ಬೆಂಗಳೂರು:*ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ತಡೆಹಿಡಿಯಲಾದ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳನ್ನು ಕೂಡಲೇ ಸ್ವೀಕರಿಸಲು ಕ್ರಮವಹಿಸಬೇಕು ಮತ್ತು ಶೈಕ್ಷಣಿಕ ಅರ್ಜಿಗಳನ್ನು ಸ್ವೀಕರಿಸುವ ಅವಧಿಯನ್ನು ಆಗಸ್ಟ್ ವರೆಗೆ ವಿಸ್ತರಿಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) (ಸಿಐಟಿಯು ) ನೇತೃತ್ವದಲ್ಲಿ ಜೂನ್ 1 ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ.
ಕರ್ನಾಟಕದ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಚುನಾವಣೆ ಹೊತ್ತಿನಲ್ಲಿ ಯಾವುದೇ ತಡೆಯಿಲ್ಲದೆ ಜಾರಿಗೊಳ್ಳುತ್ತಿವೆ ಆದರೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕಾರಿಗಳು ಚುನಾವಣಾನೀತಿ ಸಂಹಿತೆ ನೆಪ ಹಾಗೂ ತಂತ್ರಾಂಶದ ನೆಪವೂಡ್ಡಿ ಫಲಾನುಭವಿ ಕಾರ್ಮಿಕರಿಗೆ ಪಿಂಚಣಿ,ವೈದ್ಯಕೀಯ, ಹೆರಿಗೆ,ಮದುವೆ ಸಹಾಯಧನ ಅರ್ಜಿಗಳ ಸ್ವೀಕಾರವನ್ನು ತಡೆವೂಡ್ಡಿರುವುದು ಮತ್ತು ಬಡಕಾರ್ಮಿಕರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಸೌಲಭ್ಯಗಳನ್ನು ನಿರಾಕರಿಸುತ್ತಿರುವುದರ ವಿರುದ್ಧ ಈ ಪ್ರತಿಭಟನೆಯನ್ನು ರಾಜ್ಯದ ಕಾರ್ಮಿಕಾಧಿಕಾರಿಗಳು ಹಾಗೂ ತಾಲೂಕು ನಿರೀಕ್ಷಕರ ಕಚೇರಿ ಹಾಗೂ ಬೆಂಗಳೂರಿನಲ್ಲಿ ಕಲ್ಯಾಣ ಮಂಡಳಿ ಎದುರು ನಡೆಲಾಗುತ್ತಿದೆ. ಅಲ್ಲದೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಕಾನೂನು ಸೇವಾಪ್ರಾಧಿಕಾರದ ಮುಖ್ಯಸ್ಥರಿಗೆ ದೂರನ್ನು ದಾಖಲಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) (ಸಿಐಟಿಯು ) ನಿರ್ಧರಿಸಿದೆ
ಹೈಕೋರ್ಟ ಮಧ್ಯಂತರ ಆದೇಶ ಜಾರಿಗೆ ನಕಾರ ಮಂಡಳಿ ವಿರುದ್ದ ನ್ಯಾಯ ನಿಂದನೆ ಅರ್ಜಿ ಸಲ್ಲಿಸಲು ನಿರ್ಧಾರ
ಕರ್ನಾಟಕ ಹೈಕೋರ್ಟ್ ನಲ್ಲಿ ಏಪ್ರಿಲ್23 ರಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಕುರಿತಾಗಿ ಮಧ್ಯಂತರ ಆದೇಶ ನೀಡಿರುವ ನ್ಯಾಯಾಲಯವು ಅರ್ಜಿದಾರರಾದ ಇಬ್ಬರು ವಿದ್ಯಾರ್ಥಿನಿಯರಿಗೆ ಅವರು ತುಂಬಿರುವ ಕಾಲೇಜು ಶುಲ್ಕವನ್ನು ಈ ಆದೇಶವಾಗಿರುವ ನಾಲ್ಕು ವಾರದೊಳಗೆ ಅವರ ಖಾತೆಗೆ ಪಾವತಿಸಲು ಮಹತ್ವದ ಆದೇಶ ನೀಡಿತ್ತು.
ಆದರೆ ಇಬ್ಬರು ಕಟ್ಟಡ ಕಾರ್ಮಿಕರ ಮಕ್ಕಳಾದ ಅಮೃತಾ ಹಾಗೂ ಅಕ್ಷತಾ ಅವರಿಗೆ 2021 ರ ಅಧಿಸೂಚನೆ ಅನ್ವಯ ನಾಲ್ಕುವಾರವಾಗುತ್ತಾ ಬಂದರೂ ಕಲ್ಯಾಣ ಮಂಡಳಿಯು ಹೈಕೋರ್ಟ್ ಮಧ್ಯಂತರ ಆದೇಶ ಜಾರಿ ಮಾಡದೇ ಉಲ್ಲಂಘಿಸಿದೆ.
ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ಸೆಸ್ ಹಣ ಇದೆ. ಅಲ್ಲದೆ ಈ ಪ್ರಕರಣದಲ್ಲಿ ವಾದಮಾಡಲು ನೇಮಿಸಿದ ವಕೀಲರಿಗೆ ಲಕ್ಷಾಂತರ ಶುಲ್ಕವನ್ನು ಮಂಡಳಿಯು ನೀಡುತ್ರಿದೆ. ಹಾಗೂ ನೂರಾರು ಕೋಟಿ ರುಪಾಯಿಗಳ ಅನಗತ್ಯ ಖರೀದಿಗಳನ್ನು ಮಾಡಲಾಗುತ್ತಿದೆ.ಆದರೆ ಬಡ ಕಾರ್ಮಿಕರ ಇಬ್ಬರು ಮಕ್ಕಳಿಗೆ ಮಾತ್ರ ಹೈಕೋರ್ಟ್ ಆದೇಶದಂತೆ ರೂ 60 ಸಾವಿರ ಮತ್ತು 55 ಸಾವಿರ ರುಪಾಯಿಗಳನ್ನು ಪಾವತಿಸಲು ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಇದೇ ಜೂನ್ 7 ರಂದು ಕಲ್ಯಾಣ ಮಂಡಳಿಯ ವಿರುದ್ಧ ಹೈಕೋರ್ಟನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಫೆಡರೇಶನ್ ನಿರ್ಧರಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದ್ದಾರೆ.