ಧಾರವಾಡ .5: ನವಲಗುಂದ ತಾಲ್ಲೂಕು ಮೊರಬ್ ಗ್ರಾಮದ ವಾಸಿ ಶಿಲ್ಪಾ ಹೊಳಲ್ ಅನ್ನುವವರ ಗಂಡ ಮಂಜುನಾಥ ಹೊಳಲ್ ರವರು ಹುಬ್ಬಳ್ಳಿಯ ಗೋಕುಲ್ ರಸ್ತೆಯ ಸ್ಟೇಟ್ ಬ್ಯಾಂಕ್‍ನಲ್ಲಿ ರೂ.2,10,000/-ಗಳ ಗೋಲ್ಡ್ ಲೋನ್ ತೆಗೆದುಕೊಂಡಿದ್ದರು. ಅಲ್ಲದೇ ಮಂಜುನಾಥರವರು ರೂ.5,60,000/- ವೈಯಕ್ತಿಕ ಸಾಲವನ್ನು ಅದೇ ಬ್ಯಾಂಕ್‍ನಿಂದ ಪಡೆದಿದ್ದರು. ಸಾಲ ಕೊಟ್ಟ ಸ್ಟೇಟ್ ಬ್ಯಾಂಕ್‍ನವರು ಆ ಎರಡರ ವೈಯಕ್ತಿಕ ಸಾಲಗಳ ಮೇಲೆ ಎಸ್‍ಬಿಆಯ್ ಜನರಲ್ ಇನ್ಸುರೆನ್ಸ್ ಮಾಡಿಸಿದ್ದರು. ನಂತರ ಮಂಜುನಾಥ ರೂ.2,10,000/- ಗೋಲ್ಡ್ ಲೋನ್ ಹಣ ಬ್ಯಾಂಕಿಗೆ ಮರು ಪಾವತಿಸಿದ್ದರು. ಈ ಮಧ್ಯದಲ್ಲಿ ಆತ ದಿ.28/01/2022 ರಂದು ಮಂಜುನಾಥ ಹೊಳಲ್ ನಿಧನ ಹೊಂದಿದ್ದರು.

ಗಂಡ ಮಂಜುನಾಥ ಸತ್ತ ನಂತರ ಅವರ ಹೆಂಡತಿ/ದೂರುದಾರಳಾದ ಶಿಲ್ಪಾ ಸಾಲ ಕೊಟ್ಟಿದ್ದ ಸ್ಟೇಟ್ ಬ್ಯಾಂಕ್ ಮತ್ತು ವಿಮೆ ಮಾಡಿದ್ದ ಎಸ್‍ಬಿಆಯ್ ವಿಮಾ ಕಂಪನಿಗೆ ರೂ.5,60,000/- ಗಳ ಸಾಲದ ಮೇಲೆ ವಿಮೆ ನೀಡುವಂತೆ ಕ್ಲೇಮ ಅರ್ಜಿ ಸಲ್ಲಿಸಿದ್ದಳು. ದೂರುದಾರಳ ಕೋರಿಕೆಯನ್ನು ಎದುರುದಾರ ಸ್ಟೇಟ್ ಬ್ಯಾಂಕ್ ಮತ್ತು ಎಸ್‍ಬಿಆಯ್ ವಿಮಾ ಕಂಪನಿಯವರು ಪರಿಗಣಿಸದೇ ತಿರಸ್ಕರಿಸಿದ್ದರು. ಸಾಲ ಪಾವತಿಆಗದೇ ಅಡ ಇಟ್ಟಿದ್ದ ಚಿನ್ನದ ಆಭರಣಗಳನ್ನು ಕೊಡುವುದಿಲ್ಲ ಅಂತಾ ಸ್ಟೇಟ್ ಬ್ಯಾಂಕ್‍ನವರು ಹೇಳಿದ್ದರು. ಅಂತಹ ಅವರಿಬ್ಬರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎಸ್‍ಬಿಆಯ್ ಬ್ಯಾಂಕ್ ಮತ್ತು ವಿಮಾ ಕಂಪನಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.30/03/2023 ರಂದು ದೂರು ಸಲ್ಲಿಸಿದ್ದರು.

ಸದರಿ ದೂರುಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ವಿಚಾರಣೆ ಮಾಡುವಾಗ ತಾವು ಕೊಟ್ಟ ಎಲ್ಲ ಸಾಲಗಳ ಮೇಲೆ ಸಾಲಗಾರರ ಆಸ್ತಿ, ಆಭರಣ ಇತ್ಯಾದಿಗಳ ಮೇಲೆ ತಮಗೆ ಹಕ್ಕು ಇರುತ್ತದೆ. ಈ ಕೇಸಿನಲ್ಲಿ ಗೋಲ್ಡ್ ಲೋನ್ ಸಾಲ ತೀರಿಸಿದ್ದರು ರೂ.5,60,000/- ವೈಯಕ್ತಿಕ ಸಾಲ ಇನ್ನೂ ಬಾಕಿ ಇರುವುದರಿಂದ ಚಿನ್ನದ ಆಭರಣಗಳನ್ನು ದೂರುದಾರರಿಗೆ ಕೊಡಲು ಬರುವುದಿಲ್ಲ ಅಂತಾ ಬ್ಯಾಂಕಿನವರು ಆಕ್ಷೇಪಣೆ ಎತ್ತಿದ್ದರು. ದೂರುದಾರರು ತಾವು ಕೇಳಿದ ದಾಖಲೆಗಳನ್ನು ಕೊಟ್ಟಿಲ್ಲ ಹಾಗೂ ಕ್ಲೇಮ ಅರ್ಜಿಯನ್ನು ತಡವಾಗಿ ಸಲ್ಲಿಸಿದ್ದಾರೆ ಅಂತ ಕಾರಣ ಹೇಳಿ ವಿಮಾ ಪರಿಹಾರ ನಿಗದಿಮಾಡಿಲ್ಲ ಅಂತಾ ವಿಮಾ ಕಂಪನಿಯವರು ಆಕ್ಷೇಪಣೆ ಎತ್ತಿದ್ದರು.

ಈ ಬಗ್ಗೆ ಉಭಯತರು ಹಾಜರು ಪಡಿಸಿದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಉಭಯತರವಾದ ವಿವಾದ ಕೇಳಿದಾಗ ರೂ.5 ಲಕ್ಷದ ಸಾಲದ ಮೇಲೆ ವಿಮೆ ಚಾಲ್ತಿ ಇರುತ್ತದೆ. ಸಾಲಗಾರ/ವಿಮಾದಾರ ಸತ್ತ ಮೇಲೆ ವಿಮಾ ಮೊತ್ತವನ್ನು ಅವರ ಸರಳ ವಾರಸುದಾರರಿಗೆ ಸಂದಾಯ ಮಾಡುವುದು ವಿಮಾ ಕಂಪನಿಯವರ ಕರ್ತವ್ಯವಾಗಿದೆ. ಆದರೇ ಈ ಕೇಸಿನಲ್ಲಿ ಎಸ್‍ಬಿಆಯ್ ವಿಮಾ ಕಂಪನಿ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ತೀರ್ಪು ನೀಡಿದ ದಿನಾಂಕ ದಿಂದ ರೂ.5 ಲಕ್ಷಕ್ಕೆ ಶೇ.8% ರಂತೆ ಬಡ್ಡಿ ಲೆಕ್ಕ ಹಾಕಿ ಒಂದು ತಿಂಗಳ ಒಳಗಾಗಿ ವಿಮಾ ಪರಿಹಾರ ಮೃತ ಸಾಲಗಾರನ ಖಾತೆಗೆ ಜಮಾ ಮಾಡುವಂತೆ ವಿಮಾ ಕಂಪನಿಗೆ ಆಯೋಗ ನಿರ್ದೇಶಿಸಿದೆ. ವಿಮಾ ಕಂಪನಿ ಪರಿಹಾರ ಸಂದಾಯ ಮಾಡಿದ ಮೇಲೆ ಬ್ಯಾಂಕಿನವರು ದೂರುದಾರ ರಿಂದ ಬರಬೇಕಾದ ಹೆಚ್ಚಿನ ಸಾಲದ ಬಾಕಿ ಹಣ ಪಡೆದು ದೂರುದಾರರಿಗೆ ಒಂದು ತಿಂಗಳ ಒಳಗಾಗಿ ಅವರ ಎಲ್ಲ ಚಿನ್ನದ ಆಭರಣಗಳನ್ನು ಹಿಂದಿರುಗಿಸುವಂತೆ ಎಸ್‍ಬಿಆಯ್ ಬ್ಯಾಂಕಿಗೆ ಸೂಚಿಸಿದೆ. ಜೊತೆಗೆ ದೂರುದಾರಳಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗಾಗಿ ರೂ.50,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/- ಕೊಡುವಂತೆ ವಿಮಾ ಕಂಪನಿಗೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.


LEAVE A REPLY

Please enter your comment!
Please enter your name here