ಪಾವಗಡ 26.ಒಂದೇ ದಿನ ಗರ್ಭಕೋಶಕ್ಕೆ ಸಂಬಂಧಿಸಿದ ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾದ ಮೂವರು ಮಹಿಳೆಯರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ,
ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದ ಶಸ್ತ್ರ ಚಿಕಿತ್ಸೆಯಲ್ಲಿ ಐದು ದಿನಗಳ ಅವಧಿಯಲ್ಲಿ ಮೂವರು ಮಹಿಳೆಯರು ಸಾವು ಕಂಡಿದ್ದಾರೆ. ಸಂತಾನಹರಣ, ಗರ್ಭಕೋಶದ ಚಿಕಿತ್ಸೆ ಹಾಗೂ ಸಿಸರಿಯನ್ ಹೆರಿಗೆ ಒಳಗಾಗಿದ್ದ ಮೂವರು ಮಹಿಳೆಯರು ಮೃತ ಪಟ್ಟಿದ್ದಾರೆ. ವಿಪರ್ಯಾಸವೆಂದರೆ ಎಲ್ಲಾ ಮಹಿಳೆಯರು ಗರ್ಭಕೋಶಕ್ಕೆ ಸಂಬಂಧಿಸಿದ ವಿವಿಧ ಶಸ್ತ್ರಚಿಕಿತ್ಸೆಯಲ್ಲಿ ಈ ಸಾವು ಸಂಭವಿಸಿದೆ.

22 ನೇ ತಾರೀಕು 7 ಮಂದಿಗೆ ಹೆರಿಗೆ ಸೇರಿದ್ದಂತೆ ವಿವಿಧ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದ ವೀರ್ಲಗೊಂದಿ ಗ್ರಾಮದ ಮಹಿಳೆ‌ ಅನಿತಾ ಮೊದಲಿಗೆ ಸಾವು ಕಂಡರು. 30 ವರ್ಷದ ಅನಿತಾ ಸಂತಾನ ಹರಣ ಚಿಕಿತ್ಸೆ ನಡೆದ ದಿನವೇ ಬಲಿಯಾದರು.

ಇನ್ನು ರಾಜವಂತಿ ಮೂಲದ ಅಂಜಲಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಅಂಜಲಿ ಸ್ಥಿತಿ ಗಂಭೀರವಾಗಿತ್ತು. ಬಳಿಕ ಬೆಂಗಳೂರಿನ‌ ವಿಕ್ಟೋರಿಯಾ ಆಸ್ಪತ್ರೆಗೆ ಅಂಜಲಿಯನ್ನ ರವಾನಿಸಲಾಗಿತ್ತು.‌ ಚಿಲಿತ್ಸೆ ಫಲಕಾರಿಯಾಗದೆ ಅಂಜಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 24 ರಂದು ಸಾವನ್ನಪ್ಪಿದ್ದಾರೆ.

ಬ್ಯಾಡನೂರು ಗ್ರಾಮದ 40 ವರ್ಷದ ನರಸಮ್ಮಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ನರಸಮ್ಮ‌ ಸ್ಥಿತಿ ಗಂಭೀರವಾಗಿತ್ತು. ನರಸಮ್ಮ ಅವರನ್ನ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.‌ ಚಿಕಿತ್ಸೆ ಫಲಕಾರಿಯಾಗದೆ 25ನೇ ತಾರೀಕು ನರಸಮ್ಮ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಕಂಡರು.

ಈ ಮೂವರು 22ನೇ ತಾರೀಕು ಶಸ್ತ್ರ ಚಿಕಿತ್ಸೆ ಒಳಗಾಗಿದ್ದರು. ಈ ಮೂರು ಸಾವಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಯುತ್ತಿದೆ. ಕುಟುಂಬಸ್ಥರಿಂದ ಮೃತ ಅಂಜಲಿ ಭಾವಚಿತ್ರ ಹಿಡಿದು ಪಾವಗಡದಲ್ಲಿ ಪ್ರತಿಭಟನೆ ನಡೆಸಿದ್ದು, ಪಾವಗಡದಲ್ಲಿ ಬಳ್ಳಾರಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.
ಈ ಎಲ್ಲಾ ಶಸ್ತ್ರ ಚಿಕಿತ್ಸೆಯನ್ನು ಡಾ. ಪೂಜಾ ನಡೆಸಿದ್ದರು. 7 ಜನರಲ್ಲಿ ಉಳಿದ ನಾಲ್ವರು ಸದ್ಯ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಪಾವಗಡ ತಾಲ್ಲೂಕು ಟಿ.ಎಚ್.ಒ ತಿರುಪತಯ್ಯ ಮಾಹಿತಿ ನೀಡಿ, ಶಸ್ತ್ರಚಿಕಿತ್ಸೆ ವೇಳೆ ಸೋಂಕಿನಿಂದ ಈ ರೀತಿ ಅವಘಡ ನಡೆದಿರುವ ಸಾಧ್ಯತೆಯಿದೆ. 22ರಂದು ಡಾ. ಪೂಜಾ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಈಗಾಗ್ಲೇ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳಿಂದ ತನಿಖೆ ನಡೆಸುತ್ತಿದ್ದೇವೆ. ಎರಡು ತಜ್ಞರ ತಂಡಗಳು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ರೋಗಿಗಳ ಮರಣದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸಾವಿನ ಕಾರಣ ಏನೆಂದು ತನಿಖೆ ನಡೆಯುತ್ತಿದೆ. ಪೋಸ್ಟ್ ಮಾರ್ಟಂ ಹಾಗೂ ಎಫ್.ಎಸ್.ಎಲ್ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಬಳಿಕ ಹಿರಿಯ‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ವರದಿ :ನಾಗರಾಜು ದೇವರಹಟ್ಟಿ

LEAVE A REPLY

Please enter your comment!
Please enter your name here