ಬೆಂಗಳೂರು ನಗರ ಜಿಲ್ಲೆ, ಫೆ.28 : ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಗಳನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬೈರತಿ ಸುರೇಶ್ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಇಂದು ಆರ್.ಟಿ ನಗರದ ಹೆಚ್.ಎಂ.ಟಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಜನ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಈಗಾಗಲೇ ಹೆಚ್ಚಿನ ಜನರು ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವು ಒಂದು ಕುಟುಂಬಕ್ಕೆ ಪ್ರತಿ ತಿಂಗಳು 6 ರಿಂದ 7 ಸಾವಿರ ರೂ ನೀಡುತ್ತಿದೆ. ವಾರ್ಷಿಕವಾಗಿ 60 ಸಾವಿರ ಕೋಟಿ ರೂ.ಗಳನ್ನು ಯೋಜನೆಗೆ ಸರ್ಕಾರವು ವೆಚ್ಚ ಮಾಡುತ್ತಿದ್ದು, ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಹೆಬ್ಬಾಳ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಹತ್ತು ರಸ್ತೆಗಳ ವೈಟ್ ಟಾಪಿಂಗ್ ಮಾಡಲಾಗುತ್ತಿದೆ. ನೃಪತುಂಗ ಬಡಾವಣೆಯಲ್ಲಿ ಹೊಸದಾಗಿ ಕಾಲೇಜುಗಳನ್ನು ನಿರ್ಮಿಸಲಾಗಿದ್ದು, ಶೀಘ್ರವೇ ಉದ್ಘಾಟನೆಯಾಗಲಿದೆ. ಎರಡು ಆಸ್ಪತ್ರೆಗಳ ನಿರ್ಮಾಣದ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಹವಾಲು ಸ್ವೀಕರಿಸಿ, ಬೇಸಿಗೆ ಮುಗಿಯುವ ವರೆಗೂ ಕ್ಷೇತ್ರದಾದ್ಯಂತ 8 ಟ್ಯಾಂಕರ್ ಗಳನ್ನು ಒದಗಿಸಲಾಗಿದೆ. ನೀರಿನ ಪ್ರಮಾಣ ಕಡಿಮೆ ಬಂದಲ್ಲಿ ಇನ್ನೂ ಹೆಚ್ಚಿನ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಿಂಚಣಿ ಸಮಸ್ಯೆ ,ಶಾಲಾ ಕೊಠಡಿ ನಿರ್ಮಾಣ, ಆಸ್ತಿ ನೋಂದಣಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ವಿ, ಬಿಬಿಎಂಪಿ ಅಪರ ಆಯುಕ್ತರಾದ ಆರ್. ಸ್ನೇಹಲ್, ಬಿಬಿಎಂಪಿ ಜಂಟಿ ಆಯುಕ್ತರಾದ ಪಲ್ಲವಿ, ಉಪ ಪೊಲೀಸ್ ಆಯುಕ್ತರಾದ ಸೈದುಲ್ ಅದಾವತ್ ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.