ಹುಬ್ಬಳ್ಳಿ: ರಾಜ್ಯದಲ್ಲಿ ಡ್ರಗ್ಸ್, ಗಾಂಜಾ, ನಿಯಂತ್ರಣಕ್ಕೆ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದರು
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಭಾಗದಲ್ಲಿ ಹೆಚ್ಚು ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬಂದಿರುವುದೇ ಇದಕ್ಕೆ ನಿದರ್ಶನ ಎಂದು ಹೇಳಿದರು.
ಡ್ರಗ್ಸ್ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ತೀರಾ ಬೇಜವಾಬ್ದಾರಿ . ಹೀಗಾಗಿ ಇಲ್ಲಿ ಡ್ರಗ್ ಮಾಫಿಯಾ ತಲೆ ಎತ್ತುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಡ್ರಗ್ಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ತ್ವರಿತವಾಗಿ, ಕಠಿಣ ಕ್ರಮ ಜರುಗಿಸಬೇಕು. ಇಲ್ಲದೇ ಹೋದರೆ ಬರುವ ದಿನಗಳಲ್ಲಿ ಕರ್ನಾಟಕ ಪಂಜಾಬ್ ಅನ್ನು ಮೀರಿಸಬಹುದು ಎಚ್ಚರ ವಹಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಅವಕಾಶ ಬೇಡ. ಯುವ ಸಮೂಹ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.