ಇಂದು ನನ್ನ ಮನಸ್ಸಿಗೆ ಅತ್ಯಂತ ಭಾರವಾದ ದಿನ. ಸತತ ನಾಲ್ಕು ಬಾರಿ ನನ್ನನ್ನು ಶಾಸಕನಾಗಿ, ಸಚಿವನಾಗಿ, ಈ ನಾಡಿನ ಮುಖ್ಯಮಂತ್ರಿಯಾಗಲು ಕಾರಣಿಭೂತರಾದ ಶಿಗ್ಗಾಂವಿ-ಸವಣೂರಿನ ಸಮಸ್ತ ಜನತೆಯನ್ನು ನನ್ನ ಹೃದಯಮಂದಿರದಲ್ಲಿ ಸ್ಮರಿಸುತ್ತಾ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ.
1990ರ ದಶಕದಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೂ ವಿಧಾನಸೌಧದ ಮೇಲ್ಮನೆ ಹಾಗೂ ಕೆಳಮನೆಯ ಸದಸ್ಯನಾಗಿ ಅತ್ಯಂತ ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂಬ ತೃಪ್ತಿ ನನಗಿದೆ.
ಹಾವೇರಿ-ಗದಗದ ಸಂಸದನಾಗಿ ಸಂಸತ್ ನಲ್ಲಿ ಪ್ರಾಮಾಣಿಕವಾಗಿ ಕನ್ನಡ ಹಾಗೂ ಕರ್ನಾಟಕದ ಪರ ಧ್ವನಿ ಎತ್ತುವ ಸಂಪೂರ್ಣ ಜವಾಬ್ದಾರಿ ನನ್ನದು. ನೀರಾವರಿ ನನ್ನ ಬಹು ಇಷ್ಟದ ವಲಯವಾಗಿದ್ದು ಕರ್ನಾಟಕದ ನೀರಾವರಿ ಯೋಜನೆಗಳಾದ ಕೃಷ್ಣಾ, ಕಾವೇರಿ ಅಂತರಾಜ್ಯ ಜಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ.
ನಾನು ದೆಹಲಿಗೆ ಹೋದರೂ ಕರ್ನಾಟಕದ ರಾಜಕಾರಣದಲ್ಲಿ ಸಕ್ರೀಯವಾಗಿರುತ್ತೇನೆ,ಈ ಹಿಂದೆ ನಾವು ಎಐಬಿಪಿಯಲ್ಲಿ ಸುಮಾರು ಆರು ತಿಂಗಳು ದೆಹಲಿಯಲ್ಲಿ ನಮ್ಮ ಅಧಿಕಾರಿಗಳನ್ನು ಇಟ್ಟು ಸುಮಾರು 3800 ಕೊಟಿ ರೂ. ತಂದಿದ್ದೆವು, ಕೇಂದ್ರದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಮೀಸಲಿಟ್ಟಿರುವ 5000 ಕೋಟಿ ರೂ ತರಲು ರಾಜ್ಯದ ಸಚಿವರು ಹಾಗೂ ಕೇಂದ್ರ ಸರ್ಕಾರದ ಸಚಿವರ ಜೊತೆ ಮಾತನಾಡಿ ಹಣ ತರಲು ಪ್ರಯತ್ನಿಸುತ್ತೇನೆ.
ಒಬ್ಬ ಸಂಸದನಾಗಿ ಹಾವೇರಿ-ಗದಗ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸದಾ ನಾನು ಕಾರ್ಯೊನ್ಮುಖಿಯಾಗಿರುತ್ತೇನೆ ಹಾಗೂ ಶಿಗ್ಗಾಂವಿ-ಸವಣೂರಿನ ಅಭಿವೃದ್ಧಿಗೆ ನನ್ನ ಶ್ರಮ ಎಂದಿನಂತೆ ಮುಂದುವರೆಯಲಿದೆ.