“ಕಾಗೆ” ಅತ್ಯಂತ ಬುದ್ಧಿವಂತ ಪಕ್ಷಿ. ಅದರ ದೇಹ ಮತ್ತು ಮೆದುಳಿನ ತೂಕಕ್ಕೆ ಹೋಲಿಸಿದರೆ ಮೆದುಳಿನ ಪ್ರಮಾಣ ಇತರ ಪಕ್ಷಿಗಳಿಗಿಂತ ದೊಡ್ಡದು! ಹಾಗಾಗಿ ಬುದ್ಧಿ ಹೆಚ್ಚು: ವೈಜ್ಞಾನಿಕವಾಗಿ ಸಾಬೀತಾದ ಸತ್ಯವಿದು.
ಬಾಲ್ಯದಲ್ಲಿ ಪಠ್ಯವಾಗಿ ಓದಿದ ಕಾಗೆ-ನರಿ ಕಥೆ ದಾರಿತಪ್ಪಿಸುತ್ತದೆ. ವಂಚಕ ನರಿಯನ್ನು ಜಾಣನೆಂದು ಚಿತ್ರಿಸಿ, ಕಾಗೆಗೆ ದಡ್ಡನೆಂಬ ಪಟ್ಟ ಕಟ್ಟಿ ಅದರೆಡೆಗೆ ಅನುಕಂಪ ಹರಿಯುವಂತೆ ಮಾಡಿದ ಕವನವದು(ಕಾಗೆಯೊಂದು ಓಡಿಬಂದು ಮರದಮೇಲೆ ಕುಳಿತುಕೊಂಡು…). ನರಿಯ ಮೆಚ್ಚುಮಾತಿಗೆ ಮರುಳಾಗಿ ಬಾಯಲ್ಲಿದ್ದ ಮಾಂಸದ ತುಂಡನ್ನು ಕಳೆದುಕೊಂಡಿದ್ದ ಆ ಕಾಲದ ಮುಗ್ಧ ಕಾಗೆಯ ಕಥೆಯದು.
ವಾಸ್ತವವಾಗಿ ನರಿಯ ಪ್ರಶಂಸೆಗೆ ಮನಸೋತರೂ ಕಾಗೆ ತನ್ನ ಬಾಯಲ್ಲಿನ ಮಾಂಸದ ತುಂಡನ್ನು ತೆಗೆದು ಕಾಲಡಿಯಲ್ಲಿ ಹಿಡಿದು ಅನಂತರವೇ ಹಾಡಲು ತೊಡಗುತ್ತದೆ! ಕಾಗೆ ಕಿಲಾಡಿ ಪಕ್ಷಿಯೂ ಹೌದು. ನೀನು ಎಸ್. ಜಾನಕಿಯಂತೆ, ಶ್ರೇಯಾ ಘೋಷಾಲ್ ಹಾಗೆ ಹಾಡುವೆ ಎಂದಾಗಲೂ ಅದು ಉಬ್ಬಿಹೋಗದು. ತನ್ನ ಮಿತಿ, ಕೊರತೆ ಹಾಗೂ ಸಾಮರ್ಥ್ಯವನ್ನು ಸ್ವತಃ ಬಲ್ಲ ಹಕ್ಕಿಯದು. ಒಂದು ಪಾತ್ರೆಯಲ್ಲಿ ನಲ್ಲಿಯ ನೀರು, ಇನ್ನೊಂದರಲ್ಲಿ ಮಿನರಲ್/ಖನಿಜಯುಕ್ತ ನೀರಿಟ್ಟರೆ ಅದರ ಆಯ್ಕೆ ಖನಿಜಯುಕ್ತ ನೀರೇ ಆಗಿರುತ್ತದೆ.
ಇತ್ತೀಚಿನ ಪ್ರಾಥಮಿಕ ಶಾಲಾ ಪಠ್ಯಗಳಲ್ಲಿ ಮಡಕೆಯ ತಳದಲ್ಲಿ ಮಾತ್ರ ನೀರಿರುವುದನ್ನು ಕಂಡ ಬಾಯಾರಿದ ಕಾಗೆ ಸಣ್ಣ ಸಣ್ಣ ಕಲ್ಲುಗಳನ್ನು ತಂದು ತುಂಬಿ ನೀರು ಮೇಲೆ ಬರುವಂತೆ ಮಾಡಿ ತನ್ನ ದಾಹ ತಣಿಸಿಕೊಳ್ಳುವ ಚಿತ್ರಾವಳಿಯನ್ನು ಕಾಣಬಹುದು. ಕಾಕರಾಜನ ಬುದ್ಧಿಮತ್ತೆಗೆ ಸಂದ ನಿಜ ಮನ್ನಣೆಯಿದು.
ಕಾಗೆ ಒಂದಗುಳ ಕಂಡಡೆ ಕರೆಯದೇ ತನ್ನ ಬಳಗವನು ಎಂಬ ಬಸವಣ್ಣನವರ ವಚನ ಗೊತ್ತಿದೆಯಲ್ಲವೇ? ಕಾಗೆಯಂತೆ ಉಚ್ಚಸ್ವರದಲ್ಲಿ ತನ್ನ ಬಳಗವನ್ನು ಕರೆದು ಹಂಚಿಕೊಂಡು ಉಣ್ಣುವ ಮತ್ತೊಂದು ಖಗ ಜೀವಸಂಕುಲದಲ್ಲಿ ಇರಲಾರದು. ಇತರ ಕಾಗೆಗಳು ಬರುವವರೆಗೆ ಆಹಾರವನ್ನು ಮೂಸಿಯೂ ನೋಡದು. ಇತರ ಕಾಗೆಗಳು ಮೃತಪಟ್ಟಾಗಲೂ ಅದರ ಹಾಗೆ ರೋದಿಸಿ ತನ್ನ ಬಳಗದ ಇತರ ಕಾಗೆಗಳನ್ನು ಕೂಗಿ-ಕರೆದು ಸಾಮೂಹಿಕ ಶ್ರದ್ಧಾಂಜಲಿ ಸಲ್ಲಿಸುತ್ತದೆ. ಹೀಗೆ ಜೀವತಂತುಗಳನ್ನು ಮಿಡಿಯುವವರು ಯಾರಿದ್ದಾರೆ? ಕಾಗೆ; ಕಾಸಿಲ್ಲದೆಯೇ ಬಂದು ಶೋಕಗೀತೆ ಹಾಡುವ ನಿಜ ರುಢಾಲಿ!
ಕಾಗೆ ಗಡ್ಡ ಬಿಡದಿದ್ದರೂ ನಿಜವಾದ ಬುದ್ಧಿಜೀವಿ. ಸಂಘಜೀವಿಯೂ ಹೌದು. ಅನಾದಿ ಕಾಲದಿಂದಲೂ ಮಾನವನೊಂದಿಗೆ ಸಹಬಾಳ್ವೆ ನಡೆಸುವ ಅನುಸಂಧಾನದ ಮಾರ್ಗ ಅದರದು. ಅದು ಸದಾ ಸ್ವಚ್ಛತೆಯನ್ನೇ ಬಯಸುವ ಗುಬ್ಬಿಯಂತಲ್ಲ. ಸಚ್ಛತೆಯ ಗೀಳು ಅದಕ್ಕಿಲ್ಲ. ಇದ್ದುದರಲ್ಲೇ ಹೊಂದಿಕೊಂಡು ಬಾಳುವ ಸ್ವಭಾವ.
ಗುಬ್ಬಿಯು ಟ್ವಿಟರ್/ಚಿಲಿಪಿಲಿಗೆ ರಾಯಭಾರಿ, ಸಂಕೇತವಾಗಿರುವುದನ್ನು ಅದು ಕಂಡಿದೆ. ತಾನೂ ಅದರಂತೆ ಯಾವುದಾದರೂ ಉದ್ದಿಮೆಯ ಉತ್ಪನ್ನದ ರಾಯಭಾರಿಯಾಗುವ ಮಹತ್ತ್ವಾಕಾಂಕ್ಷೆ ಅದಕ್ಕಿಲ್ಲ. ಆದರೆ ಈಸಬೇಕು, ಇದ್ದು ಜಯಿಸಬೇಕು ಎಂಬ ಅದರ ಕೆಚ್ಚು ಮಾತ್ರ ಮರೆಯಾಗಿಲ್ಲ. ಅದು ಶಕುನದ ಹಕ್ಕಿಯೂ ಅಲ್ಲ. ಶನಿ ಮುಂಡೇದೆ ಎಂದು ಜರಿದರೂ ಸಿಟ್ಟಾಗದ ಸಾತ್ತ್ವಿಕತೆ ಅದರದು. ಅದು ನಿರುಪದ್ರವಿ.
ಅದು ಅಂಗಡಿ, ಹೋಟೆಲಿನ ಮುಂದೆ ಬೆಳಗ್ಗೆ ಮುಸುರಿದರೆ ವ್ಯಾಪಾರ ವರ್ಧಿಸುತ್ತದೆ ಎಂದು ಭಾವಿಸಿ ಒಂದಷ್ಟು ಕಾಳು-ಕಡ್ಡಿ ಹಾಕುವ ವಣಿಕರನ್ನು ಈಗಲೂ ಕಾಣುತ್ತೇವೆ. ಅಷ್ಟರ ಮಟ್ಟಿಗೆ ನಂಬಿಕೆಯನ್ನು ಉಳಿಸಿಕೊಂಡಿರುವ ಪಕ್ಷಿಯದು. “ನನ್ನ ಧಾಟಿಯ ನೀನರಿಯೆ. ನನ್ನ ಹಾಡೇ ಬೇರೆ” ಎಂಬ ಸಿನಿಗೀತೆಯೊಂದರ ಸಾಲಿನಂತೆ ಅಡಿಗಡಿಗೂ ತನ್ನದೇ ಆದ ಅಸ್ಮಿತೆಯನ್ನು ಮೆರೆಯುವ ಹಕ್ಕಿ.
“ವಸಂತ ಕಾಲ ಸಂಪ್ರಾಪ್ತೇ ಕಾಕ ಕಾಕಃ, ಪಿಕ ಪಿಕಃ” ಎಂಬ ಶ್ಲೋಕವಿದೆ. ಕೋಗಿಲೆಯ ಹಾಗೆ ತನ್ನದಲ್ಲದ ಇನ್ನೊಂದು ಗೂಡಿಗೆ ಹೋಗಿ ಅದು ಎಂದೂ ಮೊಟ್ಟೆಯಿಡದು. ಅದು ಪರಪುಟ್ಟ ಅಲ್ಲ. ಕೋಗಿಲೆಯ ಮೊಟ್ಟೆಗೆ ಕಾವು ಕೊಟ್ಟು ಮರಿಮಾಡುವ ಉದಾರಿ. ಅದರ ಸುತ್ತ ಮೌಢ್ಯದ ಹುತ್ತ ಕಟ್ಟಿಕೊಂಡಿದೆ. ಅದು ಮನೆಯೊಳಗೆ ಬಂದರೆ ಮನೆ ಖಾಲಿ ಮಾಡಬೇಕು, ರಾಜಕಾರಣಿಗಳ ಕಾರಿನ ಬಾನೆಟ್ ಮೇಲೆ ಕುಳಿತರೆ, ಅವರ ದಿರಿಸಿನ ಮೇಲೆ ಹೊಲಸು ಮಾಡಿದರೆ ಆಧಿಕಾರ ವಂಚಿತರಾಗುತ್ತಾರೆಂಬ ಆರೋಪಗಳು ಅದರ ಮೇಲಿದೆ. ಆದರದು ನಿರುಪದ್ರವಿ ಹಕ್ಕಿ. ಅದಕ್ಕೆ ಸ್ವಂತಿಕೆಯಿದೆ; ತನ್ನತನವಿದೆ. ಕಾಗೆ ಸ್ವಾಭಿಮಾನಿ. ತನ್ನ ದುಡಿಮೆಯಿಂದಲೇ, ತನ್ನ ಬೆವರಿನಿಂದಲೇ ಬದುಕುವ ಅದರ ಚಲಕ್ಕೆ ಕುತ್ತು ಬಂದಿಲ್ಲ.
“ಹಮ್ ಕಾಲೇ ಹೋತೋ ಕ್ಯಾ ಹುವಾ ದಿಲ್‌ವಾಲೇ ಹೈಂ” ಎಂಬ ಹಾಡು ಕಾಗೆಗಾಗಿಯೇ ಹೇಳಿ ಬರೆಸಿದಂತಿದೆ. ಅಲ್ಲವೇ? ಅರ್ಧಶತಮಾನದ ಹಿಂದೆ ಜನಪ್ರಿಯವಾದ ಬಾಬ್ಬಿ ಚಿತ್ರದ ಝಾಟ್ ಬೋಲೆ ಕೌವಾ ಕಾಟೆ ಕಾಲೆ ಕೌವೇ ಸೆ ಢರಿಯೋ ಗೀತೆಯನ್ನು ಮರೆವುದುಂಟೆ? ಮೃಗರಾಜನಿಗಿಂತ ಕಾಕರಾಜನೇ ಮೇಲು. ಶನಿಯನ್ನೂ ಹೊತ್ತು ತಿರುಗಿ ಅವನ ಸಾರಥಿಯಾಗುವಷ್ಟು ಉದಾರಿ. ಉದ್ಯೋಗವೊಂದಿದ್ದರೆ ಸಾಕು, ಇಂತಹುದೇ ಆಗಬೇಕೆಂಬ ಹಪಹಪಿಕೆಯಿಲ್ಲ.
ಕಡುಕಪ್ಪಗಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಧೀರೋದಾತ್ತ ನಡೆ ಅದರದು. ಅದರ ಕಾವ್, ಕಾವ್ ದನಿ ಆಲಿಸಿದರೆ ಅದು ವಜ್ರಾದಪಿ ಕಠಿಣವೇನೋ ಎಂದೆನಿಸುತ್ತದೆ. ಅದು ಮೃದೂನಿ ಕುಸುಮಾದಪಿ. ಹೂವಿನಂತೆ ಮೃದು ಸ್ವಭಾವ ಅದರದು. ಅದರಿಂದ ನಾವು ಕಲಿಯುವುದು ಸಾಕಷ್ಟಿದೆ.
ಕಾಗೆ ನಿರುಪದ್ರವಿ ಎಂದೆ. ಆದರೆ ಅದರ ಸಹಜ ಶೌಚಕ್ರಿಯೆ ಕೆಲವೊಮ್ಮೆ ನಮ್ಮ ಮೇಲೆ ಬಿದ್ದು ಫಜೀತಿ ಆಗುವುದುಂಟು; ಪ್ರಾಣ ಹಿಂಡುವುದುಂಟು. ಅದರ ತಲೆ ಸೋಕಿದರೆ ಅನಿಷ್ಟ ಎಂಬ ಮೂಢನಂಬಿಕೆ ಉಂಟು. ಅದು ಮನೆಯ ಸೂರಿನ ಮೇಲೆ ಕುಳಿತು ಕೂಗಿದರೆ, ನೆಂಟರು ಬರುವ ಸೂಚನೆ ಎಂಬ ಮತ್ತೊಂದು ನಂಬಿಕೆಯುಂಟು. ಏನೇ ಹೇಳಿ ಜನ ಗಿಣಿಶಾಸ್ತ್ರವನ್ನು ನಂಬುತ್ತಾರೆ. ಆದರೆ ಕಾಕಶಾಸ್ತ್ರ ಎಂಬುದಿಲ್ಲ. ಕಾಗೆ ವರ್ತಮಾನವನ್ನು ನಂಬಿ ಬದುಕುವ ಜೀವ. ಹೀಗೆ ಕಾಗೆ ಕುರಿತಂತೆ ಇಂದಿಗೂ ಜೀವಂತವಾಗಿರುವ ಜಾನಪದೀಯ ನಂಬಿಕೆಗಳು ಹಲವು. ಕಪ್ಪಗಿರುವವರನ್ನು ಕಾಗೆ ಮರಿ ಎಂದು ಛೇಡಿಸುವುದುಂಟು.
“ಕಾಗೆ ಕೂತಿತ್ತು, ಟೊಂಗೆ ಮುರಿದಿತ್ತು” ಎನ್ನುವ ಗಾದೆ ಮಾತಿದೆ. ತಪ್ಪು ಮಾಡದಿದ್ದರೂ, ಆರೋಪಿ ಅಥವಾ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿ ಬರುವ ಪ್ರಸಂಗವನ್ನು ಕಾಗೆ ಟೊಂಗೆ ಮೇಲೆ ಕೂರುವಿಕೆಗೆ ಹೋಲಿಸುವುದುಂಟು. ಪಾಪ, ಕಾಗೆಯು ಬಂಗಾರದಂತಹ ಪಕ್ಷಿ! ಹ್ಞಾಂ; ಬಂಗಾರ ಬಿಟ್ಟರೆ ಇನ್ನೊಂದು ಬಂಗಾರ ಮಾತ್ರ ಇರುವುದು. ಅದುವೇ ಕಾಗೆ ಬಂಗಾರ!
ಇಂತಿಪ್ಪ ಕಾಗೆ ಶನಿದೇವರ ವಾಹನವೂ ಹೌದು. ಅದು ಇತ್ತೀಚೆಗೆ ಶನಿದೇವರ ಗರ್ಭಗುಡಿಯನ್ನು ಹೊಕ್ಕು ಸೃಷ್ಟಿಸಿದ ಹಡಾವುಡಿ ನಮಗೆ ತಿಳಿದಿದೆ.
ಏನೆಲ್ಲ ಆರೋಪಗಳಿಗೆ ಒಳಗಾದರೂ ಕಾಗೆ ಹೆದರದು, ಬೆದರದು. ಅದರ ಬಣ್ಣ, ಕಂಠ ಕಂಡು ಅದನ್ನು ತಿರಸ್ಕಾರದಿಂದ ಕಾಣುವವರೇ ಎಲ್ಲ. ಹಾಗಾಗಿ ಅದನ್ನು ಬೇಟೆ ಆಡುವವರು ಯಾರೂ ಇಲ್ಲ. ಅದರ ಮಾಂಸವನ್ನು ಉಣ್ಣುವವರೂ ಇಲ್ಲ. ಅಷ್ಟರಲ್ಲಿ ಮಟ್ಟಿಗೆ ಇದು ಸುರಕ್ಷಿತ. ಹಾಗಾಗಿ ಕಾಗೆಗೊಂದು ಸಂರಕ್ಷಿತ ಅಭಯಾರಣ್ಯ ಮಾಡುವ ಪ್ರಶ್ನೆಯೇ ಇಲ್ಲ.
ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರಿಗೆ ಕಾಗೆ ಎಂದರೆ ಇನ್ನಿಲ್ಲದ ಅಕ್ಕರೆ. ಅವರ ಮನೆಯಲೆಲ್ಲಾ ಅದರ ಪಟಗಳೇ!
ಕಾಗೆಯ ಅನನ್ಯತೆಯನ್ನು ಮನಗಂಡು ಪ್ರತಿವರ್ಷದ ಏಪ್ರಿಲ್ 27ನ್ನು ಅಂತಾರಾಷ್ಟ್ರೀಯ ಕಾಗೆಗಳ ದಿನ ಎಂದು ಆಚರಿಸಲಾಗುತ್ತದೆ! ಅದಕ್ಕೇ ಹೇಳುವುದು ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂತ. ಹಾಗೆಯೇ ಕಾಗೆಗೂ ಒಂದು ಕಾಲ!(ಕೆ.ರಾಜಕುಮಾರ್ ಲೇಖಕರು)