ಬೆಂಗಳೂರು: ನಾನು ಮಾತಾಡುತ್ತಿರುವುದು ಟಾಟಾ ಟ್ರಸ್ಟ್ ಅಂಗ ಸಂಸ್ಥೆಯಾದ ’ಪರಾಗ್’ ಮತ್ತು ’ಬಹುರೂಪಿ’ ಪ್ರಕಾಶನ ಸಂಸ್ಥೆಗಳ ಸಹಯೋಗದಲ್ಲಿ, ನಗರದ ಹೊರವಲಯದ “ಫೈರ್ ಪ್ಲೈಸ್’ ಎಂಬ ತಾಣದಲ್ಲಿ ಜನವರಿ 26ರಿಂದ 28ರ ವರೆಗೆ ನಡೆದ, ’ಬಿಂಬ-ಪ್ರತಿಬಿಂಬ’ ಕಲಿಕಾ ಕಮ್ಮಟದ ಕುರಿತು.
ಮಕ್ಕಳಿಗಾಗಿ ಪ್ರಕಟವಾದ ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸುವ ನಿರ್ದಿಷ್ಟ ಉದ್ದೇಶದಿಂದ, ಪರಸ್ಪರ ಸಮಾಲೋಚನೆಯ ಮೂಲಕ ನಮ್ಮ ಸಾಮರ್ಥ್ಯವನ್ನು ವಿಸ್ತಾರಗೊಳಿಸಿಕೊಳ್ಳುವುದು ಈ ಕಲಿಕಾ ಕಮ್ಮಟದ ಉದ್ದೇಶವಾಗಿ. ರಾಜ್ಯಾದ್ಯಂತದಿಂದ ಬಂದಿದ್ದ 14 ಜನ ಇದರಲ್ಲಿ ಭಾಗವಹಿಸಿದ್ದರು.
ನಾನು, ಎಂ.ಅಬ್ದುಲ್ ರೆಹಮಾನ್ ಪಾಷ, ತೇಜಸ್ವಿ ಶಿವಾನಂದ್, ಜಿ.ಎನ್.ಮೋಹನ್ ಮತ್ತು ಶ್ರೀಜಾ ವಿ.ಎನ್. ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮಕ್ಕಳ ಕೃತಿಗಳ ಲೇಖಕರು/ಅನುವಾದಕರೂ ಆದ ಚತುರಾ ರಾವ್ ಮತ್ತು ನಾಗೇಶ್ ಹೆಗ್ಡೆಯವರೊಂದಿಗೆ ಮುಕ್ತ ಸಂವಾದವಿತ್ತು.
ಶಿಬಿರದ ಫಲಶ್ರುತಿಯಾಗಿ, ಪ್ರತಿಯೊಬ್ಬ ಭಾಗಿಯೂ ತನಗೆ ಮೆಚ್ಚುಗೆಯಾದ ಒಂದು ಮಕ್ಕಳ ಪುಸ್ತಕವನ್ನು ಆರಿಸಿಕ್ಕೊಳ್ಳುವುದು, ಮುಂದಿನ ಆರು ವಾರಗಳ ಒಳಗೆ ಅದನ್ನು ಕನ್ನಡಕ್ಕೆ ಅನುವಾದಿಸಿ, ಮುದ್ರಣಕ್ಕೆ ಸಜ್ಜು ಮಾಡಿಕೊಡಬೇಕು ಎಂಬುದು ಗುರಿಯಾಗಿದೆ. ಇವರು ಮುಂದಿನ ಆರು ವಾರ ತಮಗೆ ನಿಗದಿಯಾಗಿರುವ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಇದನ್ನು ಮಾಡುತ್ತಾರೆ.
ಪರಾಗ್ ಸಂಸ್ಥೆಯ ಮುಖ್ಯಸ್ಥರಾರ ಲಕ್ಷಿ ಕರುಣಾಕರನ್ ಮತ್ತು ಅವರ ಶಿಸ್ತು ಮತ್ತು ಶ್ರಮದ ಪ್ರತೀಕವಾದ ಯುವ ತಂಡದ ವಿವೇಕ್ ವಿ.ಜಿ., ತುಹಿನಾ ಶರ್ಮಾ, ವಿ.ಎನ್.ಕುಮಾರ್ ಅರ್ಜುನನ್ ಮತ್ತು ಬಹುರೂಪಿಯ ಶ್ರೀಜಾ ಅವರ ಸಂಘಟನೆ ಅಪೂರ್ವವಾಗಿತ್ತು.