ವಿಜಯಪುರ: ಸರ್ಕಾರಿ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಕಳೆದ 25 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಣಂತಿ ಶಾರದಾ ಕೊನೆಗೂ ಬದುಕಲೇ ಇಲ್ಲ.
ಆಕೆಯ ಅವಳಿ ನವಜಾತ ಶಿಶುಗಳು ಸೇರಿದಂತೆ ಮೂರು ಮಕ್ಕಳು ಅಕ್ಷರಶಃ ಅನಾಥವಾಗಿವೆ. ಹುಟ್ಟಿದಾಗಿನಿಂದ ತಾಯಿಯ ಹಾಲು ಕುಡಿಯಲು ಸಾಧ್ಯವಾಗದೇ, ಅಮ್ಮನ ಅಪ್ಪುಗೆಯ ಬೆಚ್ಚನೆಯ ಆಪ್ಯಾಯತೆಯನ್ನು ಅನುಭವಿಸಲಾಗದೇ ಅವಳಿ ಮಕ್ಕಳು ಕಣ್ಣು ಪಿಳಿಪಿಳಿ ಬಿಡುತ್ತಿವೆ. ಆ ಅಬೋಧ ಕಂದಮ್ಮಗಳಿಗೆ ನಿಮ್ಮಮ್ಮ ಇನ್ನು ಬಾರದ ಲೋಕಕ್ಕೆ ಹೋಗಿದ್ದಾಳೆ ಎಂದು ಹೇಳುವವರಾದರೂ ಯಾರು?
ಕಳೆದ ತಿಂಗಳು 23 ರಂದು ಹೆರಿಗೆ ನೋವೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ದದಾಮಟ್ಟಿಯ ಶಾರದಾ ಆರೋಗ್ಯವಾಗಿಯೇ ಇದ್ದಳು. ಅವಳಿ ಮಕ್ಕಳಿಗೆ ಜನ್ಮನೀಡಿದಳು. ಈ ಹಂತದಲ್ಲಿ ಆಕೆಗೆ ರಕ್ತಪೂರಣ ಮಾಡುವ ಅಗತ್ಯ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಎ.ಪಾಜಿಟಿವ್ ರಕ್ತವನ್ನು ಕೊಡುವಂತೆ ರಕ್ತನಿಧಿಗೆ ಬರೆದುಕೊಟ್ಟರು. ಆದರೆ ಬಂದಿದ್ದು ಮಾತ್ರ ಬಿ.ಪಾಜಿಟಿವ್ ರಕ್ತ. ರಕ್ತನಿಧಿ ಸಿಬ್ಬಂದಿ ಗಮನಿಸಲಿಲ್ಲವೋ? ರಕ್ತಪೂರಣ ಮಾಡುವ ಮೊದಲು ವೈದ್ಯರು ಪರಿಶೀಲಿಸಲಿಲ್ಲವೋ? ನರ್ಸಿಂಗ್ ಸಿಬ್ಬಂದಿ ಗಮನ ಹರಿಸಲಿಲ್ಲವೋ ಏನೋ ಬಾಣಂತಿಗೆ ಎ.ಪೊಜಿಟಿವ್ ಬದಲು ಬಿ.ಪಾಜಿಟಿವ್ ರಕ್ತಪೂರಣ ಮಾಡಲಾಯಿತು.
ಕ್ಷಣಮಾತ್ರದಲ್ಲಿ ತೀವ್ರ ಅಸ್ವಸ್ಥಗೊಂಡ ಆಕೆಯನ್ನು ಜಿಲ್ಲಾಸ್ಪತ್ರೆಯ ಅಧೀಕ್ಷಕರು ನೇರವಾಗಿ ಇಲ್ಲಿನ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು. ಆದರೆ ಆಕೆಯ ಸಂಬಂಧಿಕರಿಗೆ ಮಾತ್ರ ಸತ್ಯವನ್ನು ಯಾರೂ ಹೇಳಲೇ ಇಲ್ಲ. ಸಿಬ್ಬಂದಿಯ ನಿರ್ಲಕ್ಷ್ಯವನ್ನು ಮುಚ್ಚಿಹಾಕುವ ಪ್ರಯತ್ನ ಆಗಿನಿಂದಲೇ ಶುರುವಾಯಿತು.
ಬಿಎಲ್‌ಡಿಇ ಆಸ್ಪತ್ರೆಗೆ ದಾಖಲು ಮಾಡುವಾಗಲಾದರೂ ಸತ್ಯವನ್ನು ಹೇಳಿದ್ದರೇ ಆಗಲೇ ಎಂಎಲ್‌ಸಿ ಅಡಿ ಪ್ರಕರಣ ದಾಖಲಾಗಬೇಕಾಗಿತ್ತು. ಆದರೆ ಆಗಲೇ ಇಲ್ಲ. ಅದೇನು ಹೇಳಿದ್ದರೋ ಗೊತ್ತಿಲ್ಲ. ಆದರೆ ಬಿಎಲ್‌ಡಿಇ ವೈದ್ಯರು ಮಾತ್ರ ತಮ್ಮಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಆಕೆಯನ್ನು ಬದುಕಿಸಲು ಶತಪ್ರಯತ್ನ ನಡೆಸಿದರು.
ಕಳೆದ 25 ದಿನಗಳಿಂದ ಆಕೆ ಜೀವಂತ ಉಳಿದಿದ್ದೇ ವೈದ್ಯಲೋಕದ ಪವಾಡ. ಒಂದೇ ಒಂದು ಹನಿ ಬೇರೆ ಗುಂಪಿನ ರಕ್ತ ದೇಹವನ್ನು ಸೇರಿದರೂ ಸಾಕು. ರಕ್ತ ಹೆಪ್ಪುಗಟ್ಟಿ, ಕಿಡ್ನಿ, ಹೃದಯ, ಲಿವರ್ ಸೇರಿದಂತೆ ಬಹು ಅಂಗಾಂಗ ವೈಫಲ್ಯವಾಗಿ ರೋಗಿ ಸಾವಿಗೀಡಾಡುವ ಸಾಧ್ಯತೆಗಳಿರುತ್ತವೆ.
ಬಾಣಂತಿಯ ಸಂಬಂಧಿಕರು ಆಕೆಗೆ ತೀವ್ರ ರಕ್ತಸ್ರಾವವಾಗಿತ್ತು. ಹಾಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯರು ದೇವರಿಗೆ ಸಮಾನ. ಖಾಸಗಿ ಆಸ್ಪತ್ರೆ ಖರ್ಚು ವೆಚ್ಚಗಳನ್ನೆಲ್ಲ ಅವರೇ ವಹಿಸುತ್ತಿದ್ದಾರೆ ಎಂದು ಸಮಾಧಾನಗೊಂಡಿದ್ದರು. ಆದರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ರಕ್ಷಣೆಗಾಗಿಯೇ ಇಷ್ಟೆಲ್ಲ ಪ್ರಯತ್ನ ನಡೆಯುತ್ತಿದೆ ಹೊರತು ಬಾಣಂತಿಯ ಪ್ರಾಣ ರಕ್ಷಣೆಗಲ್ಲ ಎಂಬ ಸತ್ಯ ಅವರಿಗಾದರೂ ಅರ್ಥವಾಗುವುದು ಹೇಗೆ?
ಈ ನಡುವೆ ಜಿಲ್ಲಾಸ್ಪತ್ರೆ ಅಧೀಕ್ಷಕ ಶಿವಾನಂದ ಮಾಸ್ತಿಹಳ್ಳಿ ಪ್ರಕರಣದ ಕುರಿತು ಆಂತರಿಕ ವಿಚಾರಣೆ ನಡೆಸಿದರು. ಮೇಲ್ನೋಟಕ್ಕೆ ತಪ್ಪಿತಸ್ಥರೆಂದು ಕಂಡು ಬಂದ ನಾಲ್ವರು ಸಿಬ್ಬಂದಿಗಳನ್ನು ಅಮಾನತ್ತಿನಲ್ಲಿರಿಸಿದರು. ಓರ್ವ ವೈದ್ಯೆಯ ವಿರುದ್ಧ ಇಲಾಖಾ ತನಿಖೆಗಾಗಿ ಆರೋಗ್ಯ ಇಲಾಖೆ ಆಯುಕ್ತರಿಗೂ ಶಿಫಾರಸ್ಸು ಮಾಡಿದರು.
ಒಂದೆಡೆ ಈ ಪ್ರಕ್ರಿಯೆ ನಡೆಯುತ್ತಿದ್ದರೆ ಮತ್ತೊಂದೆಡೆ ಸಿಬ್ಬಂದಿಗಳನ್ನು ರಕ್ಷಿಸುವ ಪ್ರಯತ್ನ ಜೋರಾಗಿ ನಡೆದಿತ್ತು. ಬಾಣಂತಿ ಸಾವಿಗೀಡಾದಾಗಲೂ ಪ್ರಕರಣ ಮುಚ್ಚಿಹಾಕುವ ಸಕಲ ಪ್ರಯತ್ನ ಮಾಡಲಾಯಿತು. ಸರ್ಕಾರಿ ಆಸ್ಪತ್ರೆ ಶವವಾಹವನ್ನು ಬಿಎಲ್‌ಡಿಇ ಆಸ್ಪತ್ರೆಗೆ ಕಳುಹಿಸಿ ಗಡಿಬಿಡಿಯಲ್ಲಿ ಮೃತದೇಹವನ್ನು ಅಲ್ಲಿಂದ ಸಾಗಿಸುವ ಪ್ರಯತ್ನ ನಡೆಯಿತು. ಮೃತಳ ಸಂಬಂಧಿಕರಿಗೆ ಮನವೊಲಿಸಿ ಪೊಲೀಸ್ ಠಾಣೆಗೆ ಹೋಗದಂತೆ ತಡೆಯಲಾಯಿತು. ಹೇಗಿದ್ದರು ನಮ್ಮ ಜೀವ ಹೋಗಿದೆ. ಯಾರ ಮೇಲೆ ದೂರು ನೀಡಿ ಏನು ಪ್ರಯೋಜನ ಎಂದು ಊರಿಗೆ ತೆಗೆದುಕೊಂಡು ಹೋಗುವ ಸಿದ್ಧತೆ ನಡೆಸಿದ್ದರು.
ಈ ಸುದ್ದಿ ಗಮನಕ್ಕೆ ಬರುತ್ತಿದ್ದಂತೆ ಡಿವೈಎಸ್‌ಪಿ ಬಸವರಾಜ ಎಲಿಗಾರ ಪೊಲೀಸ್ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಿ ಮಾಹಿತಿ ಪಡೆದಿದ್ದಾರೆ. ಇನ್ನು ಮುಂದಿನದು ಪೊಲೀಸ್ ಇಲಾಖೆಗೆ ಹಾಗೂ ಸರ್ಕಾರಿ ಆಸ್ಪತ್ರೆ ಆಡಳಿತಕ್ಕೆ ಸಂಬಂಧಿಸಿದ್ದು.
ಆದರೆ ಆ ಅನಾಥ ಮಕ್ಕಳ ಗತಿ ಏನು? ಅವಳಿ ಮಕ್ಕಳಲ್ಲದೇ ಆ ತಾಯಿಗೆ ನಾಲ್ಕು ವರ್ಷದ ಮಗನಿದ್ದಾನೆ. ಆತನನ್ನು ಸಮಾಧಾನ ಮಾಡುವವರು ಯಾರು? ಆಕೆಯ ಪತಿ ವೃತ್ತಿಯಿಂದ ಖಾಸಗಿ ವಾಹನ ಚಾಲಕ. ಆತನ ಬದುಕಿಗೆ ಆಸರೆ ಯಾರು?
ಸರ್ಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿ ನಿರ್ಲಕ್ಷ್ಯದಿಂದಾದ ಅನಾಹುತದ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಂಥ ಎಷ್ಟು ಪ್ರಕರಣಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ. ಇಷ್ಟಕ್ಕೂ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳ ಮೇಲೆ ಯಾವ ವಿಶ್ವಾಸದಿಂದ ದಾಖಲಾಗಬೇಕು?ಎಂದು ಸಾರ್ವಜನಿಕರ ಆತಂಕವಾಗಿದೆ.