ಬೆಂಗಳೂರು ನಗರ ಜಿಲ್ಲೆ, ಜುಲೈ 16,: ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಗಸ್ಟ್ 15 ರಂದು ನಡೆಯುವ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ವಾತಂತ್ರ್ಯ ಹೋರಾಟದ ವೇಳೆಯ ಸನ್ನಿವೇಶಗಳ ನೃತ್ಯರೂಪಕಗಳನ್ನು ಸೇರ್ಪಡೆಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ. ದಯಾನಂದ ಅವರು ಸಲಹೆ ನೀಡಿದರು.
ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2024 ನೇ ಸಾಲಿನ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಿದ್ಧತೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ವೇಳೆಯಲ್ಲಿ ಹಲವಾರು ಘಟನೆಗಳು ಸಂಭವಿಸಿವೆ ಅವುಗಳಲ್ಲಿ ಯಾವುದಾದರು ಒಂದು ಸನ್ನಿವೇಶಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಕೋರಿಯೋಗ್ರಫಿ ನೀಡಿ ಆಕರ್ಷಕ ನೃತ್ಯರೂಪಕ ಪ್ರಸುತ್ತ ಪಡಿಸಿ ಎಂದ ಅವರು ಇದರ ಮೂಲಕ ದೇಶಪ್ರೇಮ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟದ ಘಟನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದಂತಾಗುತ್ತದೆ ಎಂದು ತಿಳಿಸಿದರು.
ನಾಡಗೀತೆ, ರೈತ ಗೀತೆ ಹಾಡುವ ಕಲಾವಿದರ ಆಡಿಷನ್ ಮಾಡಿ ಉತ್ತಮ ತಂಡಗಳನ್ನು ಆಯ್ಕೆ ಮಾಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.
ಮೈದಾನದ ಸ್ವಚ್ಛತೆ, ಕುಡಿಯುವ ನೀರು, ಆಸನಗಳು, ವಿದ್ಯುತ್ ಸರಬರಾಜು, ಶೌಚಾಲಯ, ವೇದಿಕೆ ಅಲಂಕಾರ, ಧ್ವನಿ ವರ್ಧಕಗಳು, ಪ್ರಥಮ ಚಿಕಿತ್ಸೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಜತೆಗೆ ಅಗತ್ಯ ಔಷಧಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸುವ ಕಾರ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಯಾವುದೇ ಲೋಪ ಬಾರದಂತೆ ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಸೂಚಿಸಿದರು.
ಕಟ್ಟುನಿಟ್ಟಿನ ಬಿಗಿ ಭದ್ರತೆಗೆ ಸೂಚನೆ: ಕಾರ್ಯಕ್ರಮಕ್ಕೆ ಪ್ರವೇಶ, ವಾಹನ ನಿಲುಗಡೆ, ಅಗ್ನಿ ಶಾಮಕ ವ್ಯವಸ್ಥೆ ಹಾಗೂ ಮೈದಾನದ ಸುತ್ತ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಪ್ರಥಮಾದ್ಯತೆ ನೀಡಲು ಸೂಚಿಸಿದ ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳಿಗೆ ಕೇವಲ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರವೇಶ ಪತ್ರವನ್ನು ವಿತರಿಸಬೇಕು ಮತ್ತು ಮಾಧ್ಯಮ ಗ್ಯಾಲರಿಯಲ್ಲಿ ಮಾಧ್ಯಮ ಪ್ರವೇಶ ಪತ್ರ ಪಡೆದ ಮಾಧ್ಯಮ ಪ್ರತಿನಿಧಿಗಳು ಮಾತ್ರ ಆಸೀನರಾಗುವಂತೆ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿ ಸಹಕರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶೇಖರ್ ಹೆಚ್ ತೆಕ್ಕಣ್ಣವರ್, ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಟಿ.ಎನ್ ಕೃಷ್ಣಮೂರ್ತಿ, ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಧಿಕಾರಿಯಾದ ರಜನಿಕಾಂತ್, ಬಿಬಿಎಂಪಿ ಪೂರ್ವ ವಿಭಾಗದ ಜಂಟಿ ಆಯುಕ್ತರಾದ ಸರೋಜ ಬಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಂಗಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಹಾಗೂ ಬೆಂಗಳೂರು ಉತ್ತರ ತಹಶೀಲ್ದಾರರಾದ ವಿಜಯ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.