು ದೈಹಿಕವಾಗಿ
ವಿಶೇಷ ಚೇತನ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಮತ್ತು ಶುಲ್ಕಮರು ಪಾವತಿ ಸೌಲಭ್ಯ ಪಡೆಯಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಕೆಲವು ಡಿಪ್ಲೋಮಾ, ಪಿಜಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಪ್ರೋಗ್ರಾಂಗಳಿಗೆ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಜೈಲು ಕೈದಿಗಳಿಗೆ ಎಲ್ಲಾ ಕಾರ್ಯಕ್ರಮಗಳಿಗೆ (ಪ್ರಾಯೋಗಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಮತ್ತು ಅರ್ಹ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ವಿದ್ಯಾಲಕ್ಷ್ಮಿ ಪೋರ್ಟಲ್ ಮೂಲಕ ಶಿಕ್ಷಣ ಸಾಲ ಸೌಲಭ್ಯವನ್ನು ಸಹ ಪಡೆಯಬಹುದು ಎಂದು ತಿಳಿಸಿದರು.
ಮಾಸ್ಟರ್ ಆಫ್ ಎಜುಕೇಶನ್ (ವಿಶೇಷ ಶಿಕ್ಷಣ), ಬ್ಯಾಚುಲರ್ ಆಫ್ ಎಜುಕೇಶನ್ (ವಿಶೇಷ ಶಿಕ್ಷಣ), ವಿಪತ್ತು ತಡೆ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಕಾರ್ಯಕ್ರಮ, ಕೃಷಿ ವೆಚ್ಚ ನಿರ್ವಹಣೆಯಲ್ಲಿ ಡಿಪ್ಲೋಮಾ ಕಾರ್ಯಕ್ರಮಗಳು, ತೋಟಗಾರಿಕೆ ಸರ್ಟಿಫಿಕೇಟ್ ಕಾರ್ಯಕ್ರಮಗಳು ಬಾಲ್ಯದ ವಿಶೇಷ ಶಿಕ್ಷಣವನ್ನು ಸಕ್ರಿಯಗೊಳಿಸುವ ಸೇರ್ಪಡೆ –ಶ್ರವಣ ದೋಷ, ಸೇರ್ಪಡೆ ಸಕ್ರಿಯಗೊಳಿಸುವಿಕೆ – ದೃಷ್ಠಿ ದೋಷ ಮತ್ತು ಸೇರ್ಪಡೆ ಸಕ್ರಿಯಗೊಳಿಸುವಿಕೆ –ಬೌದ್ಧಿಕ ಅಸಾಮರ್ಥ್ಯ ಪ್ರವೇಶ ಪರೀಕ್ಷೆಯಿಲ್ಲದೆ ಎಂ.ಬಿ.ಎ ಗೆ ಇಗ್ನೋ ನೇರ ಪ್ರವೇಶವನ್ನು ಒದಗಿಸುತ್ತಿದೆ ಎಂದು ತಿಳಿಸಿದ ಆವರು ಜುಲೈ 2024ರ ನಡೆಯುವ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ https://ignouadmission.samarth.edu.in/ ಗೆ ಭೇಟಿ ನೀಡಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕೋರ್ಸ್ ಗಳ ಮಾಹಿತಿಯನ್ನು ಒಳಗೊಂಡ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿದಂತೆ ಇತರೆ ಇಗ್ನೋ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದರು