ಸರಕಾರಿ ಶಾಲೆಗಳು ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಅತ್ಯಂತ ಉತ್ಕೃಷ್ಟ ಮಟ್ಟದ ತರಬೇತಿ ಹೊಂದಿದ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತ ಗುಣಾತ್ಮಕ ಶಿಕ್ಷಣ ನೀಡುತ್ತಿವೆ ಪಾಲಕರು ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲೇ ಕಲಿಯಬೇಕು ಎಂಬ ಭ್ರಮೆಯಿಂದ ಹೊರಬರಬೇಕು ಎಂದು ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ನುಡಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕವಿ ಕಲಾವಿದ ಚಿತ್ರಕಲಾ ಶಿಕ್ಷಕ ಬಿ ತಿರುಪತಿ ಶಿವನಗುತ್ತಿ ಅವರು ಬರೆದು ಹಾಡಿ ವಿಡಿಯೋ ಸಂಕಲನ ಮಾಡಿದ “ಬಾ ಬಾರೋ ಶಾಲೆಗೆ ಹೋಗೋಣ” ಎನ್ನುವ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿಯ ಜಾಗೃತಿ ಗೀತೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಮುಂದುವರಿದು ಮಾತನಾಡಿದ ಅವರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಲಿಕ್ಕೆ ಪಾಲಕರಿಗೆ ಮತ್ತು ಸಮುದಾಯಕ್ಕೆ ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ತಿಳಿಸುವ ಮುಖಾಂತರ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಬೇಕು ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಗುಣಮಟ್ಟದ ಶಿಕ್ಷಣವನ್ನು ಮಕ್ಕಳನ್ನು ಪ್ರೋತ್ಸಾಹಿಸಲಿಕ್ಕೆ ಸಮುದಾಯ ಮತ್ತು ಪಾಲಕರಲ್ಲಿ ಜಾಗೃತಿಯನ್ನು ಮೂಡಿಸಲಿಕ್ಕೆ ಅತ್ಯುತ್ತಮವಾದಂತಹ ಶಾಲಾ ದಾಖಲಾತಿಗಾಗಿ ಜಾಗೃತಿ ಗೀತೆಯನ್ನು ಅತ್ಯಂತ ಉತ್ತಮ ರೀತಿಯಲ್ಲಿ ರಚಿಸಿ ಹೊಸ ತಾವೇ ಗಾಯನ ಮಾಡಿ ಈ ಗೀತೆಗೆ ವಿಡಿಯೋ ಸಂಯೋಜನೆ ಮಾಡಿ ಅತ್ಯಂತ ಮಹತ್ವದ ಕಾರ್ಯವನ್ನು ಮಾಡಿದ್ದಾರೆ ಅವರಿಗೆ ಇಲಾಖೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈ ಜಾಗೃತಿ ಗೀತೆಯಲ್ಲಿ ಸರಕಾರ ಕೊಡುವ ಬಹುತೇಕ ಎಲ್ಲಾ ಪ್ರೋತ್ಸಾಹದಾಯಕ ಯೋಜನೆಗಳು ಬಂದಿವೆ. ಉಚಿತ ಶಿಕ್ಷಣ ಪಠ್ಯಪುಸ್ತಕ ಮಧ್ಯಾಹ್ನದ ಬಿಸಿಯೂಟ ಹಾಲು, ಮೊಟ್ಟೆ ಎಲ್ಲಾ ಸೌಲಭ್ಯಗಳನ್ನು ಕೊಡುವ ಮುಖಾಂತರ ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಮಧ್ಯಮ ಕೆಳವರ್ಗದ ಪಾಲಕರ ಮಕ್ಕಳಿಗೆ ಪ್ರತಿಭಾವಂತ ಮಕ್ಕಳಿಗೆ ಸರ್ಕಾರ ಯೋಜನೆಗಳನ್ನು ಉತ್ತಮವಾದ ರೀತಿಯಲ್ಲಿ ಪ್ರಚುರಪಡಿಸಿದ್ದಾರೆ ಎಂದರು.
ಗೀತೆ ರಚನೆಕಾರ ಮತ್ತು ಗಾಯಕ ಬಿ. ತಿರುಪತಿ ಶಿವನಗುತ್ತಿ ಅವರು ಮಾತನಾಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಸರಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಅಂತಹ ಯೋಜನೆಗಳನ್ನು ಒಂದು ಹಾಡಿನ ರೂಪದಲ್ಲಿ ಬಂದರೆ ಅದು ಬೇಗನೇ ಸಮುದಾಯಕ್ಕೆ ಮತ್ತು ಪಾಲಕರಿಗೆ ತಲುಪುತ್ತದೆ ಎಂದು ನಾನೇ ಸ್ವತಃ ಬರೆದು ಹಾಡಿದ್ದೇನೆ. ಈ ಹಾಡಿನಲ್ಲಿ ಸರಕಾರಿ ಶಾಲೆಗಳಲ್ಲಿ ನಡೆಯುವ ಎಲ್ಲಾ ಶೈಕ್ಷಣಿಕ ಚಟುವಟಿಕೆ ದಾಖಲಿಸಲಾಗಿದೆ. ಇದಕ್ಕೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನವೇ ಕಾರಣ ಎಂದರು.
ಇದೇ ಸಂದರ್ಭದಲ್ಲಿ ಈ ವಿಡಿಯೋವನ್ನು “BEO Kustagi YouTube Channel” ಗೆ ಅಪ್ಲೋಡ್ ಮಾಡಲಾಯಿತು. ಅಲ್ಲದೇ ಈ ಹಾಡನ್ನು ಎಲ್ಲ ಸಿ ಆರ್ ಪಿ, ಬಿ ಆರ್ ಪಿ, ಮುಖ್ಯೋಪಾಧ್ಯಾಯರು, ಶಿಕ್ಷಕರ ವ್ಯಾಟ್ಸಾಪ್ ಗುಂಪುಗಳಿಗೆ ಕಳುಹಿಸಿ ಹೆಚ್ಚು ಹೆಚ್ಚು ಮಕ್ಕಳು ಮತ್ತು ಪಾಲಕರು ಇದನ್ನು ಕೇಳುವಂತೆ ಮಾಡಲು ಕೋರಲಾಯಿತು.
ಕಾರ್ಯಕ್ರಮದಲ್ಲಿ ಬಿಇಓ ಕಾರ್ಯಾಲಯದ ವ್ಯವಸ್ಥಾಪಕ ಶಂಕರ್ ಚಲವಾದಿ, ಚಂದ್ರಶೇಖರ ಸಿರಗುಂಪಿ, ಮುತ್ತು , ಮುಖ್ಯೋಪಾಧ್ಯಾಯ ಸೋಮನಗೌಡ ಪಾಟೀಲ, ಶಿಕ್ಷಕರಾದ ಸಂತೋಷ್ ಸಿ ಕೆ, ಹನುಮಂತಪ್ಪ ಎಮ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here