ಮಂಡ್ಯ: ಜನತಾ ದರ್ಶನದಲ್ಲಿ ಸ್ವೀಕಾರವಾಗುವ ಕುಂದು ಕೊರತೆ ಅರ್ಜಿಗಳೊಂದಿಗೆ ಸೂಕ್ತ ದಾಖಲಾತಿ ಲಗತ್ತಿಸಿ ಸಾರ್ವಜನಿಕರು ಸಲ್ಲಿಸಿದರೆ ಒಂದು ತಿಂಗಳೊಳಗಾಗಿ ಸಮಸ್ಯೆ ಪರಿಹರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಮದ್ದೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜನತಾ ದರ್ಶನ ನಡೆಸಿದ ಸಂದರ್ಭದಲ್ಲಿ ಮರಳಿಗ ಗ್ರಾಮದ ಜನತಾ ದರ್ಶನದಲ್ಲಿ ಮಾತನಾಡಿದರು. ಲೋಕಸಭಾ ಚುನಾವಣೆ ನಡೆಯುವ ಹಿನ್ನಲೆ ಈ ಬಾರಿ ಸ್ವೀಕಾರವಾಗುವ ಅರ್ಜಿ ವಿಲೇವಾರಿ ತಡವಾಗಬಹುದು. ಚುನಾವಣೆಯ ನಂತರ ಜನತಾ ದರ್ಶನ ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿಯ ಒಟ್ಟು 5047 ಕುಟುಂಬಗಳಿಗೆ ಗ್ಯಾರಂಟಿ ಯೋಜನೆ
ಗ್ರಾಮದ 5047 ಕುಟುಂಬಗಳು ಒಂದಲ್ಲ ಒಂದು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪ್ರತಿ ಕುಟುಂಬಕ್ಕೆ ಪ್ರತಿ ಮಾಹೆ ಗ್ಯಾರಂಟಿ ಯೋಜನೆಗಳ ಮೂಲಕ ಕನಿಷ್ಠ 5 ರಿಂದ 6 ಸಾವಿರ ರೂ ಗಳ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.
ಜನಸಾಮಾನ್ಯರನ್ನು ಸಬಲೀಕರಣಗೊಳಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ಚಾಲನೆಯನ್ನು ನೀಡಲಾಗಿದ್ದು, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಸಹ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸವನ್ನು ಮಾಡುತ್ತಿದೆ ಎಂದರು.