ಕಬ್ಬರಗಿ:

ಪರೀಕ್ಷೆ ಎಂಬುದು ಯುದ್ಧವಲ್ಲ ಅದೊಂದು ಉತ್ಸವ ಪರೀಕ್ಷೆ ಬರೆಯುವುದಕ್ಕೆ ಉತ್ಸಾಹ ಇರಬೇಕೆ ಹೊರತು ಭಯವಲ್ಲ ಎಂದು ಕಬ್ಬರಗಿ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಮೈಲಾರಪ್ಪ ಹಾದಿಮನಿ ಅವರು ನುಡಿದರು. ಅವರು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ ಮತ್ತು ಸರಕಾರಿ ಪ್ರೌಢಶಾಲೆ ಕಬ್ಬರಗಿ ಯ ಸಹಯೋಗದಲ್ಲಿ ಕಬ್ಬರಗಿಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯಲಿರುವ 2023 – 24 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಂಭ್ರಮ ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡುತ್ತಾ ನಮ್ಮ ಪರೀಕ್ಷಾ ಕೇಂದ್ರದಲ್ಲಿ ಅತ್ಯಂತ ಅಚ್ಚುಕಟ್ಟಾದ ರೀತಿಯಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ನಿಮಗೆ ಯಾವುದೇ ರೀತಿಯ ತೊಂದರೆ ಆಗದ ಹಾಗೆ ಎಲ್ಲಾ ಶಿಕ್ಷಕರು ನಿಮಗೆ ಮಾರ್ಗದರ್ಶನವನ್ನು ಮಾಡಿ ಅತ್ಯಂತ ಸರಳ ಮತ್ತು ಭಯ ರಹಿತವಾಗಿ ಪರೀಕ್ಷೆಯನ್ನು ಬರೆಯುವ ವ್ಯವಸ್ತೆಯನ್ನು ಮಾಡಲಾಗುವುದು ಎಂದರು
ಕಾರ್ಯಕ್ರಮದ ನೂಡಲ್ ಅಧಿಕಾರಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ತಿಮ್ಮಣ್ಣ ಹಿರೇಹೊಳಿ ಅವರು ತಮ್ಮ ಮುಖ್ಯ ಅತಿಥಿಗಳ ಭಾಷಣದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಭಯ ನಿವಾರಣೆ ಮಾಡಿ ಅತ್ಯಂತ ಉತ್ಸಾಹದಿಂದ ಪರೀಕ್ಷೆಯನ್ನು ಎದುರಿಸಲಿ ಎಂಬುವ ಸದುಉದ್ದೇಶದಿಂದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಂದ್ರ ಕಾಂಬಳೆ ಅವರ ಕನಸಿನ ಕೂಸು ಈ ಪರೀಕ್ಷಾ ಸಂಭ್ರಮ ಮತ್ತು ಸಂವಾದ ಅನ್ನುವ ಒಂದು ವಿನೂತನ ಕಾರ್ಯಕ್ರಮ. ನಾವೆಲ್ಲ ಈ ಪರೀಕ್ಷೆಯನ್ನು ಒಂದು ಹಬ್ಬವಾಗಿ ಆಚರಿಸಿ ಯಾವುದೇ ರೀತಿಯ ಆತಂಕ ಇಲ್ಲದೆ ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನ ಎದುರಿಸಿ ತಾಲೂಕಿಗೆ ಉತ್ತಮವಾದ ಫಲಿತಾಂಶವನ್ನು ನೀಡುವುದಕ್ಕೆ ನಾವೆಲ್ಲ ಸಿದ್ದರಾಗೋಣ ಎಂದು ಹೇಳಿದರು
ಇದಕ್ಕೂ ಮೊದಲು ಬೆಳಿಗ್ಗೆ ಈ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ ಏಪ್ರಿಲ್ 2024 ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆಯಲಿರುವ ಸರಕಾರಿ ಪ್ರೌಢಶಾಲೆ ಕಬ್ಬರಗಿ ಸೇರಿದಂತೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಾಟಾಪುರ ಸರಕಾರಿ ಪ್ರೌಢಶಾಲೆ ಮನ್ನೇರಾಳ ಹಾಗೂ ಆರ್ ಬಿಐ ಪಾಟೀಲ ಪ್ರೌಢಶಾಲೆ ಹೂಲಗೇರಿ ಶಾಲೆಗಳಿಂದ ಆಗಮಿಸಿದ 272 ಪರೀಕ್ಷಾರ್ಥಿಗಳಿಗೆ ಪುಷ್ಪವನ್ನು ನೀಡಿ ಸ್ವಾಗತಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮೊದಲು ವಿದ್ಯಾರ್ಥಿಗಳ ಪರೀಕ್ಷಾ ಭಯ ಹೋಗಲಾಡಿಸುವ ಸಲುವಾಗಿ ಮುಖ್ಯ ಪರೀಕ್ಷೆಯ ಮಾದರಿಯಂತೆ ಅಣುಕು ಪರೀಕ್ಷೆಯನ್ನ ನಡೆಸಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಚನ್ನಪ್ಪ ಅಂಬಿಗೇರ (ಕನ್ನಡ), ಅರವಿಂದ ನಡುವಿನಮನಿ (ಹಿಂದಿ), ಮಲ್ಲಪ್ಪ ಹೆಬ್ಬಾಳ (ಗಣಿತ), ಬಸವರಾಜ ಕೊರ್ತಿ (ವಿಜ್ಞಾನ) ಹಾಗೂ ಚಿದಾನಂದ ಕಸ್ತೂರಿ (ಸಮಾಜ ವಿಜ್ಞಾನ) ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತಾಗಿ ವಿಷಯವಾರು ಇರುವ ಆತಂಕ ಪರೀಕ್ಷೆಗೆ ಬೇಕಾಗುವ ಸಿದ್ಧತೆ ಪರೀಕ್ಷೆಯಲ್ಲಿ ಎದುರಿಸಬಹುದಾದ ಸವಾಲುಗಳನ್ನು ಕುರಿತು ಮಾರ್ಗದರ್ಶನವನ್ನು ಮಾಡಿದರು.
ಪರೀಕ್ಷಾ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತಲ್ಲದೇ ಪರೀಕ್ಷೆಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿ ಭೋಜನದ ವ್ಯವಸ್ತೆಯನ್ನು ಮಾಡಲಾಗಿತ್ತು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರೇರಣಾ ಉಪನ್ಯಾಸ ನೀಡಲು ಆಗಮಿಸಿದ್ದ ಕಾಟಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಗುರುಬಸಪ್ಪ ಅವರು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಮೌಲ್ಯಯುತವಾದ ಉಪನ್ಯಾಸ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ವಜ್ರದ ಹಾಗೆ ಆದರೆ ನಿಮ್ಮ ಸಾಮರ್ಥ್ಯ ನಿಮಗೆ ತಿಳಿದಿರುವುದಿಲ್ಲ ಇಷ್ಟವಿಲ್ಲದೇ ಇರುವುದನ್ನು ಇಷ್ಟಪಟ್ಟು ಕಷ್ಟವೆನಿಸಿದ್ದನ್ನು ಸಾಧಿಸುವುದೇ ಶ್ರೇಷ್ಠ ಸಾಧನೆಯಾಗುತ್ತದೆ ಮೊದಲು ನೀವು ನಿಮ್ಮಲ್ಲಿ ಆತ್ಮವಿಶ್ವಾಸ ಮತ್ತು ಛಲ ರೂಢಿಸಿಕೊಳ್ಳಿ ಉತ್ತಮ ಫಲಿತಾಂಶ ತನ್ನಿಂದ ತಾನೇ ದೊರಕುತ್ತದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳು ಪ್ರಶ್ನೆಗಳ ಮುಖಾಂತರ ತಮ್ಮಲ್ಲಿರುವ ಅನೇಕ ಸಂದೇಶಗಳಿಗೆ ಪರಿಹಾರಗಳನ್ನು ಪಡೆದುಕೊಂಡರು. ವೇದಿಕೆಯಲ್ಲಿ ಕಾಟಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಎಸ್ ಎಸ್ ಚೊಳಚಗುಡ್ಡ, ಮನ್ನೇರಾಳ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ಕುಲಕರ್ಣಿ, ಹೂಲಗೇರಿ ಆರ್ ಬಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್ ಎಚ್ ಬೀಳಗಿ ದೈಹಿಕ ಶಿಕ್ಷಕ ಬಿ ವಿ ಬನ್ನಿ ಅವರು ಉಪಸ್ಥಿತರಿದ್ದರು.
ಚಿತ್ರಕಲಾ ಶಿಕ್ಷಕ ತಿರುಪತಿ ಚಲವಾದಿ ಅವರ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಸಂಗಮೇಶ ತೆಗ್ಗಿನಮನಿ ಸ್ವಾಗತಿಸಿದರು. ಗಣಿತ ಶಿಕ್ಷಕ ಶಿವಪ್ರಕಾಶ್ ಸಜ್ಜನ ಕಾರ್ಯಕ್ರಮ ನಿರೂಪಿಸಿದರು‌. ಕೊನೆಯಲ್ಲಿ ಅತಿಥಿ ಶಿಕ್ಷಕ ಶರಣಬಸಪ್ಪ ಅಧಿಕಾರಿ ವಂದಿಸಿದರು

LEAVE A REPLY

Please enter your comment!
Please enter your name here