ಬೆಂಗಳೂರು ನಗರ ಜಿಲ್ಲೆ ಜ.23: ಭಾರತ ಸಂವಿಧಾನದ ಆಶಯ, ಮೌಲ್ಯಗಳ ಕುರಿತು ಜನಸಾಮಾನ್ಯರಿಗೆ ತಿಳಿಸುವ ಮೂಲ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಸಂಘಟನೆಗಳು ಸಹಕರಿಸುವಂತೆ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಾದ ಕಾಂತರಾಜು ಪಿ.ಎಸ್ ಅವರು ಮನವಿ ಮಾಡಿದರು.
ಇಂದು ಬನಶಂಕರಿಯಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಪೂರ್ವ ಸಿದ್ದತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ಜ.26 ರಿಂದ ಫೆ.23 ರವರೆಗೆ ಏಕಕಾಲದಲ್ಲಿ ರಾಜ್ಯ ಮಟ್ಟದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜ.26 ರಂದು ಜಿಲ್ಲಾ ಉಸ್ತುವಾರಿ ಸಚಿವರು ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.
ಈ ಜಾಥಾದಲ್ಲಿ ಸಂವಿಧಾನ ಪೀಠಿಕೆ ಕುರಿತ ಸ್ತಬ್ಧ ಚಿತ್ರ ಒಳಗೊಂಡ ಒಂದು ಟ್ಯಾಬ್ಲೊ ಹಾಗೂ 1 ಲಕ್ಷ ಕರಪತ್ರವನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಆನೇಕಲ್ ತಾಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ 10 ದಿನಗಳ ಕಾಲ, ಬೆಂಗಳೂರು ಉತ್ತರದ 11 ಗ್ರಾಮ ಪಂಚಾಯಿತಿ, ಯಲಹಂಕದ 18 ಗ್ರಾಮ ಪಂಚಾಯಿತಿ, ಬೆಂಗಳೂರು ಪಶ್ಚಿಮದಲ್ಲಿ 11 ಗ್ರಾಮ ಪಂಚಾಯಿತಿಗಳಲ್ಲಿ ತಲಾ 6 ದಿನಗಳ ವಾಹನ ಸಂಚರಿಸಲಿದ್ದು, ಕ್ರಿಡಾ ಪಟುಗಳನ್ನು ಪ್ರತಿನಿಧಿಯಾಗಿ ನಿಯೋಜಿಸಾಲಾಗಿದೆ ಎಂದು ಮಾಹಿತಿ ನೀಡಿದರು.
ದಲಿತ ಸಂಘಟನೆ ಅಧ್ಯಕ್ಷರು ಮಾತನಾಡಿ ಸ್ತಬ್ದ ಚಿತ್ರದ ಎಲ್ ಇ ಡಿ ವಾಹನವನ್ನು ಗ್ರಾಮಗಳಲ್ಲಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವಂತೆ ಮನವಿ ಮಾಡಿದರು.
ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಲಕ್ಷ್ಮಣ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಯಾದ ವಿನೂತ ರಾಣಿ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.