ಬೆಂಗಳೂರು:ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಕೊಡುವ ನೆಪದಲ್ಲಿ ರಾಜ್ಯದ ಬಡವರ ಮೇಲೆ ತೆರಿಗೆ ಹಾಕಿ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವ ಮೂಲಕ ರಾಜ್ಯದ ಸಾಮಾನ್ಯ ಜನತೆಗೆ ದ್ರೋಹ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಮೂಲಕ ಸರಣಿ ಟ್ವೀಟ್ ಮಾಡಿರುವ ಅವರು, ಗ್ಯಾರೆಂಟಿ ಗಳ ಹೆಸರಿನಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ರಾಜ್ಯದ ಪ್ರಗತಿ ಶೂನ್ಯವಾಗಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು ಇದನ್ನು ಸರಿಪಡಿಸಲು ಹಲವಾರು ವರ್ಷ ಬೇಕು. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಹೇಳಿದ್ದಾರೆ.
ಸಾಮಾನ್ಯರ ಮೇಲೆ ಹೊರೆ ಹಾಕಿ ಬೇರೆ ರಾಜ್ಯಗಳಿಗೆ ವ್ಯಾಪಾರ ತೊಂದರೆಯಾಗುತ್ತದೆ ಎಂದು ಹೇಳಿ ಪಕ್ಕದ ರಾಜ್ಯಗಳ ಮಿತ್ರ ಪಕ್ಷಗಳ ಹಿತ ಕಾಯುವ ಮೂಲಕ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿರುವುದು ರಾಜದ್ರೋಹ ಮಾಡಿದಂತೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪೆಟ್ರೊಲ್, ಡಿಸೇಲ್ ದರ ಕಡಿಮೆ ಇದೆ ಎಂದು ಬಡವರ ಮೇಲೆ ಭಾರ ಹಾಕುವುದು ಯಾವ ನ್ಯಾಯ ? ದರ ಏರಿಕೆ ಮಾಡಿ ಸಮರ್ಥನೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿಯವರ ಹೇಳಿಕೆ ಜನ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.
ಉಚಿತ ಗ್ಯಾರೆಂಟಿ ಕೊಡುತ್ತಿರುವುದಾಗಿ ಹೇಳಿ ಬಡವರ ಮೇಲೆ ತೆರಿಗೆ ಹಾಕಿ ಅವರಿಂದಲೇ ಹಣ ಸುಲಿದು ಕಾಂಗ್ರೆಸ್ ತನ್ನ ರೊಟ್ಟಿ ಸುಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.