ಬಿ ಎಸ್ ಯಡಿಯೂರಪ್ಪ ವಿರುದ್ದ ಸುಮಾರು ಮೂರು ತಿಂಗಳ ಹಿಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಪೋಕ್ಸೋ ಕೇಸ್ ದಾಖಲಾಗಿತ್ತು. ಅಮಾಯಕ ಮಹಿಳೆ ತನ್ನ ಅಪ್ರಾಪ್ತ ಹೆಣ್ಣು ಮಗುವಿನ ಜೊತೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದರು. ವಿಷಯ ಗೆಳೆಯ, ದ ಹಿಂದೂ ಪತ್ರಕರ್ತ ಶ್ರೇಯಸ್ ಗೆ ತಿಳಿಯಿತು. ಹೆಣ್ಮುಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೂ ಕೇಸ್ ದಾಖಲಾಗಲ್ಲ ಎಂದು ಆತಂಕಿತರಾದ ಪತ್ರಕರ್ತ ಶ್ರೇಯಸ್ ಅವರು ಸುದ್ದಿ ಮಾಡುವ ಇರಾದೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಉನ್ನತ ಅಧಿಕಾರಿಗಳು/ಅಧಿಕಾರಸ್ಥರನ್ನು ಸಂಪರ್ಕಿಸುತ್ತಾರೆ. ಸರ್ಕಾರ ಕಾಂಗ್ರೆಸ್ ದೇ ಆಗಿದ್ದರೂ ಬಿಜೆಪಿ ನಾಯಕ ಯಡಿಯೂರಪ್ಪ ವಿರುದ್ದ ಎಫ್ಐಆರ್ ಆಗುವುದಿಲ್ಲ. ಕೊನೆಗೆ ಹೇಗಾದರೂ ಮಾಡಿ ಹೆಣ್ಮಗುವಿಗೆ ನ್ಯಾಯ ಒದಗಿಸಬೇಕು ಎಂದು ಶ್ರೇಯಸ್ ಅವರು ಈ ಪ್ರಕರಣದ ಬೆನ್ನು ಬೀಳುತ್ತಾರೆ. ಶ್ರೇಯಸ್ ಹೇಳಿಕೇಳಿ ದ ಹಿಂದೂ ಪತ್ರಕರ್ತ. ಹಾಗಾಗಿ ಕೊನೆಗೂ ಬಿ ಎಸ್ ಯಡಿಯೂರಪ್ಪ ವಿರುದ್ದ ಎಫ್ಐಆರ್ ದಾಖಲಾಗುತ್ತದೆ. ದ ಹಿಂದೂ ಈ ಪ್ರಕರಣವನ್ನು ಬಯಲಿಗೆಳೆಯುವ ಸುದ್ದಿ ಮೊದಲ ಬಾರಿ ಪ್ರಕಟಿಸುತ್ತದೆ.
ಎಫ್ಐಆರ್ ಆಗಿ ಮೂರು ತಿಂಗಳಾಗುತ್ತಾ ಬಂತು. ಕಾಂಗ್ರೆಸ್ ಸರ್ಕಾರದ ಪೊಲೀಸರು ತನಿಖೆಯನ್ನೂ ಮಾಡಲ್ಲ, ಬಂಧನವನ್ನೂ ಮಾಡಲ್ಲ. ಸಾಲದ್ದಕ್ಕೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು “ದೂರುದಾರೆ ಸಂತ್ರಸ್ತ ಹೆಣ್ಮಗುವಿನ ತಾಯಿಗೆ ಮಾನಸಿಕ ಅಸ್ವಸ್ಥೆ” ಎಂದು ತನಿಖೆಯೇ ನಡೆಸದೇ ತೀರ್ಪು ಕೊಡುತ್ತಾರೆ. ಬಿ ಎಸ್ ಯಡಿಯೂರಪ್ಪ ಬಿಜೆಪಿ ನಾಯಕರಾದರೂ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರ ಜೊತೆ ಹೊಂದಿರುವ ಆತ್ಮೀಯ ಸಂಬಂಧವೇ ಇದಕ್ಕೆ ಕಾರಣ ಎನ್ನುವುದಕ್ಕೆ ದಾಖಲೆ ಏನೂ ಕೊಡಬೇಕಿಲ್ಲ.
ಈ ಮಧ್ಯೆ ಸಂತ್ರಸ್ತೆಯ ಪರವಾಗಿದ್ದ ಹಲವಾರು ವಕೀಲರು ಹಿಂದೆ ಸರಿದಿದ್ದರು. ಸಂತ್ರಸ್ತ ಮಹಿಳೆಯ ಕುಟುಂಬದ ಜೊತೆಗೆ ಇದ್ದಿದ್ದು ಪತ್ರಕರ್ತ ಶ್ರೇಯಸ್ ಮಾತ್ರ ! ಸಂತ್ರಸ್ತ ಮಹಿಳೆ ಸಿಪಿಐಎಂನ ಜನವಾದಿ ಮಹಿಳಾ ಸಂಘಟನೆಯನ್ನು ಸಂಪರ್ಕಿಸುತ್ತಾರೆ. ಜನವಾದಿ ಮಹಿಳಾ ಸಂಘಟನೆಯ ಕಾಂ. ಗೌರಮ್ಮ ಅವರು ಮಹಿಳೆಯ ಸಂಪೂರ್ಣ ವಿಷಯ ತಿಳಿದುಕೊಳ್ಳುತ್ತಾರೆ. ಸಂತ್ರಸ್ತ ಮಹಿಳೆಗೆ ಕಾನೂನಿನ ನೆರವು ಬೇಕಾಗಿದೆ ಎಂದು ತಿಳಿದು “ಪತ್ರಕರ್ತ ನವೀನ್ ಸೂರಿಂಜೆಯನ್ನು ಸಂಪರ್ಕಿಸಿ” ಎಂದು ನನ್ನ ಫೋನ್ ನಂಬರ್ ನೀಡಿದ್ದರು. ಜೊತೆಗೆ ಕಾಂ. ಗೌರಮ್ಮ ಅವರು ನನ್ನ ಬಳಿ ವಿಸ್ತೃತವಾಗಿ ಚರ್ಚೆ ನಡೆಸಿದ್ದರು.
ಇದಾದ ಬಳಿಕ ಸಂತ್ರಸ್ತ ಮಹಿಳೆ ನನ್ನನ್ನು ಸಂಪರ್ಕಿಸಿ ದೂರವಾಣಿ ಮೂಲಕ ಸುಧೀರ್ಘವಾಗಿ ಮಾತನಾಡಿದ್ದರು. ನಾನು ಹಿರಿಯ ವಕೀಲ ಕಾಂ. ಎಸ್ ಬಾಲನ್ ಅವರನ್ನು ಸಂಪರ್ಕಿಸಿ ಈ ಸಂತ್ರಸ್ತ ಮಹಿಳೆಗೆ ಉಚಿತ ಕಾನೂನಿನ ನೆರವು ನೀಡುವಂತೆ ಕೇಳಿದ್ದೆ. ಇದಕ್ಕೆ ಒಪ್ಪಿದ್ದ ಎಸ್ ಬಾಲನ್ “ಬಿ ಎಸ್ ಯಡಿಯೂರಪ್ಪನಂತಹ ಹೆಣ್ಣು ಬಾಕ ಕ್ರೂರಿಗಳಿಗೆ ಶಿಕ್ಷೆಯಾಗಲೇಬೇಕು” ಎಂದು ನನ್ನನ್ನೂ, ಆ ಮಹಿಳೆಯನ್ನು ದಾಖಲೆಗಳ ಸಮೇತ ಆಫೀಸ್ ಗೆ ಬರಲು ಹೇಳಿದರು.
“ನಾನು ಎಸ್ ಬಾಲನ್ ಅವರ ಜೊತೆ ಮಾತಾಡಿದ್ದೇನೆ. ನಾವಿಬ್ಬರೂ ಸೋಮವಾರ ಎಸ್ ಬಾಲನ್ ಅವರನ್ನು ಭೇಟಿಯಾಗಬೇಕು. ಅವರು ಫೀಸೂ ತಗೊಳ್ಳಲ್ಲ. ನಿಮ್ಮ ಪ್ರಕರಣದಲ್ಲಿ ನೀವು ಪ್ರಾಮಾಣಿಕರಾಗಿದ್ದರೆ ನಾವು ನಿಮ್ಮ ಜೊತೆ ಇರ್ತೀವಿ. ಜನವಾದಿಯ ಕಾಂ ಗೌರಮ್ಮ ಅಂತವರು ನಿಮ್ ಜೊತೆ ಇದ್ದಾರೆ ಅಂದರೆ ಯಾರೂ ನಿಮ್ಮ ವಿಷಯಕ್ಕೆ ಬರಲ್ಲ. ಹೆದರ್ಕೋಬೇಡಿ” ಎಂದಿದ್ದೆ.
ಎಸ್ ಬಾಲನ್ ಅವರ ಜೊತೆ ಮಾತನಾಡುವಾಗ “ಕಾಮ್ರೇಡ್, ನೀವು ಆ ಮಹಿಳೆಯನ್ನು ಕರೆದುಕೊಂಡು ಬನ್ನಿ, ಕೇಸ್ ಮಹಿಳೆ ಹೇಳಿದಂತೆಯೇ ಸರಿಯಾಗಿದ್ದರೆ ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗ್ತಾರೆ” ಎಂದು ಎಸ್ ಬಾಲನ್ ನನ್ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೆಲ್ಲಾ ಆಗಿದ್ದು 2024 ಮೇ 24 ರಂದು !
ಮೇ 27 ರಂದು ನಾನು ಸಂತ್ರಸ್ತ ಮಹಿಳೆಯ ಜೊತೆ ಹಿರಿಯ ವಕೀಲ ಎಸ್ ಬಾಲನ್ ಅವರನ್ನು ಭೇಟಿಯಾಗಿ, ಯಡಿಯೂರಪ್ಪ ಪೋಕ್ಸೋ ಕೇಸ್ ಬಗೆಗೆ ಚರ್ಚೆ ನಡೆಸಿ ಕಾನೂನು ಹೋರಾಟದ ಇನ್ನೊಂದು ಹೆಜ್ಜೆ ಇಡಬೇಕಿತ್ತು.
ವಿಪರ್ಯಾಸ, ಆಶ್ಚರ್ಯವೆಂದರೆ ಮೇ 26 ರಂದು ಸಂಜೆ
ಅಷ್ಟರಲ್ಲಿ ಆ ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದಿದೆ. ನನ್ನ ಜೊತೆ ಮಾತನಾಡಿದ್ದ ಮಹಿಳೆ 24 ಗಂಟೆಯಲ್ಲಿ ಇನ್ನಿಲ್ಲ ಎಂಬ ಸುದ್ದಿ ! ಮಾಜಿ ಮುಖ್ಯಮಂತ್ರಿ ವಿರುದ್ದ ಪೋಕ್ಸೋ ದೂರು ಕೊಟ್ಟ ಮಹಿಳೆ ದಿಡೀರ್ ಸಾವನ್ನಪ್ಪುತ್ತಾರೆ ಎಂದರೆ ನಮಗೆ ಅನುಮಾನ ಬಂತು. ರಾತ್ರೋ ರಾತ್ರಿ ಆಸ್ಪತ್ರೆಯ ಹಿಂಬಾಗಿನಿಂದ ಶವ ಸಾಗಿಸಿದ್ದು ನಮ್ಮ ಅನುಮಾನಗಳನ್ನು ಹೆಚ್ಚಿಸಿತ್ತು. ಮಹಿಳೆಗೆ ಕ್ಯಾನ್ಸರ್ ಇತ್ತು ನಿಜ. ಕ್ಯಾನ್ಸರ್ ನಿಂದ ದಿಡೀರ್ ಸಾಯ್ತಾರೆಯೇ ? ದಿಡೀರ್ ಸಾಯಬೇಕಾದರೆ ಒಂದೋ ಹೃದಯಾಘಾತ ಆಗಬೇಕು ಅಥವಾ ಕೊಲೆಯೋ ಆತ್ಮಹತ್ಯೆಯೋ ನಡೆಯಬೇಕು. ಇದ್ಯಾವುದೂ ಇಲ್ಲದೆ ದಿಡೀರ್ ಸಾವು ಹೇಗಾಯ್ತು ಎಂಬುದು ನಮ್ಮ ಮೂಲ ಪ್ರಶ್ನೆಯಾಗಿತ್ತು. ತಕ್ಷಣ ಜನವಾದಿ ಮಹಿಳಾ ಸಂಘಟನೆಯ ಜೊತೆ ಚರ್ಚೆ ನಡೆಸಿದೆವು. ಜನವಾದಿ ಮಹಿಳಾ ಸಂಘಟನೆಯು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಠಾಣೆಗೆ ರಾತ್ರೋ ರಾತ್ರಿ ದೂರು ನೀಡಿದರು.
ಪತ್ರಕರ್ತ ಶ್ರೇಯಸ್, ನಾನು, ಜನವಾದಿಯ ಗೌರಮ್ಮ ಮತ್ತು ಸಂಗಡಿಗರು ಚರ್ಚೆ ನಡೆಸಿ ಮಹಿಳೆಯ ಮಗನನ್ನು ಬೆಂಗಳೂರಿಗೆ ಕರೆಸಿಕೊಂಡೆವು. ಮಗ ತನ್ನ ತಾಯಿಯ ಅಂತ್ಯಕ್ರಿಯೆ ನಡೆಸಿ ಬೆಂಗಳೂರಿಗೆ ಬಂದರು. ಮಗನನ್ನು ನೇರ ವಕೀಲ ಬಾಲನ್ ಕಚೇರಿಗೆ ಕರೆದೊಯ್ದೆವು. ಬಾಲನ್ ಅವರು ಕಾನೂನಿನ ಅವಕಾಶಗಳನ್ನು ಅಧ್ಯಯನ ಮಾಡಿ, ಮಗನ ವಕಾಲತ್ತು ಪಡೆದು “ಯಾಕೆ ಇನ್ನೂ ಬಿ ಎಸ್ ಯಡಿಯೂರಪ್ಪರನ್ನು ಬಂಧಿಸಿಲ್ಲ ?” ಎಂದು ಹೈಕೋರ್ಟ್ ಗೆ ರಿಟ್ ಪಿಟಿಷನ್ ರೆಡಿ ಮಾಡಿದರು. ನಿಧನ ಹೊಂದಿದ್ದ ದೂರುದಾರ ಮಹಿಳೆ ಹಲವು ಅರ್ಜಿಗಳು ಕನ್ನಡದಲ್ಲಿ ಕೈ ಬರಹದಲ್ಲಿತ್ತು. ಅದು ಅರ್ಥವೂ ಆಗದಂತಹ ಸ್ಥಿತಿಯಲ್ಲಿತ್ತು. ಅದೆಲ್ಲವನ್ನೂ ಟೈಪ್ ಮಾಡುವ ಜವಾಬ್ದಾರಿಯೂ ನನ್ನ ಹೆಗಲ ಮೇಲೆ ಬಿತ್ತು. ಅದು ಟೈಪ್ ಆಗಲು ಎರಡು ದಿನ ತೆಗೆದುಕೊಂಡಿತ್ತು. ಜನವಾದಿಯ ಗೌರಮ್ಮ ಅವರು ನಿತ್ಯ ಫಾಲೋಅಪ್ ನಲ್ಲಿ ಇದ್ದರು. ಇದಾದ ಬಳಿಕ ಪೂರ್ಣ ಪ್ರಮಾಣದ ರಿಟ್ ಅರ್ಜಿಯನ್ನು ಎಸ್ ಬಾಲನ್ ಸಿದ್ದಗೊಳಿಸಿದರು. ಹಲವು ನ್ಯಾಯಾಲಯಗಳ ತೀರ್ಪುಗಳನ್ನು ಉಲ್ಲೇಖಿಸಿದ್ದ ರಿಟ್ ಪಿಟಿಷನ್ ಅನ್ನು ಹೈಕೋರ್ಟ್ ನಲ್ಲಿ ಜೂನ್ 10 ರಂದು ಹಾಕಲಾಯಿತು. ರಿಟ್ ಪಿಟಿಷನ್ ಹಾಕಿರುವುದು ಪೊಲೀಸರ ಗಮನಕ್ಕೆ ಬಂತು. ಪೋಕ್ಸೋ ಕೇಸ್ ದಾಖಲಾದರೂ ಒಂದೇ ಒಂದು ಬಾರಿ ವಿಚಾರಣೆ ನಡೆಸದ, ಒಂದೇ ಒಂದು ಬಾರಿ ಸೆಕ್ಷನ್ 41(a) ನೋಟಿಸ್ ನೀಡದ ಪೊಲೀಸರ ಮೇಲೆ ಕ್ರಮ ಆಗೋದು ಗ್ಯಾರಂಟಿ ಎಂಬುದು ರಿಟ್ ಓದಿದ ಯಾರಿಗಾದರೂ ಅರ್ಥ ಆಗುವಂತಿತ್ತು. ಬಾಲನ್ ಅವರ ರಿಟ್ ಸಾರಾಂಶ ಹಾಗೆ ಇತ್ತು.
ಪೊಲೀಸರು ಈ ರಿಟ್ ನಿಂದ ಪೇಚಿಗೆ ಸಿಲುಕಿಕೊಂಡರು. ಸ್ವಲ್ಪ ಯಾಮಾರಿದರೂ ಪೊಲೀಸರ ತಲೆದಂಡ ಆಗುತ್ತಿತ್ತು. ಆ ಕಾರಣಕ್ಕಾಗಿ ಮೂರು ತಿಂಗಳ ನಂತರ ಅಂದರೆ ಜೂನ್ 11 ರಂದು ಬಿ ಎಸ್ ಯಡಿಯೂರಪ್ಪರಿಗೆ 41(a) ನೋಟಿಸನ್ನು ತರಾತುರಿಯಲ್ಲಿ ಪೊಲೀಸರೇ ನೀಡಿ ಬಂದರು. ಜೂನ್ 13 ರಂದು ಸೆಷನ್ ನ್ಯಾಯಾಲಯಕ್ಕೆ ಅರ್ಜಿ ಹಾಕಿದ ಪೊಲೀಸರು “ಬಿ ಎಸ್ ಯಡಿಯೂರಪ್ಪ ವಿಚಾರಣೆಗಾಗಿ ನಾನ್ ಬೇಲೆಬಲ್ ವಾರೆಂಟ್ ಕೊಡುವಂತೆ” ನಿವೇದಿಸಿದರು. ವಾದ ವಿವಾದ ಆಲಿಸಿದ ನ್ಯಾಯಾಲಯ ಪೊಕ್ಸೋ ಕೇಸ್ ನಲ್ಲಿ ಬಿ ಎಸ್ ಯಡಿಯೂರಪ್ಪ ವಿರುದ್ದ ವಾರೆಂಟ್ ಜಾರಿ ಮಾಡಿದೆ.
ಪೋಕ್ಸೋ 1ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ನ ನ್ಯಾಯಾಧೀಶರಾದ ರಮೇಶ್ ಅವರು ಬಿಎಸ್ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದಾರೆ.
ದೂರುದಾರ ಸಂತ್ರಸ್ತ ಮಹಿಳೆ ಅನುಮಾನಾಸ್ಪದವಾಗಿ ನಿಧನ ಹೊಂದಿದರೂ, ರಾಜ್ಯ ಸರ್ಕಾರವೇ ಬಚಾವ್ ಮಾಡಲು ನಿರ್ಧರಿಸಿದ್ದರೂ ಆರೋಪಿ ಬಿ ಎಸ್ ಯಡಿಯೂರಪ್ಪ ‘ವಾರೆಂಟ್’ ನಿಂದ ತಪ್ಪಿಸಿಕೊಳ್ಳಲು ಸಾದ್ಯವಾಗಲಿಲ್ಲ.
(ಕೃಪೆ:13.06.2024 ರಂದು ವಾರ್ತಾಭಾರತಿಯಲ್ಲಿ ಪ್ರಕಟಿತ ಲೇಖನ)