ಅದು 2004 ನೇ ಇಸವಿ,, ನಾನಾಗ ಬೆಂಗಳೂರಿನ ಜೆ ಸಿ ರೋಡಿನ ಯುನಿಟಿ ಬಿಲ್ಡಿಂಗ್‌ನಲ್ಲಿರುವ ಚೆಮ್ಮನೂರು ಜುವೆಲ್ಲರ್ಸ್ನಲ್ಲಿ ಚಿನ್ನಾಭರಣಗಳ ಆರ್ಡರ್ ಮ್ಯಾನೇಜರ್ ಆಗಿದ್ದೆ. ಅದೊಂದು ದಿನ ಮಧ್ಯಾಹ್ನ ಊಟಕ್ಕೆ ಕುಳಿತಾಗ ನನ್ನ ಸಹೋದ್ಯೋಗಿ ಮಿತ್ರ Sebin Thomas ಸೆಬಿನ್ ಥೋಮಸ್ ” ಭಾಯ್, ಕೆಳಗೆ ಶೋರೂಮಿನಲ್ಲಿ ಯಾರೋ ಇಬ್ಬರು ನಿಮ್ಮನ್ನು ಕಾಯುತ್ತಿದ್ದಾರೆ” ಎಂದರು. “ಯಾರೋ ಚಿನ್ನಾಭರಣಗಳನ್ನು ಆರ್ಡರ್ ಮಾಡಲು ಬಂದಿದ್ದಾರೆ, ಸ್ವಲ್ಪ ಕುಳಿತುಕೊಳ್ಳಲಿ, ಊಟ ಮಾಡಿ ಬರುತ್ತೇನೆ ” ಎಂದು ಸೆಬಿನ್ ಗೆ ಕಳುಹಿಸಿದೆ. ಅದಾಗಲೇ ಊಟದ ಸಮಯ ಮೀರಿತ್ತು..
ಊಟದ ನಂತರ ಕೆಳಗೆ ಹೋಗಿ ನೋಡಿದರೆ, ನನ್ನನ್ನು ಕಾಯುತ್ತಿದ್ದವರು ಕನ್ನಡದ ಖ್ಯಾತ ನಿರೂಪಕಿ ಅಪರ್ಣಾರವರು ಮತ್ತು ಖ್ಯಾತ ಗಾಯಕಿ ಬಿ ಆರ್ ಛಾಯಾರವರು. ಅಪರ್ಣಾರವರನ್ನು ನಿತ್ಯ ಟಿವಿಯಲ್ಲಿ ನೋಡುತ್ತಿದ್ದೆನಾದ್ದರಿಂದ ಬೇಗ ಗುರುತು ಹಿಡಿದೆ. ಆದರೆ ಛಾಯಾರವರನ್ನು ನಾನು ಅದಕ್ಕಿಂತ ಮುಂಚೆ ಹೆಸರು ಕೇಳಿದ್ದೆ ಬಿಟ್ಟರೆ ನೋಡಿರಲಿಲ್ಲ. ಕೊನೆಗೆ ಅಪರ್ಣಾರವರೇ ಪರಿಚಯ ಮಾಡಿದ ನಂತರ ಗೊತ್ತಾಯ್ತು. ಅಪರ್ಣಾರವರನ್ನು ನೋಡಿ ನನಗೆ ಬಹಳ ಸಂತೋಷವಾಗಿತ್ತು. ಅವರ ಸರಳತೆ ಮತ್ತು ಮಗುವಿನಂತಹ ಮುಗ್ದತೆ ಕಂಡು ಆಶ್ಚರ್ಯವೂ ಆಯಿತು. ಆ ಕಾಲಕ್ಕೆ ರಾಜ್ಯದ ಅತ್ಯಂತ ಪ್ರಸಿದ್ಧಿ ಪಡೆದ ನಿರೂಪಕಿಯಾದರೂ ಯಾವುದೇ ಹಮ್ಮುಬಿಮ್ಮು- ಬಿಗುಮಾನಗಳ ಲವಲೇಶವೂ ಇವರ ಮಾತುಗಳಲ್ಲಿ ಕಾಣಲಾಗುತ್ತಿರಲಿಲ್ಲ..
ಯಾವುದೇ ಮೇಕಪ್ ಇಲ್ಲದೆ, ಸಾಧಾರಣ ಉಡುಪಿನಲ್ಲಿ ಸಾದಾಸೀದವಾಗಿ ಆಗಾಗ ಶೋರೂಮಿಗೆ ಬಂದು ಕೆಲವು ಸಣ್ಣಪುಟ್ಟ ಆಭರಣಗಳನ್ನು ಖರೀದಿಸುವುದು ಮತ್ತು ಹಳೆಯದನ್ನು ರಿಪೇರಿ ಮಾಡಿಸಿಕೊಳ್ಳುವುದು ನಾನು ಬೆಂಗಳೂರಿನಲ್ಲಿ ಇರುವವರೆಗೆ ನಡೆದೇ ಇತ್ತು,,ಕೆಲವೊಮ್ಮೆ ನಾನು ಊರಿಗೆ ಬಂದಾಗ ಅಥವ ಸಂಸ್ಥೆಯ ಬೇರೆ ಶಾಖೆಗಳಿಗೆ ಹೋದಾಗ, ಯಾವುದಾದರೂ ಕೆಲಸಕ್ಕೆ ಶೋರೂಮಿಗೆ ಬಂದರೆ ನನ್ನ ಸಹೋದ್ಯೋಗಿಗಳಲ್ಲಿ” ಮುಷ್ತಾಕ್ ಎಲ್ಲಿ, ಯಾವಾಗ ಬರ್ತಾರೆ?”ಎಂದೆಲ್ಲ ನನ್ನ ಬಗ್ಗೆ ವಿಚಾರಿಸುತ್ತಿದ್ದರು..
ಇವರ ನಿರೂಪಣೆಯ ಜೊತೆಗೆ ಇವರ ಸರಳ- ಸಜ್ಜನಿಕೆ, ನಯ- ವಿನಯವನ್ನು ಹತ್ತಿರದಿಂದ ಕಂಡಿದ್ದ ಕಾರಣಕ್ಕೋ ಏನೋ, ನನಗೆ ಇವರ ನಿರೂಪಣೆ ಮತ್ತು ಭಾಷೆಯ ಮುಂದೆ ಬೇರೆ ಯಾರ ನಿರೂಪಣೆಯೂ ಇಷ್ಟವಾಗುತ್ತಿರಲಿಲ್ಲ. ಕೆಲವೊಂದು ಸರಕಾರಿ ಕಾರ್ಯಕ್ರಮಗಳನ್ನು ಕೇವಲ ಇವರ ನಿರೂಪಣೆಗಾಗಿ ಮಾತ್ರವೇ ನೋಡುತ್ತಿದ್ದೆ. ಈಗಿನ ಬಹಳಷ್ಟು ನಿರೂಪಕಿಯರಲ್ಲಿರುವ ನಾಟಕೀಯತೆ, ಕೃತಕತೆಯನ್ನು ಇವರಲ್ಲಿ ಕಾಣಲು ಸಾಧ್ಯವಿಲ್ಲ. ಬಾಲ್ಯದಲ್ಲಿಯೇ ಟಿವಿಯಲ್ಲಿ ಇವರನ್ನು ನೋಡುತ್ತಿದ್ದರಿಂದ 80-90ರ ದಶಕದಲ್ಲಿ ಹುಟ್ಟಿದ ಕನ್ನಡಿಗರೆಲ್ಲರ ಬಾಲ್ಯದ ನೆನಪುಗಳಲ್ಲಿ ಅಪರ್ಣಾ ಮೇಡಂ ಸದಾ ಅಮರರಾಗಿರುತ್ತಾರೆ,,
ದೂರದರ್ಶನ ಮಾತ್ರವೇ ಕಣ್ಣಿಗೆ ಗತಿಯಾಗಿದ್ದ ಕಾಲದಲ್ಲಿ ಪ್ರತೀ ವಾರದ ಮುನ್ನೋಟ ಕಾರ್ಯಕ್ರಮದಲ್ಲಿ ಭಾನುವಾರದ ಚಲನಚಿತ್ರದ ಹೆಸರು ಹೇಳದೇ ನಮ್ಮನ್ನೆಲ್ಲ ವಾರವಿಡೀ ಚಡಪಡಿಸುವಂತೆ ಮಾಡಿ ತುಸು ಕಾಡಿದ್ದೂ ಉಂಟು. ಕನ್ನಡಿಗರೆಲ್ಲರಿಗೆ ದಶಕಗಳ ಹಿಂದಿನ ಟಿವಿ ನೆನಪಾದರೆ ಇವರು ನೆನಪಾಗಿಯೇ ಆಗುತ್ತಾರೆ. ಚಿನ್ನಾಭರಣಗಳ ವಿಚಾರದಲ್ಲಿ ನನ್ನನ್ನು ಎಕ್ಸ್ಪರ್ಟ್ ಎಂಬಂತೆ ಪರಿಗಣಿಸಿ ಪ್ರತಿಯೊಂದು ಮಾತನ್ನು ಕಿವಿಗೊಟ್ಟು ಆಲಿಸಿ ತಲೆಯಲ್ಲಾಡಿಸುತ್ತಿದ್ದ, ಶೋರೂಮಿನಲ್ಲಿ ಪ್ರತಿಯೊಂದನ್ನು ಕೋರಿಕೆಯ ಧ್ವನಿಯಲ್ಲಿ ಕೇಳುತ್ತಿದ್ದ ಇವರ ಮುಗ್ಧ ಮನಸ್ಸು ಮತ್ತು ಧ್ವನಿ ನನ್ನನ್ನು ಸದಾ ಕಾಡುತ್ತದೆ..
ಎಂದಿಗೂ ಮರೆಯದ ಕನ್ನಡದ ಸೊಗಸಾದ ಧ್ವನಿಯೊಂದು ಇಷ್ಟು ಬೇಗ ಸ್ತಬ್ಧವಾಗುತ್ತದೆಂದು ನಾನು ಎಣಿಸಿರಲಿಲ್ಲ. ಭಾಷೆಯನ್ನು ಬಾಯಿಯಿಂದ ಕಾವ್ಯವಾಗಿ ಹೊರಹೊಮ್ಮಿಸಿದ ಹಿರಿಮೆಯ ನಾಡಿನ ಹೆಮ್ಮೆಯ ಪ್ರತಿಭೆ ಅಪರರ್ಣಾರವರು. ಭಾವ ಮತ್ತು ಭಾಷೆಯ ಸೊಗಸುಗಾತಿಯೊಬ್ಬಳು ಸದ್ದಿಲ್ಲದೆ ನಡೆದ ಸುದ್ಧಿ ಕೇಳಿ ದು:ಖವಾಯಿತು..